100 ದಿನಗಳ ಆಡಳಿತ ಪೂರೈಸಿದ ಸಿದ್ದರಾಮಯ್ಯ ಸರ್ಕಾರಕ್ಕೆ ಹಲವು ಸವಾಲು: ಪಕ್ಷದೊಳಗೆ ಆಂತರಿಕ ಭಿನ್ನಮತ ಶಮನ ಮಾಡುವ ಚಿಂತೆ

ಅಧಿಕಾರಕ್ಕೆ ಬಂದ ಮೂರ್ನಾಲ್ಕು ತಿಂಗಳಿನಲ್ಲಿಯೇ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೂರನ್ನು ಜಾರಿ ಮಾಡಿ ಸರ್ಕಾರದ ಬಗ್ಗೆ ಉತ್ತಮ ಜನಾಭಿಪ್ರಾಯ ಕೇಳಿಬರುತ್ತಿರುವಾಗಲೇ ಸಿದ್ದರಾಮಯ್ಯ ಸರ್ಕಾರವು ಈಗ ರಾಜಕೀಯವಾಗಿ ಅನೇಕ ರಂಗಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಅಧಿಕಾರಕ್ಕೆ ಬಂದ ಮೂರ್ನಾಲ್ಕು ತಿಂಗಳಿನಲ್ಲಿಯೇ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೂರನ್ನು ಜಾರಿ ಮಾಡಿ ಸರ್ಕಾರದ ಬಗ್ಗೆ ಉತ್ತಮ ಜನಾಭಿಪ್ರಾಯ ಕೇಳಿಬರುತ್ತಿರುವಾಗಲೇ ಸಿದ್ದರಾಮಯ್ಯ ಸರ್ಕಾರವು ಈಗ ರಾಜಕೀಯವಾಗಿ ಅನೇಕ ರಂಗಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ.

ಸಿದ್ದರಾಮಯ್ಯ ಸಂಪುಟದ ಸಚಿವರ ವಿರುದ್ಧದ ಪ್ರಥಮ ಮಾಹಿತಿ ವರದಿ (FIR) ದಾಖಲಾಗಿದ್ದು, ಅದಕ್ಕೆ ಸರ್ಕಾರದ ಪ್ರತಿಕ್ರಿಯೆಯು ಕೆಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಇತ್ತೀಚೆಗಷ್ಟೇ 100 ದಿನಗಳನ್ನು ಪೂರೈಸಿದ ಸರ್ಕಾರಕ್ಕೆ ಸಚಿವ ಡಿ ಸುಧಾಕರ್ ಪ್ರಕರಣ ಭಾರಿ ಮುಖಭಂಗವಾಗಿದ್ದು, ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಸಚಿವರು ಹಲ್ಲೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿ ನೀಡಿದ ದೂರಿನ ಮೇರೆಗೆ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಗಳನ್ನು ತಳ್ಳಿಹಾಕಿರುವ ಸಚಿವರ ವಿರುದ್ಧ ನ್ಯಾಯಾಲಯವು ಪ್ರಕರಣದ ವಿಚಾರಣೆಗೆ ತಡೆ ನೀಡಿದೆ.

ಆದರೆ, ಈ ಬೆಳವಣಿಗೆಯು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ಗೆ ಸರ್ಕಾರವನ್ನು ದಲಿತ ವಿರೋಧಿ ಎಂದು ಟೀಕಿಸಲು ಅವಕಾಶ ಸಿಕ್ಕಂತಾಗಿದೆ. ಸಚಿವರು ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿರುವ ವೀಡಿಯೊ ತುಣುಕುಗಳು ವೈರಲ್ ಆಗುತ್ತಿದ್ದಂತೆ, ಪ್ರತಿಪಕ್ಷಗಳು ಸಿಎಂ ಸಿದ್ದರಾಮಯ್ಯ ಅವರು ಸಚಿವ ಸುಧಾಕರ್ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವಂತೆ ಒತ್ತಾಯಿಸಿದ್ದಲ್ಲದೆ ಅವರನ್ನು ಬಂಧಿಸುವಂತೆ ಆಗ್ರಹಿಸಿವೆ. ಪ್ರಕರಣದ ಅರ್ಹತೆಗಳನ್ನು ನ್ಯಾಯಾಲಯಗಳು ಪರಿಶೀಲಿಸುತ್ತವೆ. ಆದರೆ, ಸರ್ಕಾರದ ತಕ್ಷಣದ ಪ್ರತಿಕ್ರಿಯೆ ಹಲವು ಅಚ್ಚರಿ, ಸಂಶಯಗಳನ್ನು ಹುಟ್ಟುಹಾಕುತ್ತಿದೆ.

ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ತನಿಖೆಗೆ ಮುನ್ನವೇ ಇದೊಂದು ಸುಳ್ಳು ಪ್ರಕರಣ ಎಂದು ಹೇಳಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಆಗಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಸಚಿವ ಕೆಎಸ್ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿದ್ದಕ್ಕಾಗಿ ಬಿಜೆಪಿ ನಾಯಕರನ್ನು ಪ್ರಶ್ನಿಸಿದಾಗ 2022 ರಲ್ಲಿ ಅವರ ಪಕ್ಷವು ತೆಗೆದುಕೊಂಡ ನಿಲುವಿಗೆ ರಾಜೀನಾಮೆ ನೀಡಿದ್ದರು. ಆಗ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಈಶ್ವರಪ್ಪ ಪ್ರಕರಣವನ್ನು ತೀವ್ರವಾಗಿ ಖಂಡಿಸಿತ್ತು, ಆದರೆ ಈಗ ಕಾಂಗ್ರೆಸ್ ನಾಯಕರೇ ಬದ್ಧತೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷವಾಗಿರುವ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಇದು ಕಾಂಗ್ರೆಸ್ ನಾಯಕರನ್ನು ಮುಜುಗರಕ್ಕೆ ಮತ್ತು ಇಕ್ಕಟ್ಟಿಗೆ ಸಿಲುಕಿಸಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಾರ್ವಜನಿಕವಾಗಿ ಟೀಕಿಸಿದ್ದಕ್ಕಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (CWC) ಖಾಯಂ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರಿಗೆ ಎಐಸಿಸಿ ಶಿಸ್ತು ಕ್ರಮ ಸಮಿತಿ ನೋಟಿಸ್‌ ಜಾರಿ ಮಾಡುವುದರೊಂದಿಗೆ ರಾಜಕೀಯ ರಂಗದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರ ಆಂತರಿಕ ಭಿನ್ನಾಭಿಪ್ರಾಯ ಬಹಿರಂಗವಾಗಿದೆ. 

ಕಾಂಗ್ರೆಸ್‌ನ ಕೇಂದ್ರ ನಾಯಕತ್ವವು ಹರಿಪ್ರಸಾದ್ ವಿರುದ್ಧ ದೂರುಗಳನ್ನು ಸ್ವೀಕರಿಸಿದ ನಂತರ ನೋಟಿಸ್ ನೀಡಲಾಗಿದೆ. ಪಕ್ಷಕ್ಕೆ, ಅದರ ನಾಯಕತ್ವಕ್ಕೆ ಮತ್ತು ಸಿದ್ಧಾಂತಕ್ಕೆ ಹಿರಿಯ ನಾಯಕನ ಬದ್ಧತೆ ಅಚಲವಾಗಿದೆ, ಆದರೆ ಅವರ ಹೇಳಿಕೆಗಳು ಅನೇಕರನ್ನು, ವಿಶೇಷವಾಗಿ ಸಿದ್ದರಾಮಯ್ಯನವರ ಅನುಯಾಯಿಗಳನ್ನು ಕೆರಳಿಸಿದೆ.

