ರೇವಣ್ಣಗೆ ಹಿನ್ನಡೆ: ಹಾಸನ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಬೆಂಬಲಿತ ಸ್ವರೂಪ್ ಪರ ದೇವಗೌಡರ ಒಲವು

ಹಾಸನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಕುಟುಂಬ ಸದಸ್ಯರ ನಡುವಿನ ಶೀತಲ ಸಮರ ರಾಜ್ಯದ ಗಮನ ಸೆಳೆದಿತ್ತು. ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ.
ರೇವಣ್ಣ-ದೇವೆಗೌಡ-ಕುಮಾರಸ್ವಾಮಿ
ರೇವಣ್ಣ-ದೇವೆಗೌಡ-ಕುಮಾರಸ್ವಾಮಿ

ಹಾಸನ: ಹಾಸನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಕುಟುಂಬ ಸದಸ್ಯರ ನಡುವಿನ ಶೀತಲ ಸಮರ ರಾಜ್ಯದ ಗಮನ ಸೆಳೆದಿತ್ತು. ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. 

ಪ್ರಮುಖ ಬೆಳವಣಿಗೆಯೊಂದರಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರು ತಮ್ಮ ಪುತ್ರ ಎಚ್.ಡಿ ರೇವಣ್ಣಗೆ ದೊಡ್ಡ ಶಾಕ್ ನೀಡಿದ್ದು, ಹಾಸನ ಕ್ಷೇತ್ರಕ್ಕೆ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ನಿರ್ಧಾರವನ್ನು ಎತ್ತಿ ಹಿಡಿದಿದ್ದಾರೆ. ಹಾಸನ ಕ್ಷೇತ್ರದ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಹೆಚ್.ಡಿ ರೇವಣ್ಣ ಮತ್ತು ಭವಾನಿ ಅವರ ಅನುಯಾಯಿಗಳು ಭೇಟಿಯಾದ ಬಳಿಕ ಹೆಚ್.ಡಿ ದೇವೇಗೌಡ ಈ ಮೂಲಕ ಪುತ್ರ ಹೆಚ್.ಡಿ.ರೇವಣ್ಣ, ಸೊಸೆ ಭವಾನಿ ಮತ್ತು ಮೊಮ್ಮಕ್ಕಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದರು. 

ಹಾಸನ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಪತ್ನಿ ಭವಾನಿ ಪರವಾಗಿ ಸವಾಲೆಸೆದಿದ್ದ ಹೆಚ್.ಡಿ ರೇವಣ್ಣ ಅವರಿಗೆ ದೇವೇಗೌಡರ ಈ ನಿರ್ಧಾರದಿಂದ ಭಾರೀ ಹಿನ್ನಡೆಯಾಗಿದೆ ಎನ್ನಲಾಗುತ್ತಿದೆ. ಹಾಸನ ಸೀಟು ವಿವಾದವಾಗಿ ಗೌಡರ ಕುಟುಂಬದಲ್ಲಿ ಭಿನ್ನಾಭಿಪ್ರಾಯಕ್ಕೆ ನಾಂದಿ ಹಾಡಿದ ಬೆನ್ನಲ್ಲೇ ಎಚ್‌ಡಿ ಕುಮಾರಸ್ವಾಮಿ ಹಾಗೂ ಹೆಚ್‌ಡಿ ರೇವಣ್ಣ ನಡುವೆ ವಾಗ್ವಾದ ನಡೆದಿತ್ತು. ಭವಾನಿ ಅಭ್ಯರ್ಥಿಯಾಗುವುದಕ್ಕೆ ಜೆಡಿಎಸ್ ವರಿಷ್ಠರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹೆಚ್.ಡಿ ರೇವಣ್ಣ ಬೆಂಬಲಿಗರೊಂದಿಗೆ ಹಾಸನ ಕ್ಷೇತ್ರಕ್ಕೆ ಅವರನ್ನು ಕಣಕ್ಕಿಳಿಸುವ ಸಾಧಕ-ಬಾಧಕಗಳನ್ನು ವಿವರಿಸಿದ್ದಾರೆ ಎಂದು ಗೌಡರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. 

