'ಕಮಲ'ದ ಕೈಹಿಡಿಯಲಿದ್ದಾರಾ ಕಿಚ್ಚ ಸುದೀಪ್?: ಇಂದು ಅಧಿಕೃತ ಮಾಹಿತಿ ಸಿಗುವ ಸಾಧ್ಯತೆ

ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಮುನ್ನ ಒಂದಷ್ಟು ನಾಯಕರು ಪಕ್ಷ ಬಿಟ್ಟು ಹೋಗುವುದು, ಪಕ್ಷಕ್ಕೆ ಸೇರ್ಪಡೆಯಾಗುವುದು ಸಾಮಾನ್ಯ. ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಕಿಚ್ಚ ಸುದೀಪ್ ಮತ್ತು ತೂಗುದೀಪ ದರ್ಶನ್ ಪ್ರಮುಖರಾಗಿದ್ದಾರೆ. 
ಕಿಚ್ಚ ಸುದೀಪ್
ಕಿಚ್ಚ ಸುದೀಪ್
Updated on

ಬೆಂಗಳೂರು: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಮುನ್ನ ಒಂದಷ್ಟು ನಾಯಕರು ಪಕ್ಷ ಬಿಟ್ಟು ಹೋಗುವುದು, ಪಕ್ಷಕ್ಕೆ ಸೇರ್ಪಡೆಯಾಗುವುದು ಸಾಮಾನ್ಯ. ಖ್ಯಾತ ಚಲನಚಿತ್ರ ತಾರೆಯರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು, ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಪಕ್ಷಗಳ ನಾಯಕರು ಪ್ರಯತ್ನಿಸುತ್ತಾರೆ. 

ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಕಿಚ್ಚ ಸುದೀಪ್ ಮತ್ತು ತೂಗುದೀಪ ದರ್ಶನ್ ಅವರನ್ನು ಹಿಂದಿನಿಂದಲೂ ಪ್ರಮುಖ ಪಕ್ಷಗಳ ನಾಯಕರು ಸಂಪರ್ಕಿಸುತ್ತಿದ್ದರು. ಕೆಲ ಸಮಯದ ಹಿಂದೆ ಕಿಚ್ಚ ಸುದೀಪ್ ಕಾಂಗ್ರೆಸ್ ಗೆ ಸೇರುತ್ತಾರೆ ಎಂದು ಸುದ್ದಿಯಾಗಿತ್ತು. ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ನಂತರ ಕಿಚ್ಚ ಸುದೀಪ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ ಆ ಸುದ್ದಿ ತಣ್ಣಗಾಯಿತು. 

ಇದೀಗ ಬಂದಿರುವ ಹೊಸ ಸುದ್ದಿ ಕಿಚ್ಚ ಸುದೀಪ್ ಇಂದು ಮಧ್ಯಾಹ್ನ ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಾರೆ ಎನ್ನುವುದು. ಇನ್ನು ಅವರ ಒಂದು ಕಾಲದ ಕುಚ್ಚಿಕ್ಕು ಗೆಳೆಯ ದರ್ಶನ್ ತೂಗುದೀಪ ಸಹ ಬಿಜೆಪಿಗೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವು ಹಿಟ್ ಚಿತ್ರಗಳನ್ನು ನೀಡಿರುವ ಈ ಇಬ್ಬರು ಕಲಾವಿದರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕನ್ನಡಿಗರಿಗೆ ಚಿರಪರಿಚಿತರು. ಅಲ್ಲದೆ ಹಲವು ರಾಜಕೀಯ ನಾಯಕರುಗಳ ಜೊತೆ ಉತ್ತಮ ಒಡನಾಟ, ಬಾಂಧವ್ಯ ಹೊಂದಿದ್ದಾರೆ.

ಇಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಅಚ್ಚರಿಯ ಸಂಗತಿಯೆಂದರೆ ಕಿಚ್ಚ ಸುದೀಪ್(Kichcha Sudeepa) ಇಂದು ಅಂದರೆ ಏಪ್ರಿಲ್ 5ರಂದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎನ್ನುವುದು. ಎಎನ್ಐ ಸುದ್ದಿಸಂಸ್ಥೆಯ ವರದಿ ಪ್ರಕಾರ, ಕಿಚ್ಚ ಸುದೀಪ್  ಇಂದು ಮಧ್ಯಾಹ್ನ 1.30ರಿಂದ 2.30ರ ನಡುವೆ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಬಿಜೆಪಿ ಬಾವುಟ ಹಿಡಿಯಲಿದ್ದಾರೆ ಎನ್ನುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಮ್ಮುಖದಲ್ಲಿ ಕಿಚ್ಚ ಸುದೀಪ್ ಬಿಜೆಪಿಗೆ ಸೇರುತ್ತಾರೆ ಎಂಬ ಮಾಹಿತಿ ಸಿಕ್ಕಿದೆ.

ಇಂದು ಸುದೀಪ್ ಸುದ್ದಿಗೋಷ್ಠಿ?: ಈ ಎಲ್ಲಾ ವದಂತಿಗಳ ನಡುವೆ ಕಿಚ್ಚ ಸುದೀಪ್ ಅವರು ಇಂದು ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಅವರು ಯಾವ ವಿಷಯದ ಬಗ್ಗೆ ಮಾತನಾಡಲಿದ್ದಾರೆ, ತಮ್ಮ ರಾಜಕೀಯ ನಿಲುವು ಪ್ರಕಟಿಸಲಿದ್ದಾರೆಯೇ ಎಂಬುದನ್ನು ನೋಡಬೇಕಿದೆ.

ದರ್ಶನ್ ಕೂಡ ಬಿಜೆಪಿ ಸೇರ್ಪಡೆ?: ಇನ್ನೊಂದೆಡೆ ಮತ್ತೊಬ್ಬ ಖ್ಯಾತ ನಟ, ಅಭಿಮಾನಿಗಳ ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ದರ್ಶನ್ ತೂಗುದೀಪ(Darshan Thoogudeepa) ಸಹ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಸಹ ಕೇಳಿಬರುತ್ತಿದೆ. 

ಈ ಇಬ್ಬರೂ ಬಿಜೆಪಿಗೆ ಸೇರ್ಪಡೆಯಾದರೆ ಕೇಸರಿ ಪಕ್ಷಕ್ಕೆ ಒಂದಷ್ಟು ಬಲ ಸಿಗಬಹುದು ಎಂದು ವಿಮರ್ಶಿಸಲಾಗುತ್ತಿದೆ. ಅಥವಾ ಈ ಬಾರಿ ಚುನಾವಣೆಯಲ್ಲಿ ಕೇವಲ ಸ್ಟಾರ್ ಪ್ರಚಾರಕರಾಗುತ್ತಾರೆಯೇ ಎಂಬುದು ಮುಖ್ಯವಾಗಿದೆ. ಒಂದು ವೇಳೆ ಸೇರ್ಪಡೆಯಾದರೆ ಅವರ ಅಭಿಮಾನಿ ಬಳಗ ಹೇಗೆ ಸ್ವೀಕರಿಸುತ್ತಾರೆ, ಈ ಇಬ್ಬರು ಕಲಾವಿದರ ಮುಂದಿನ ಸಿನಿಮಾ ಮತ್ತು ರಾಜಕೀಯ ವೃತ್ತಿಬದುಕು ಹೇಗೆ ಸಾಗಲಿದೆ ಎಂಬುದು ಕುತೂಹಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com