ಹರಿಪ್ರಸಾದ್ ಅವರ ಅಸಮಾಧಾನಕ್ಕೆ ಕಾರಣಗಳೇನೇ ಇರಲಿ, ಅವರು ಬಹಿರಂಗವಾಗಿ ಟೀಕೆ ಮಾಡುತ್ತಿರುವುದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನಗಳ ಗೆಲುವಿನ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಇದು ಖಂಡಿತಾ ಉತ್ತಮ ಬೆಳವಣಿಗೆಯಲ್ಲ.  ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸದ ಹೊರತು, ಕಾಂಗ್ರೆಸ್ ಭಾರತದಾದ್ಯಂತ ಕರ್ನಾಟಕ ಮಾದರಿಯನ್ನು ತೋರಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಇದು ಕಿರಿಕಿರಿಯನ್ನುಂಟುಮಾಡುತ್ತದೆ.

ಇದೀಗ ಉಪಮುಖ್ಯಮಂತ್ರಿ ಹುದ್ದೆಗಳನ್ನು ಹೆಚ್ಚು ಸೃಷ್ಟಿಸಬೇಕು ಎಂಬ ಪಕ್ಷದೊಳಗಿನ ಕೆಲ ವಲಯಗಳ ಬೇಡಿಕೆಯೂ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಹೊಸ ತಲೆನೋವಾಗಿ ಪರಿಣಮಿಸಬಹುದು. ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾದರೆ ನಾಯಕತ್ವವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು.

ಆಡಳಿತ ಪಕ್ಷವು ರಾಜಕೀಯ ಸವಾಲುಗಳನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದ್ದರೂ, ಆಡಳಿತಾತ್ಮಕವಾಗಿ, ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಿದ್ದರಾಮಯ್ಯ ಸರ್ಕಾರವು ಯುದ್ಧೋಪಾದಿಯಲ್ಲಿ ಸಾಗಬೇಕಾಗಿದೆ.

ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸಿ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಮತ್ತು ಜಿಲ್ಲಾಧಿಕಾರಿಗಳಿಂದ ತಳಮಟ್ಟದಲ್ಲಿ ಸತ್ಯಶೋಧನಾ ವರದಿಗಳನ್ನು ಪಡೆಯಲಾಗಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಕಾರ್ಯೋನ್ಮುಖವಾಗಿದೆ.

ಆದರೆ, ಕೇಂದ್ರಕ್ಕೆ ವರದಿ ಕಳುಹಿಸುವುದು, ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿ ಅನುದಾನ ಬಿಡುಗಡೆ ಮಾಡುವ ಪ್ರಕ್ರಿಯೆಗಳು ಸ್ವಲ್ಪ ಸಮಯ ಹಿಡಿಯಬಹುದು, ರಾಜ್ಯ ಸರ್ಕಾರವು ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಹಾರ ಕಾರ್ಯಗಳನ್ನು ತಕ್ಷಣ ಪ್ರಾರಂಭಿಸಬೇಕು. ಗ್ಯಾರಂಟಿಗಳನ್ನು ಹೊರತರುವಲ್ಲಿ ಹೆಚ್ಚು ಗಮನಹರಿಸಿರುವ ಆಡಳಿತವು ಬರ ಪರಿಹಾರ ಕಾರ್ಯದಲ್ಲೂ ಅದೇ ಹುರುಪು ತೋರಬೇಕಾಗಿದೆ. ಇದು ರಾಜ್ಯಾದ್ಯಂತ ಹಲವು ಇಲಾಖೆಗಳ ಪ್ರಯತ್ನವಾಗಲಿದೆ.

ಅಲ್ಲದೆ, ದೀರ್ಘಾವಧಿಯಲ್ಲಿ ರೈತರಿಗೆ ಸಹಾಯ ಮಾಡಲು ಬರ ಪರಿಹಾರ ಕಾಮಗಾರಿಗಳನ್ನು ಬಳಸಿಕೊಳ್ಳುವ ಸಾಧ್ಯತೆಯನ್ನು ಸರ್ಕಾರ ನೋಡಬಹುದು. ಇದು ಕೇಂದ್ರ ಮತ್ತು ರಾಜ್ಯಗಳ ಸಮಸ್ಯೆಯಾಗಬಾರದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರ ಪ್ರದೇಶಗಳಲ್ಲಿನ ಜನರಿಗೆ ಸಹಾಯ ಮಾಡಲು ಧಾವಿಸಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com