ಕುಮಾರಸ್ವಾಮಿ ಎಷ್ಟೇ ಪಂಚರತ್ನ ಯಾತ್ರೆ ಮಾಡಿದ್ರೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ- ಸಿದ್ದರಾಮಯ್ಯ

ಇನ್ನೊಬ್ಬರ ಹೆಗಲ ಮೇಲೆ ಕೂತುಕೊಂಡು ಅಧಿಕಾರ ಮಾಡಬೇಕು ಎಂದು ಬಯಸುವ ಕುಮಾರಸ್ವಾಮಿ ಎಷ್ಟೇ ಪಂಚರತ್ನ ಯಾತ್ರೆ ಮಾಡಿದ್ರೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ಇನ್ನೊಬ್ಬರ ಹೆಗಲ ಮೇಲೆ ಕೂತುಕೊಂಡು ಅಧಿಕಾರ ಮಾಡಬೇಕು ಎಂದು ಬಯಸುವ ಕುಮಾರಸ್ವಾಮಿ ಎಷ್ಟೇ ಪಂಚರತ್ನ ಯಾತ್ರೆ ಮಾಡಿದ್ರೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ಬೃಹತ್‌ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, 2004 ರಲ್ಲಿ ನಾನು ಜೆಡಿಎಸ್‌ ನಲ್ಲಿದ್ದಾಗ 59 ಜನ ಗೆದ್ದಿದ್ದೆವು. 2005ರಲ್ಲಿ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ರು, ಆಗ ಜೆಟಿ ದೇವೇಗೌಡ ನನ್ನ ಜೊತೆ ಬರಲಿಲ್ಲ, ಮಂತ್ರಿ ಮಾಡುತ್ತೇವೆ ಅಂತಾ ಹೇಳಿದ್ದಕ್ಕೆ ಅಲ್ಲೇ ಉಳಿದುಕೊಂಡರು. ಹುಣಸೂರಿನಲ್ಲಿ ಯಾರು ಗೆಲ್ಲಿಸಿದ್ರು ಎಂದು ಅವರು ಹೇಳಬೇಕು ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಮತ್ತೆ ಜೆಡಿಎಸ್‌ 59 ಸ್ಥಾನ ಮುಟ್ಟಿದ್ರಾ? ಇಲ್ಲ ಅಲ್ವಾ? 28 ಸ್ಥಾನಗಳಲ್ಲಿ ಮಾತ್ರ ಗೆದ್ದಿದ್ದು. ಆಮೇಲೆ 40 ಗೆದ್ದರು, ಮತ್ತೆ 37 ಗೆದ್ದರು. ಈಗ 20 ರಿಂದ 22 ಗೆಲ್ಲಬಹುದು. ಹೇಗೆ ಸರ್ಕಾರ ಮಾಡ್ತಾರೆ? ಪಂಚರತ್ನ ಮಾಡಿದ ಕೂಡಲೇ ಬಹುಮತ ಸಿಗುತ್ತಾ? ಎಂದು ಪ್ರಶ್ನಿಸಿದರು.

ನಾವೆಲ್ಲ ಬೆಂಬಲ ಕೊಟ್ಟರೂ 1 ವರ್ಷ 2 ತಿಂಗಳಿಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಕುಮಾರಸ್ವಾಮಿ 9 ದಿನ ಅಮೇರಿಕಾದಲ್ಲಿ ಕೂತುಕೊಂಡ್ರು. ಅಷ್ಟರಲ್ಲಿ ಬಿಜೆಪಿಯವರು ವ್ಯವಹಾರ ಕುದುರಿಸಿ ಎಲ್ಲರನ್ನು ಕೊಂಡುಕೊಂಡ್ರು, ಕಾಂಗ್ರೆಸ್‌ ನವರನ್ನು ನಾನು ಕಳಿಸಿದ್ದಾದರೆ ಹೆಚ್‌, ವಿಶ್ವನಾಥ್‌, ಗೋಪಾಲಯ್ಯ, ನಾರಾಯಣಗೌಡರನ್ನು ಕಳಿಸಿದ್ದು ಯಾರಪ್ಪ? ಹೊಟೇಲ್‌ ನಲ್ಲಿ ಕೂತು ಆಡಳಿತ ಮಾಡಿದ್ರೆ ಯಾವ ಶಾಸಕರು, ಕಾರ್ಯಕರ್ತರು ಉಳ್ಕೊತಾರೆ. ಯಾರನ್ನೂ ಭೇಟಿ ಮಾಡಲ್ಲ, ಮಂತ್ರಿಗಳು, ಶಾಸಕರನ್ನು ಹೊಟೆಲ್‌ ಒಳಗೆ ಬಿಡುತ್ತಿರಲಿಲ್ಲ. ಹೀಗಾಗಿ ಸರ್ಕಾರ ಬಿದ್ದುಹೋಯಿತು ಎಂದರು.

ಬಿಜೆಪಿ, ಜೆಡಿಎಸ್‌ ಎಲ್ಲರಿಗೂ ನಾನೇ ಟಾರ್ಗೆಟ್‌. ಹೀಗೆ ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರಲ್ಲ ಈ ನಾಡಿಗೆ ನಾನು ಮಾಡಿರುವ ಅನ್ಯಾಯವಾದರೂ ಏನು? ನನ್ನ ಮೇಲಿನ ಭಯಕ್ಕೆ ನನ್ನನ್ನು ಮುಗಿಸಲು ಹೊರಟಿದ್ದಾರೆ. ರಾಜ್ಯದ ಜನರ ಆಶೀರ್ವಾದ ಇರುವವರೆಗೆ ಯಾರಿಂದಲೂ ನನ್ನನ್ನು ಮುಗಿಸಲು ಸಾಧ್ಯವಿಲ್ಲ. ಕಿಂಚಿತ್ತಾದರೂ ಅಭಿಮಾನ, ಪ್ರೀತಿ ಇದ್ದರೆ ಬಿಜೆಪಿ ಮತ್ತು ಜೆಡಿಎಸ್‌  ಸೋಲಿಸುವ ಶಪಥ ಮಾಡಬೇಕು ಎಂದು ಕರೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com