ಕಾಂಗ್ರೆಸ್ ಸೇರ್ಪಡೆ ನಂತರ ಮೊದಲ ಬಾರಿಗೆ ರಾಹುಲ್ ಗಾಂಧಿ ಭೇಟಿ ಮಾಡಿದ ಜಗದೀಶ್ ಶೆಟ್ಟರ್: 'ಲಿಂಗಾಯತ ಮತ' ಪ್ರಮುಖ ಚರ್ಚಾ ವಿಷಯ

ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಹಿರಿಯ ನಾಯಕ ಜಗದೀಶ್ ಶೆಟ್ಟರ್ ನಿನ್ನೆ ಭಾನುವಾರ ಹುಬ್ಬಳ್ಳಿಯಲ್ಲಿ ಕೈ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.
ರಾಹುಲ್ ಗಾಂಧಿ ಜೊತೆ ಜಗದೀಶ್ ಶೆಟ್ಟರ್ ಮಾತುಕತೆ
ರಾಹುಲ್ ಗಾಂಧಿ ಜೊತೆ ಜಗದೀಶ್ ಶೆಟ್ಟರ್ ಮಾತುಕತೆ

ಹುಬ್ಬಳ್ಳಿ: ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಹಿರಿಯ ನಾಯಕ ಜಗದೀಶ್ ಶೆಟ್ಟರ್ ನಿನ್ನೆ ಭಾನುವಾರ ಹುಬ್ಬಳ್ಳಿಯಲ್ಲಿ ಕೈ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಚುನಾವಣಾ ಪೂರ್ವ ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿಯವರು ನಿನ್ನೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅವರನ್ನು ಜಗದೀಶ್ ಶೆಟ್ಟರ್ ಬರಮಾಡಿಕೊಂಡರು. ಬಳಿಕ ಉಭಯ ನಾಯಕರು ಕರ್ನಾಟಕ ಚುನಾವಣೆ, ಲಿಂಗಾಯತ ಸಮುದಾಯದ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದು ಬಳಿಕ ರಾಹುಲ್ ಗಾಂಧಿ ವಿಜಯಪುರ ಜಿಲ್ಲೆಗೆ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳಿದರು.

ಚುನಾವಣೆ ಸಂದರ್ಭದಲ್ಲಿ ಲಿಂಗಾಯತ ನಾಯಕರ ವಿರುದ್ಧ ಹೇಳಿಕೆ ನೀಡದಂತೆ ಕಾಂಗ್ರೆಸ್ ನಾಯಕರನ್ನು ತಡೆಯಬೇಕೆಂದು ಶೆಟ್ಟರ್ ರಾಹುಲ್ ಗಾಂಧಿಯವರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕ ಚುನಾವಣಾ ರಾಜಕೀಯದಲ್ಲಿ ಲಿಂಗಾಯತ ಸಮುದಾಯದ ಪಾತ್ರದ ಬಗ್ಗೆ ತಿಳಿದುಕೊಳ್ಳಲು ರಾಹುಲ್ ಗಾಂಧಿ ತೀವ್ರ ಉತ್ಸುಕತೆ ತೋರಿಸಿದರು. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು ಹುಬ್ಬಳ್ಳಿಯಲ್ಲಿ ಶೆಟ್ಟರ್ ಪರ ರಾಹುಲ್ ಗಾಂಧಿ ಪ್ರಚಾರ ನಡೆಸುವ ಸಾಧ್ಯತೆಯಿದೆ ಎಂದು ಹುಬ್ಬಳ್ಳಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಈ ಮಧ್ಯೆ, ಹುಬ್ಬಳ್ಳಿಯಲ್ಲಿ ತಮ್ಮ ವಿರುದ್ಧ ಆರ್ ಎಸ್ ಎಸ್ ತಂಡ ಚುನಾವಣಾ ಪಿತೂರಿ ಪ್ರಚಾರ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅದರಿಂದ ಯಾವುದೇ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಆರ್ ಎಸ್ ಎಸ್ ತಂಡಕ್ಕೆ ಸ್ಥಳೀಯ ರಾಜಕೀಯದ ಬಗ್ಗೆ ಅರಿವು ಇಲ್ಲ ಮತ್ತು ಅದು ಗೊತ್ತಾಗುವ ಹೊತ್ತಿಗೆ ಚುನಾವಣೆ ಮುಗಿದಿರುತ್ತದೆ ಎಂದಿದ್ದಾರೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ನಲ್ಲಿ ನನ್ನ ಗೆಲುವು ಖಚಿತ. ಹಲವು ಕಡೆಗಳಲ್ಲಿ ನನ್ನ ವಿರುದ್ಧ ಮಾಡುವ ಅಪಪ್ರಚಾರದಿಂದ ಯಾವುದೇ ತೊಂದರೆಯಾಗುವುದಿಲ್ಲ. ಅಭ್ಯರ್ಥಿಯ ಉತ್ತಮ ಕೆಲಸ ಮಾತನಾಡುತ್ತದೆಯೇ ಹೊರತು ಅಪಪ್ರಚಾರ ನಡೆಸಿದರೆ ಏನೂ ಲಾಭವಿಲ್ಲ ಎಂದರು.

ಇಂದು ರಾಹುಲ್ ಗಾಂಧಿಯವರು ಬೆಳಗಾವಿ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ರೈತರೊಂದಿಗೆ ಸಂವಾದ ನಡೆಸಿದ ನಂತರ ಗದಗ ಪಟ್ಟಣದಲ್ಲಿ ಯುವಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಯುವ ಸಂವಾದದಲ್ಲಿ ಮೊದಲ ಬಾರಿಯ ಮತದಾರರು ಸೇರಿದಂತೆ 2 ಸಾವಿರಕ್ಕೂ ಅಧಿಕ ಯುವಕರು ಪಾಲ್ಗೊಳ್ಳಲಿದ್ದಾರೆ. ಬಳಿಕ ಹಾವೇರಿಯ ಹಾನಗಲ್ ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ನಂತರ ದೆಹಲಿಗೆ ತೆರಳಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com