ಬೆಂಗಳೂರು: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಪ್ರತಿಪಕ್ಷ ಕಾಂಗ್ರೆಸ್ ಮಂಗಳವಾರ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ್ದು, ಭಾನುವಾರ ಕಾಂಗ್ರೆಸ್ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಏಳು ಜನರಿಗೆ ಟಿಕೆಟ್ ನೀಡಲಾಗಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಅವರನ್ನು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಹುಬ್ಬಳ್ಳಿ-ಧಾರಣವಾಡ ಪಶ್ಚಿಮ ಕ್ಷೇತ್ರದಿಂದ ದೀಪಕ್ ಚಿಂಚೋರೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಲಿಂಗಸೂರು ಕ್ಷೇತ್ರದಿಂದ ದುರ್ಗಪ್ಪ ಎಸ್ ಹೂಲಗೇರಿ, ಶಿಗ್ಗಾಂವಿಯಿಂದ ಮೊಹಮ್ಮದ್ ಯೂಸುಫ್ ಸವಣೂರು, ಹರಿಹರದಿಂದ ನಂದಗಾವಿ ಶ್ರೀನಿವಾಸ್, ಚಿಕ್ಕಮಗಳೂರು ಕ್ಷೇತ್ರದಿಂದ ಎಚ್.ಡಿ.ತಮ್ಮಯ್ಯ ಹಾಗೂ ಶ್ರವಣಬೆಳಗೊಳದಿಂದ ಎಂ.ಎ.ಗೋಪಾಲಸ್ವಾಮಿ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.
ಒಟ್ಟು 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 216 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನು 8 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಾಕಿ ಉಳಿಸಿಕೊಂಡಿದೆ.
ಬೆಂಗಳೂರಿನ ಪುಲಿಕೇಶಿನಗರ, ಸಿ.ವಿ.ರಾಮನ್ನಗರ, ಕೆ.ಆರ್.ಪುರಂ, ಹಾಸನ ಜಿಲ್ಲೆ ಅರಕಲಗೂಡು, ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರ, ರಾಯಚೂರು ನಗರ ಕ್ಷೇತ್ರ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರ, ಮಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯನ್ನು ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದೆ.
ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನವಾಗಿದೆ. ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
Advertisement