ಹಾಸನದಲ್ಲಿ ಸ್ವರೂಪ್ ಗೆಲ್ಲಿಸುವ ಮೂಲಕ ಪ್ರೀತಂ ಗೌಡಗೆ ತಕ್ಕ ಪಾಠ ಕಲಿಸಿ: ಹೆಚ್ ಡಿ ದೇವೇಗೌಡ
ಹಾಸನದ ಬಿಜೆಪಿ ಹಾಲಿ ಶಾಸಕ ಪ್ರೀತಂ ಜೆ.ಗೌಡ ವಿರುದ್ಧ ವಾಗ್ದಾಳಿ ನಡೆಸಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗೌಡ ಅವರು, ಪ್ರೀತಂನನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಜನರು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
Published: 20th April 2023 09:01 PM | Last Updated: 21st April 2023 01:19 PM | A+A A-

ಜೆಡಿಎಸ್ ನಾಯಕರು
ಹಾಸನ: ಹಾಸನದ ಬಿಜೆಪಿ ಹಾಲಿ ಶಾಸಕ ಪ್ರೀತಂ ಜೆ.ಗೌಡ ವಿರುದ್ಧ ವಾಗ್ದಾಳಿ ನಡೆಸಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗೌಡ ಅವರು, ಪ್ರೀತಂನನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಜನರು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಹಾಸನದಲ್ಲಿ ರೋಡ್ ಶೋ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರೀತಂ ಗೌಡ ಅವರು ಅಭಿವೃದ್ಧಿ ಕಾಮಗಾರಿಗಳ ವಿರೋಧಿಯಾಗಿದ್ದು, ಕಳೆದ ಐದು ವರ್ಷಗಳಿಂದ ಅತ್ಯಂತ ಕೆಟ್ಟ ರಾಜಕಾರಣ ಮಾಡಿದ್ದಾರೆ. ಸದ್ಯದಲ್ಲಿಯೇ ಹಾಸನದಲ್ಲಿ ಆಯೋಜಿಸಲಿರುವ ಸಾರ್ವಜನಿಕ ಸಮಾವೇಶದಲ್ಲಿ ಹಾಸನ ಬಿಜೆಪಿ ಶಾಸಕರ ಅವ್ಯವಹಾರಗಳನ್ನು ಎತ್ತಿ ತೋರಿಸುತ್ತೇನೆ. ಪ್ರೀತಂ ಜೆ ಗೌಡ ವಿರುದ್ಧ ಜೆಡಿಎಸ್‌ನ ಸಾಮಾನ್ಯ ಕಾರ್ಯಕರ್ತನನ್ನು ಗೆಲ್ಲಿಸಿ. ಹಣಕ್ಕೆ ಆದ್ಯತೆ ನೀಡದ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ಮತದಾರರನ್ನು ಖರೀದಿಸಲು ಸಾಧ್ಯವಿಲ್ಲ ಎಂದು ದೇವೇಗೌಡರು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆಯನ್ನು ಶ್ಲಾಘಿಸಿದ ದೇವೇಗೌಡರು, ಜೆಡಿಎಸ್ ರೈತ ಮತ್ತು ಜನಸಾಮಾನ್ಯರ ಪಕ್ಷವಾಗಿದ್ದು, ರಾಜ್ಯದ ಎಲ್ಲಾ ವರ್ಗದ ಜನರು ಪಂಚರತ್ನ ಯಾತ್ರೆಯನ್ನು ಸ್ವಾಗತಿಸಿದ್ದಾರೆ ಎಂದರು. ಇದಕ್ಕೂ ಮುನ್ನ ದೇವೇಗೌಡರು ಮಾಜಿ ಸಿಎಂ ಮತ್ತು ಅವರ ಪುತ್ರ ಎಚ್‌ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಎಚ್‌ಡಿ ರೇವಣ್ಣ, ಎ ಮಂಜು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಭವಾನಿ ಅವರೊಂದಿಗೆ ರೋಡ್‌ಶೋನಲ್ಲಿ ಭಾಗವಹಿಸಿದರು. ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ರ್ಯಾಲಿಯಲ್ಲಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡು ನರಸಿಂಹರಾಜ ವೃತ್ತದಲ್ಲಿ ಕೊನೆಗೊಂಡಿತು.
ಇದನ್ನೂ ಓದಿ: ಹಾಸನದಲ್ಲಿ ಬದಲಾದ ಬಿಜೆಪಿ ರಣತಂತ್ರ: ಹೊಳೆನರಸಿಪುರದಲ್ಲಿ ರೇವಣ್ಣ ವಿರುದ್ಧ ಪ್ರೀತಂ ಗೌಡ ಕಣಕ್ಕೆ!
ಹಾಸನದಲ್ಲಿ ಪ್ರೀತಂ ಸೋಲಿಸಲು ಗೌಡರ ಕುಟುಂಬ ಒಟ್ಟಾಗಿದೆ: ಹೆಚ್‌ಡಿಕೆ
ಗೌಡರ ಕುಟುಂಬವನ್ನು 50 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸುತ್ತೇನೆ ಎಂದು ಸವಾಲು ಹಾಕಿರುವ ಹಾಸನ ಬಿಜೆಪಿ ಅಭ್ಯರ್ಥಿ ಪ್ರೀತಂ ಅವರನ್ನು ಸೋಲಿಸಲು ತಮ್ಮ ಕುಟುಂಬ ಒಗ್ಗಟ್ಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇಲ್ಲಿ ರೋಡ್ ಶೋ ವೇಳೆ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಹಾಸನ ಟಿಕೆಟ್ ವಿಚಾರದಲ್ಲಿ ಕುಟುಂಬಸ್ಥರಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಉಂಟಾಗಿದ್ದು, ಅತ್ತಿಗೆ ಭವಾನಿ ಸ್ವಯಂಪ್ರೇರಿತರಾಗಿ ಸ್ವರೂಪ್ ಪ್ರಕಾಶ್ ಅವರನ್ನು ಬೆಂಬಲಿಸಲು ನಿರ್ಧರಿಸಿದ ಬಳಿಕ ಅದು ಬಗೆಹರಿದಿದೆ ಎಂದರು.
ಪ್ರೀತಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಚ್‌ಡಿಕೆ, ಅಭಿವೃದ್ಧಿ ಕಾಮಗಾರಿಗಳ ನೆಪದಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ. ರೈತರು ಮತ್ತು ಜನಸಾಮಾನ್ಯರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಸ್ವರೂಪ್‌ಗೆ ಮತ ನೀಡಿ ಎಂದು ಎಚ್‌ಡಿಕೆ ಮನವಿ ಮಾಡಿದರು.