ಬೆಳಗಾವಿ: ಈ ಬಾರಿಯ ಚುನಾವಣೆಯಲ್ಲಿ ಕೆಲವು ಉನ್ನತ ನಾಯಕರಿಗೆ ಟಿಕೆಟ್ ಕೈತಪ್ಪಿ, ಇನ್ನು ಕೆಲವರು ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿರುವುದರಿಂದ ಕಿತ್ತೂರು ಕರ್ನಾಟಕ ಭಾಗದಲ್ಲಿ ಕೇಸರಿ ಪಕ್ಷದ ಭವಿಷ್ಯ ಮಸುಕಾಗಿದೆ.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದರು, ನಂತರ ಎಂಎಲ್ಸಿಯಾಗಿದ್ದ ಲಕ್ಷ್ಮಣ ಸವದಿ ಬಿಜೆಪಿಯಿಂದ ಅಥಣಿ ಕ್ಷೇತ್ರದ ಟಿಕೆಟ್ ಸಿಗದಿದ್ದಕ್ಕೆ ಬೇಸತ್ತು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ, ಪ್ರಮುಖ ನಾಯಕರಾದ ಬಾದಾಮಿ ಕ್ಷೇತ್ರದ ಎಂ ಕೆ ಪಟ್ಟಣಶೆಟ್ಟಿ, ಮಹಂತೇಶ ಮಾಮದಾಪುರ ಮತ್ತು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಕೊಪ್ಪಳ ಸಂಸದ ಸಂಗಣ್ಣ ಕರಡಿ ಕೂಡ ಈ ಸಾಲಿನಲ್ಲಿದ್ದಾರೆ.
ಈ ಲಿಂಗಾಯತ ನಾಯಕರಲ್ಲಿ ಬಹುತೇಕರು ಚುನಾವಣೆಯಲ್ಲಿ ಗೆಲ್ಲುವುದು ಮಾತ್ರವಲ್ಲದೆ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದುವ ಸಾಮರ್ಥ್ಯ ಹೊಂದಿದ್ದಾರೆ. ವಯಸ್ಸಿನ ಕಾರಣ ನೀಡಿ ಯಡಿಯೂರಪ್ಪನವರು ಸಿಎಂ ಹುದ್ದೆ ತ್ಯಜಿಸಿದ್ದರು. ಅಥಣಿ ಕ್ಷೇತ್ರದಲ್ಲಿ ಸೋತರೂ ಕೂಡ ಲಕ್ಷ್ಮಣ ಸವದಿಯವರನ್ನು ಎಂಎಲ್ಸಿ ಮಾಡಿ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಗಿತ್ತು. ಬಿಜೆಪಿ ಹೈಕಮಾಂಡ್ ನ ಹಲವು ನಿರ್ಧಾರಗಳು ಸ್ಥಳೀಯ ಬಿಜೆಪಿ ನಾಯಕರನ್ನು ಕಂಗೆಡಿಸಿದ್ದು ಮಾತ್ರವಲ್ಲದೆ ಆಕ್ರೋಶ, ಅಸಮಾಧಾನಕ್ಕೆ ಕಾರಣವಾಗಿದೆ. ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ಲಕ್ಷ್ಮಣ ಸವದಿಯವರ ಹೆಸರು ಸಿಎಂ ಹುದ್ದೆಗೆ ಕೇಳಿಬಂದಿತ್ತು.
ಆದರೆ ಈ ಬಾರಿ ಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಲಾಗಿದ್ದು ಲಕ್ಷ್ಮಣ ಸವದಿಗೆ ಆಘಾತವುಂಟಾಗಿಗದ್ದಲ್ಲದೆ ಅವಮಾನವಾಗಿದ್ದು ಬಿಜೆಪಿ ಸಖ್ಯ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸವದಿ ಅವರು ಕಾಂಗ್ರೆಸ್ ಸೇರುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಇನ್ನಷ್ಟು ವಿಸ್ತರಿಸಲು ಎದುರು ನೋಡುತ್ತಿದ್ದಾರೆ. ರಾಜಕೀಯ ತಜ್ಞರ ಪ್ರಕಾರ, ಅವರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಸ್ಥಳಾಂತರಗೊಂಡ ಪರಿಣಾಮವು ಹಲವಾರು ಕ್ಷೇತ್ರಗಳಲ್ಲಿ, ವಿಶೇಷವಾಗಿ ಅಥಣಿ, ಕಾಗವಾಡ, ಸಿಂದಗಿ, ಬಸವನ ಬಾಗೇವಾಡಿ ಮತ್ತು ಇತರ ಹಲವು ಲಿಂಗಾಯತರ ಪ್ರಭಾವವಿರುವ ಕ್ಷೇತ್ರಗಳಲ್ಲಿ ಪರಿಣಾಮ ಬೀರಲಿದೆ.
ಶೆಟ್ಟರ್ ಅವರು ಕಾಂಗ್ರೆಸ್ ನಿಂದ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಗೆಲುವು ಸಾಧಿಸಲಿದ್ದಾರೆ. ಬಿಜೆಪಿಯಿಂದ ಅವರ ನಿರ್ಗಮನವು ಧಾರವಾಡ ಜಿಲ್ಲೆಯ ಕೆಲವು ಲಿಂಗಾಯತ ಪ್ರಾಬಲ್ಯವಿರುವ ಭಾಗಗಳಲ್ಲಿ ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು. ಸದ್ಯದ ಲಿಂಗಾಯತ ಬಿಜೆಪಿ ನಾಯಕರ ಗುಂಪಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸವದಿ ಹೊರತುಪಡಿಸಿ ಸಿಎಂ ಸ್ಥಾನಕ್ಕೆ ಶೆಟ್ಟರ್ ಕೂಡ ಒಬ್ಬರು ಎಂಬುದು ಶೆಟ್ಟರ್ ಬೆಂಬಲಿಗರ ಅಭಿಪ್ರಾಯ.
ವಿಜಯಪುರದಿಂದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತ್ತು ಬಾದಾಮಿಯಿಂದ ಮೂರು ಬಾರಿ ಶಾಸಕರಾಗಿದ್ದ ಎಂ.ಕೆ.ಪಟ್ಟಣಶೆಟ್ಟಿ ಅವರಿಗೆ ಲಿಂಗಾಯತ ಸಮುದಾಯದ ಜನಪ್ರಿಯತೆಯ ಆಧಾರದ ಮೇಲೆ ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯವನ್ನು ಪರಿಗಣಿಸಿ ಟಿಕೆಟ್ ನೀಡಬಹುದಾಗಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ರಾಮದುರ್ಗದಲ್ಲಿ ಯಾದವಾಡ ಅವರು ಸುಲಭವಾಗಿ ಗೆಲ್ಲುತ್ತಾರೆ ಆದರೆ ಪಕ್ಷವು ಚಿಕ್ಕ ರೇವಣ್ಣ ಅವರಿಗೆ ಟಿಕೆಟ್ ನೀಡಿದೆ.
ಲಿಂಗಾಯತ ನಾಯಕರ ಈ ನಿರ್ಗಮನದ ನಂತರ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಲಿಂಗಾಯತ ಮತಗಳನ್ನು ಹೇಗೆ ಕ್ರೋಢೀಕರಿಸಲು ಸಾಧ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Advertisement