ಕರ್ನಾಟಕ ವಿಧಾನಸಭೆ ಚುನಾವಣೆ: ಇಂದಿನಿಂದ ಅಭ್ಯರ್ಥಿಗಳ ನಾಮಪತ್ರಿಕೆ ಸಲ್ಲಿಕೆ ಆರಂಭ, ಆನ್ ಲೈನ್ ನಲ್ಲಿ ಸಲ್ಲಿಸಲು ಅವಕಾಶ

ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮುಂದಿನ ತಿಂಗಳು ಮೇ 10ರಂದು ಏಕದಿನ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಇಂದು ಏಪ್ರಿಲ್ 13ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿ ಏಪ್ರಿಲ್ 20ರವರೆಗೆ ಮುಂದುವರಿಯಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮುಂದಿನ ತಿಂಗಳು ಮೇ 10ರಂದು ಏಕದಿನ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಇಂದು ಏಪ್ರಿಲ್ 13ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿ ಏಪ್ರಿಲ್ 20ರವರೆಗೆ ಮುಂದುವರಿಯಲಿದೆ.

ರಾಜ್ಯದ ವಿವಿಧ ಪಕ್ಷಗಳ ರಾಜಕೀಯ ನಾಯಕರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಚುನಾವಣಾ ಪ್ರಚಾರದ ನಡುವೆ ಆರಂಭವಾಗಿದೆ. ನಾಳೆ ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಮತ್ತು 16 ರಂದು ಭಾನುವಾರ ಸಾರ್ವತ್ರಿಕ ರಜಾ ದಿನವಾಗಿದ್ದು, ಅಂದು ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಹೀಗಾಗಿ ನಾಮಪತ್ರ ಸಲ್ಲಿಕೆಗೆ ಏಳು ದಿನಗಳಲ್ಲಿ ಎರಡು ದಿನ ಸರ್ಕಾರಿ ರಜೆ ಇರಲಿದ್ದು, ಐದು ದಿನಗಳು ಮಾತ್ರ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಕೆಗೆ ಕಾಲಾವಕಾಶ ಇದೆ. ಅಭ್ಯರ್ಥಿಗಳು ಶುಭ ದಿನ, ಶುಭ ಗಳಿಗೆ ನೋಡಿಕೊಂಡು ನಾಮಪತ್ರ ಸಲ್ಲಿಸುತ್ತಿದ್ದಾರೆ. 

ಆನ್ ಲೈನ್ ನಲ್ಲಿ ಸಲ್ಲಿಸಲು ಅವಕಾಶ: ಇದೇ ಮೊದಲ ಬಾರಿಗೆ ಅಭ್ಯರ್ಥಿಗಳಿಗೆ ಆನ್ ಲೈನ್​ ಮೂಲಕ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಚುನಾವಣೆ ಆಯೋಗದ ವೆಬ್​ಸೈಟ್​ನಲ್ಲಿ ಎಲ್ಲಾ ದಾಖಲೆಗಳೊಂದಿಗೆ ಉಮೇದುವಾರಿಕೆ ಸಲ್ಲಿಸಬಹುದಾಗಿದೆ.

ಇಂದಿನಿಂದ ಏಪ್ರಿಲ್ 20ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಏ.21ರಂದು ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆಯಾಗಲಿದೆ. ನಾಮಪತ್ರ ವಾಪಸ್​ ಪಡೆಯಲು ಏ.24ರಂದು ಕೊನೆಯ ದಿನವಾಗಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. 

ಟಿಕೆಟ್ ಘೋಷಣೆ: ರಾಜ್ಯದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ಈಗಾಗಲೇ 166 ಕ್ಷೇತ್ರಗಳಿಗೆ, ಬಿಜೆಪಿ 212 ಹಾಗೂ ಜೆಡಿಎಸ್‌ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ‘ಬಿ’ ಫಾರಂ ವಿತರಣೆ ಆರಂಭಿಸಿವೆ. ಟಿಕೆಟ್ ಹಂಚಿಕೆಯಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿತ ನಾಯಕರಿಗೆ ಬಂಡಾಯದ ಬಿಸಿ ಏರಿಕೆಯಾಗಿದೆ. ಅದರಲ್ಲೂ ಆಡಳಿತಾರೂಢ ಬಿಜೆಪಿಯಲ್ಲಿ ಹೆಚ್ಚಾಗಿದ್ದು ಹಲವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ, ಇನ್ನು ಕೆಲವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಹೇಳಿದ್ದಾರೆ.

ನಾಮಪತ್ರ ಸಲ್ಲಿಕೆಗೆ ನಿಯಮಗಳು: ನಾಮಪತ್ರಗಳನ್ನು ಸಲ್ಲಿಸಲು ಸಮಯವನ್ನು ನಿಗದಿಪಡಿಸಲಾಗಿದ್ದು, ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಬಹುದಾಗಿದೆ. ಚುನಾವಣಾಧಿಕಾರಿಗಳ ಅನುಮತಿ ಪಡೆದುಕೊಂಡು ದೊಡ್ಡ ಮಟ್ಟದಲ್ಲಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆಗೆ ಆಗಮಿಸಬಹುದು. ಆದರೆ,  ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಸೇರಿದಂತೆ ಒಟ್ಟು 5 ಜನರಿಗೆ ಮಾತ್ರ ಚುನಾವಣಾಧಿಕಾರಿಗಳ ಕಚೇರಿ ಪ್ರವೇಶಿಸಲು ಅವಕಾಶವಿದ್ದು, 100 ಮೀಟರ್ ವ್ಯಾಪ್ತಿಯಲ್ಲಿ 3 ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶವಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com