ಹೆಚ್.ಡಿ ಕುಮಾರಸ್ವಾಮಿ ಅವರು ಇತ್ತೀಚೆಗೆ ದೇವೇಗೌಡರನ್ನು ಭೇಟಿಯಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಟುಂಬದವರಿಗೆ ಟಿಕೆಟ್ ನೀಡುತ್ತಿದ್ದರೆ ಅದು ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಹೆಚ್.ಡಿ ರೇವಣ್ಣ, ಭವಾನಿ, ಪ್ರಜ್ವಲ್, ಸೂರಜ್ ಮತ್ತು ಗೌಡರ ಗೌಪ್ಯ ಸಭೆಯೂ ಗೌಡರೊಂದಿಗೆ ನಡೆದಿದ್ದು, ಭವಾನಿ ಅಭ್ಯರ್ಥಿಯಾದರೆ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿದರು. ಇದೇ ವೇಳೆ ದಾಸವೊಕ್ಕಲಿಗ ಕೆ.ಎಂ ರಾಜೇಗೌಡ ಅವರ ಉಮೇದುವಾರಿಕೆಯನ್ನು ಗೌಡರು ನಿರಾಕರಿಸಿದರು. ಹೆಚ್.ಡಿ.ರೇವಣ್ಣ ಬೆಂಬಲಿಗರಾದ ಸೈಯದ್ ಅಕ್ಬರ್, ಸತೀಶ್ ಮತ್ತು ಎಸ್.ದ್ಯಾವೇಗೌಡ ಗೌಡರನ್ನು ಭೇಟಿ ಮಾಡಿದರು. ಜೆಡಿಎಸ್ ಹಾಲಿ ಶಾಸಕರಾದ ಕೆ.ಎಸ್.ಲಿಂಗೇಶ್ ಮತ್ತು ಎಚ್.ಕೆ.ಕುಮಾರಸ್ವಾಮಿ ಕೂಡ ಭವಾನಿ ಪರ ಬ್ಯಾಟಿಂಗ್ ಮಾಡಿದ್ದರು. ಈ ಹಂತದಲ್ಲಿ ಎಚ್.ಪಿ.ಸ್ವರೂಪ್ ಅವರ ಉಮೇದುವಾರಿಕೆಗೆ ಎಚ್.ಡಿ.ರೇವಣ್ಣ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಸಭೆಯಲ್ಲಿ ಗೌಡರು ರೇವಣ್ಣ ಅನುಯಾಯಿಗಳಿಗೆ ದಾಸವೊಕ್ಕಲಿಗ ಉಪಜಾತಿಯಾದ ಎಚ್‌ಪಿ ಸ್ವರೂಪ್ ಅವರನ್ನು ಒಕ್ಕಲಿಗ ಉಪಜಾತಿಯಾಗಿ ಕಣಕ್ಕಿಳಿಸುವಂತೆ ಹೇಳಿದರು. ಇದು ಹಾಸನ ಮತ್ತು ಹಲವಾರು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಸಹಾಯ ಮಾಡುತ್ತದೆ. ತಮ್ಮ ರಾಜಕೀಯ ಜೀವನದಲ್ಲಿ ಪ್ರಥಮ ಬಾರಿಗೆ ಹಾಸನ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ ಭರವಸೆಯನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಎಚ್‌ಪಿ ಸ್ವರೂಪ್ ಹೆಸರು ಪ್ರಕಟವಾಗುವ ಸಾಧ್ಯತೆ ಇದೆ.

ಹಾಸನ ಜಿಲ್ಲಾ ರಾಜಕಾರಣದಲ್ಲಿ ಎಚ್.ಡಿ.ಕುಮಾರಸ್ವಾಮಿಗೆ ಗೌಡರು ಆದ್ಯತೆ ನೀಡಿದ್ದರಿಂದ ಹಾಸನ ಸೀಟು ವಿಚಾರವನ್ನು ಸವಾಲಾಗಿ ತೆಗೆದುಕೊಂಡ ಹೆಚ್.ಡಿ.ರೇವಣ್ಣ ಅವರ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ. ಭವಾನಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಭವಾನಿ ರೇವಣ್ಣ ಬೆಂಬಲಿಗರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಕಾರ ಶೀಘ್ರದಲ್ಲೇ ಪ್ರಕಟಿಸಲಾದ ಎರಡನೇ ಪಟ್ಟಿಯಲ್ಲಿ ಹಾಸನದ ಅಭ್ಯರ್ಥಿಯ ಹೆಸರನ್ನು ಸೇರಿಸಲಾಗುವುದು. ಆದರೆ, ಎಚ್.ಪಿ.ಸ್ವರೂಪ್ ಅವರನ್ನು ಬೆಂಬಲಿಸುವ ಅಥವಾ ಪ್ರಚಾರದಿಂದ ಅಂತರ ಕಾಯ್ದುಕೊಳ್ಳುವ ಎಚ್.ಡಿ.ರೇವಣ್ಣ, ಭವಾನಿ, ಪ್ರಜ್ವಲ್ ಮತ್ತು ಸೂರಜ್ ನಿರ್ಧಾರದ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com