ಬೆಳಗಾವಿ ಗ್ರಾಮಾಂತರದಲ್ಲಿ ಹೆಸರಿಗಷ್ಟೇ 'ಮುನ್ನೋಳ್ಕರ್' ಬಿಜೆಪಿ ಕ್ಯಾಂಡಿಡೇಟ್: ಹೆಬ್ಬಾಳ್ಕರ್- ಸಾಹುಕಾರ್ ನೇರಾ ನೇರ ಫೈಟ್!

ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೊಂದು ಅಭೂತಪೂರ್ವ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ, ಆದರೆ ಹೆಬ್ಬಾಳ್ಕರ್ ಸೋಲಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.
ಹೆಬ್ಬಾಳ್ಕರ್, ಮುನ್ನೋಳ್ಕರ್ ಮತ್ತು  ರಮೇಶ್ ಜಾರಕಿಹೊಳಿ
ಹೆಬ್ಬಾಳ್ಕರ್, ಮುನ್ನೋಳ್ಕರ್ ಮತ್ತು ರಮೇಶ್ ಜಾರಕಿಹೊಳಿ

ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೊಂದು ಅಭೂತಪೂರ್ವ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ, ಆದರೆ ಹೆಬ್ಬಾಳ್ಕರ್ ಸೋಲಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.

ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆಗಾಗಿ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳು ಮತದಾರರನ್ನು ಓಲೈಸಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ಆದರೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತ್ರ ಮತದಾರರ ಫೇವರಿಟ್ ಆಗಿದ್ದಾರೆ.

2018 ರಲ್ಲಿ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಅವರನ್ನು ಸೋಲಿಸಿ, ಭರ್ಜರಿ ಜಯಗಳಿಸಿದ  ಹೆಬ್ಬಾಳ್ಕರ್ ರಾಜ್ಯ ರಾಜಕಾರಣದಲ್ಲಿ ಮಹತ್ವದ ಸ್ಥಾನ ಪಡೆದರು. ಆದರೆ ಈ ಬಾರಿ ಹೆಬ್ಬಾಳ್ಕರ್ ಭದ್ರಕೋಟೆಯಲ್ಲಿ ಕಟ್ಟಿಹಾಕಲು ಬಿಜೆಪಿ  ರಣಕಹಳೆ ಮೊಳಗಿಸಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಒತ್ತಾಯದ ಮೇರೆಗೆ ಬಿಜೆಪಿ ನಾಗೇಶ್ ಮುನ್ನೋಳ್ಕರ್ ಎಂಬ ಹೊಸಮುಖವನ್ನು ಕಣಕ್ಕಿಳಿಸಿದೆ. ಆದರೆ ಮುನ್ನೋಳ್ಕರ್ ಮೇಲ್ನೋಟಕ್ಕೆ ಕಾಣುವ ಅಭ್ಯರ್ಥಿ ಅಷ್ಟೇ, ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿ ಹೊಳಿ ನಡುವಿನ ಪ್ರತಿಷ್ಠೆಯ ಹೋರಾಟ ಇದಾಗಿದೆ.

ಕಳೆದ ಕೆಲವು ವರ್ಷಗಳಿಂದ ತಮ್ಮ ರಾಜಕೀಯ ಅಧಃಪತನಕ್ಕೆ ಕಾರಣರಾದ ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ಸಾಹುಕಾರ್  ಪಣ ತೊಟ್ಟಿದ್ದಾರೆ.

ಜಾರಕಿಹೊಳಿ ಆಪ್ತರಾಗಿರುವ ಮುನ್ನೋಳ್ಕರ್ ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದು, ಅವರಿಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಹಲವು ಪ್ರಬಲ ಆಕಾಂಕ್ಷಿಗಳನ್ನು ಬಿಜೆಪಿ ಕಡೆಗಣಿಸಿದೆ.

ಕ್ಷೇತ್ರದಲ್ಲಿ ಪ್ರಬಲವಾಗಿರುವ ಮರಾಠಿ ಮತದಾರರನ್ನು ಒಗ್ಗೂಡಿಸುವ ಪ್ರಯತ್ನವಾಗಿ ಜಾರಕಿಹೊಳಿ  ಚುನಾವಣೆ ಘೋಷಣೆಗೂ ಮುನ್ನ ಯಳ್ಳೂರಿನ ರಾಜ್‌ಹುಣಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ನೆರವೇರಿಸಿದರು.

