
ಸಿಎಂ ಬೊಮ್ಮಾಯಿ, ರಣದೀಪ್ ಸುರ್ಜೇವಾಲ
ಬೆಂಗಳೂರು: ಮೀಸಲಾತಿ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮೀಸಲಾತಿ ನೀಡಿರುವುದಕ್ಕೆ ಕಾಂಗ್ರೆಸ್ ನಾಯಕರು ಅಕ್ರಮ, ಸಂವಿಧಾನ ವಿರೋಧಿ ಪದ ಬಳಸಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ವಕ್ತಾರ ಮತ್ತು ರಾಜ್ಯ ಉಸ್ತುವಾರಿ ಸುರ್ಜೇವಾಲ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಲು ಡಾ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದರು. ಅದರಂತೆ, ರಾಜ್ಯ ಸರ್ಕಾರ ಎಸ್‌ಸಿ/ಎಸ್‌ಟಿ ಸಮುದಾಯಗಳ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದು, ಸಂವಿಧಾನದ ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸಲು ಶಿಫಾರಸು ಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಅವರು ಬರೆದಿರುವ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದರು.
ಕಾನೂನಾತ್ಮಕವಾಗಿ ಪರಿಚ್ಛೇದ-9 ಕ್ಕೂ ಸಹ ಶಿಫಾರಸ್ಸು ಮಾಡಿದ್ದೇವೆ. ಆದರೇ ಇದನ್ನು ಸಹಿಸಿದ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಬಹಳ ಕೀಳು ಪದಗಳನ್ನು ಬಳಸಿ ಟ್ವೀಟ್ ಮಾಡಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ.
— Basavaraj S Bommai (@BSBommai) April 3, 2023
2/2
ಬಿಜೆಪಿ ಈಗ ಜನರಿಗೆ ದ್ರೋಹ ಬಗೆದ ಪಕ್ಷವಾಗಿದೆ. 420 ಬಿಜೆಪಿ ಬೊಮ್ಮಾಯಿ ಸರ್ಕಾರದ ಮೀಸಲಾತಿ ದ್ವೇಷ, ವೈಷಮ್ಯ ಮತ್ತು ಘರ್ಷಣೆಯನ್ನು ಸೃಷ್ಟಿಸುವ ಕುಶಲ ರಾಜಕೀಯವನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ: ಪ್ರಜಾಪ್ರಭುತ್ವ ಮೌಲ್ಯಗಳ ಕೊಗ್ಗೊಲೆ ಎಂದು ಸುರ್ಜೇವಾಲಾ ಕಿಡಿ
ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಏನನ್ನೂ ಮಾಡಿಲ್ಲ ಮತ್ತು ಅವರನ್ನು ಮತ ಬ್ಯಾಂಕ್‌ಗಾಗಿ ಬಳಸಿಕೊಂಡಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ನಾಲ್ಕು ವರ್ಷಗಳ ಹಿಂದೆ ಸಲ್ಲಿಸಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ ಸರ್ಕಾರ ಆಯೋಗದ ಅವಧಿಯನ್ನು ಆರು ತಿಂಗಳು ವಿಸ್ತರಿಸಿದೆ ಎಂಬುದು ಸತ್ಯ ಎಂದು ಮುಖ್ಯಮಂತ್ರಿ ತಿಳಿಸಿದರು.
"ತಮ್ಮ ಆಡಳಿತಾವಧಿಯಲ್ಲಿ ಸರ್ವಪಕ್ಷ ಸಭೆ ಕರೆದು ಒಪ್ಪಿಗೆ ನೀಡಲಾಯಿತು. ನಂತರ ರಾಜ್ಯ ಸಚಿವ ಸಂಪುಟದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಗಳ ಪರವಾಗಿ ನಿರ್ಣಯ ಕೈಗೊಳ್ಳಲಾಯಿತು. ಶೆಡ್ಯೂಲ್ 9 ಸೇರ್ಪಡೆ ಶಿಫಾರಸ್ಸನ್ನೂ ಮಾಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.