ಕಡೂರಿನಿಂದ ಕಾಂಗ್ರೆಸ್ ಟಿಕೆಟ್ ಮಿಸ್: ದತ್ತಾ ಮೇಸ್ಟ್ರುಗೆ ಮತ್ತೆ ಕದ ತೆರೆಯುತ್ತಾ ಜೆಡಿಎಸ್?
ಬೆಂಗಳೂರು: ಕಡೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ವೈಎಸ್ ವಿ ದತ್ತಾ ಮತ್ತೆ ಜೆಡಿಎಸ್ ಕದ ತಟ್ಟಿದ್ದಾರೆ.
ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸಕ್ಕೆ ವೈಎಸ್ ವಿ ದತ್ತಾ ಭೇಟಿ ನೀಡಿದ್ದು, ಟಿಕೆಟ್ ನೀಡುವಂತೆ ಹೆಚ್.ಡಿ ದೇವೇಗೌಡರ ಬಳಿ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೆಚ್.ಡಿ ದೇವೇಗೌಡರ ಮೂಲಕ ಮತ್ತೆ ಜೆಡಿಎಸ್ ಸೇರಲು ವೈಎಸ್ ವಿ ದತ್ತಾ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ. ಇತ್ತಿಚೆಗಷ್ಟೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ವೈಎಸ್ ವಿ ದತ್ತಾ ಕಡೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ವೈಎಸ್ ವಿ ದತ್ತಾ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಿರಾಕರಿಸಿದೆ.
ದೇವೇಗೌಡರ ನಿಷ್ಠಾವಂತರಾಗಿದ್ದ ದತ್ತ ಕಡೂರಿನಿಂದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಇತ್ತೀಚೆಗಷ್ಟೇ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರಿದ್ದರು. ಆದರೆ, ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರಿಂದ, ದತ್ತ ಗೌಡರನ್ನು ಭೇಟಿ ಮಾಡಿರುವುದು ಅವರು ಜೆಡಿಎಸ್‌ಗೆ ಮರಳುತ್ತಾರೆಯೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