ಮತ್ತೊಂದೆಡೆ, ಶಿವಾಜಿ ಪ್ರತಿಮೆಯನ್ನು ಸ್ಥಾಪಿಸಲು ಅವಿರತವಾಗಿ ಶ್ರಮಿಸಿದ ಹೆಬ್ಬಾಳ್ಕರ್, ಎಲ್ಲಾ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಅದೇ ಪ್ರತಿಮೆಯನ್ನು ಅನಾವರಣಗೊಳಿಸುವ ಮತ್ತೊಂದು ಕಾರ್ಯಕ್ರಮವನ್ನು ಆಯೋಜಿಸಿದರು. ಮರಾಠಿ ಮತದಾರರನ್ನು ಓಲೈಸಲು ಪ್ರತಿಮೆಯು ಎರಡೂ ಕಡೆಯವರ ವಾಗ್ವಾದಕ್ಕೆ ಕಾರಣವಾಯಿತು.

ಎಂಇಎಸ್ ಕೂಡ ಮರಾಠಾ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಕಳೆದ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಪರವಾಗಿದ್ದ  ಮರಾಠಿ ಮತಗಳು ಈ ಬಾರಿ ಆರ್ ಎಂ ಪಾಟೀಲ್ ಈ ಬಾರಿ ಮನ್ನೋಳ್ಕರ್ ನಡುವೆ ವಿಭಜನೆಯಾಗುವ ನಿರೀಕ್ಷೆಯಿದೆ. ಮರಾಠಾ ಅಭ್ಯರ್ಥಿಗಳಿಬ್ಬರೂ ಮರಾಠಿ ಮತಗಳ ಮೇಲೆ ಕಣ್ಣಿಟ್ಟು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಆದರೆ, ಕಳೆದ ಚುನಾವಣೆಯಲ್ಲಿ  ಹೆಬ್ಬಾಳ್ಕರ್ ಅವರಿಗೆ ಜಾತಿ, ಭಾಷೆಯ ಭೇದವಿಲ್ಲದೆ ಕ್ಷೇತ್ರದ ಎಲ್ಲ ವರ್ಗದ ಜನರಿಂದ ಅಭೂತಪೂರ್ವ ಬೆಂಬಲ ಸಿಕ್ಕಿತ್ತು ಆದರೆ ಕ್ಷೇತ್ರದ ಈಗಿನ ಟ್ರೆಂಡ್ ನೋಡಿದರೆ ಹೆಬ್ಬಾಳ್ಕರ್ ಅವರಿಗೆ ಈ ಬಾರಿಯ ಹಣಾಹಣಿ ಅಷ್ಟು ಸುಲಭವಲ್ಲ ಎಂದು ತೋರುತ್ತಿದೆ.

1.14 ಮಹಿಳೆಯರು ಸೇರಿದಂತೆ ಸುಮಾರು 2.40 ಲಕ್ಷ ಮತದಾರರನ್ನು ಹೊಂದಿರುವ ಬೆಳಗಾವಿ ಗ್ರಾಮಾಂತರದಲ್ಲಿ ಮರಾಠಿಗರ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತರು ಹೆಬ್ಬಾಳ್ಕರ್ ಬೆನ್ನಿಗಿದ್ದಾರೆ.

ಇಲ್ಲಿ ನಡೆದ ಕಳೆದ 11 ಚುನಾವಣೆಗಳಲ್ಲಿ ಎಂಇಎಸ್ ಮತ್ತು ಬಿಜೆಪಿ ತಲಾ ಮೂರು ಬಾರಿ, ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ ಎರಡು ಬಾರಿ ಗೆದ್ದಿದ್ದರೆ, ಜನತಾ ಪಕ್ಷ ಒಂದು ಚುನಾವಣೆಯಲ್ಲಿ ಗೆದ್ದಿದೆ.

ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರಮುಖ ನಾಯಕರು ಬೆಳಗಾವಿಯಲ್ಲಿ ಹೈ-ವೋಲ್ಟೇಜ್ ಪ್ರಚಾರದಲ್ಲಿ ನಿರತರಾಗಿದ್ದಾರೆ. ಮುಂದಿನ ಎರಡು ವಾರಗಳ ಪ್ರಚಾರದ ಬಿರುಸನ್ನು ಮತ್ತಷ್ಟು ಹೆಚ್ಚು ಮಾಡಲು ಎರಡೂ ಕಡೆಯ ಅನೇಕ ಸ್ಟಾರ್ ಪ್ರಚಾರಕರು ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.

ಹೆಬ್ಬಾಳ್ಕರ್ ಅವರನ್ನು ಪೂರ್ಣ ಬಲದಿಂದ ಬೆಂಬಲಿಸುತ್ತಿರುವ ಕಾಂಗ್ರೆಸ್ ನಾಯಕತ್ವವು ಮತ್ತೊಂದು ಭರ್ಜರಿ ಗೆಲುವನ್ನು ನಿರೀಕ್ಷಿಸುತ್ತಿದೆ ಆದರೆ ಮತ್ತೊಂದೆಡೆ, ಬಿಜೆಪಿ ಅಚ್ಚರಿ ಗೆಲುವಿನ ನಿರೀಕ್ಷೆಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com