ವರುಣಾ: ಹತಾಶೆ ಮತ್ತು ಸೋಲಿನ ಭಯದಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಂದ ಕುಕೃತ್ಯ; ವಿ ಸೋಮಣ್ಣ- ಸಂಸದ ಪ್ರತಾಪ್ ಸಿಂಹ ಕಿಡಿ
ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಸಿದ್ದರಾಮಯ್ಯನಹುಂಡಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಪ್ರಕರಣ ಬಗ್ಗೆ ವರುಣಾ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ಅಣ್ಣನ ಮನೆ ಮುಂದೆಯೇ ಈ ಗಲಾಟೆ ನಡೆದಿದೆ ಎಂದು ಆರೋಪಿಸಿದ್ದಾರೆ.
Published: 28th April 2023 11:02 AM | Last Updated: 28th April 2023 03:38 PM | A+A A-

ವರುಣಾ ಕ್ಷೇತ್ರದ ಸಿದ್ಧರಾಮನಹುಂಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಲ್ಲು ತೂರಾಟದಿಂದ ಗಾಯಗೊಂಡು ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತ ನಾಗೇಶ್ ಭೇಟಿ ಮಾಡಿ ಆರೋಗ್ಯ ವಿಚಾರಣೆ
ಮೈಸೂರು: ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಸಿದ್ದರಾಮಯ್ಯನಹುಂಡಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಪ್ರಕರಣ ಬಗ್ಗೆ ವರುಣಾ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ಅಣ್ಣನ ಮನೆ ಮುಂದೆಯೇ ಈ ಗಲಾಟೆ ನಡೆದಿದೆ ಎಂದು ಆರೋಪಿಸಿದ್ದಾರೆ.
‘ಕೈ’ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿಯಲ್ಲಿ ಬಿಜೆಪಿ ಕಾರ್ಯಕರ್ತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಇಂದು ಬೆಳಗ್ಗೆ ಸಂಸದ ಪ್ರತಾಪ್ ಸಿಂಹ ಅವರ ಜೊತೆಗೆ ವಿ.ಸೋಮಣ್ಣ ಅವರು ಆಸ್ಪತ್ರೆಗೆ ತೆರಳಿ ಕಾರ್ಯಕರ್ತನ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದರು.
ಸಿದ್ದರಾಮಯ್ಯ ಅವರ ಅಣ್ಣನ ಮನೆ ಮುಂದೆಯೇ ಈ ಗಲಾಟೆ ನಡೆಯಿತು. ಹತಾಶೆ ಮನೋಭಾವ ಹಾಗೂ ಸೋಲಿನ ಭಯದಿಂದ ಸಿದ್ದರಾಮಯ್ಯನವರ ಬೆಂಬಲಿಗರು ಈ ಕೆಲಸ ಮಾಡಿದ್ದಾರೆ. ನಾನು ಎಲ್ಲಿ ಹೋಗ್ತಿನೋ ಅಲ್ಲಿಗೆ ಕೆಲವರು ಬರುತ್ತಾರೆ. ಎಲ್ಲಾ ಕೋಮಿನ ಜನ ಪ್ರೀತಿ ಮಾಡುತ್ತಾರೆ. ಒಂದು ಕೋಮಿನ ಜನ ಮಾತ್ರ ದ್ವೇಷ ಮಾಡುತ್ತಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಮೈಸೂರು: ಬಿಜೆಪಿ ಪ್ರಚಾರದ ರಥದ ಮೇಲೆ ಕಲ್ಲು ತೂರಾಟ: ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಪಾರು, ಹಲವರಿಗೆ ಗಾಯ
ನಮ್ಮ ಕಾರ್ಯಕರ್ತನಿಗೆ ಆದ ನೋವು ಸಿದ್ದರಾಮಯ್ಯರ ಅಣ್ಣನ ಮಗನಿಗೆ ಆಗಿದ್ದರೆ ನನ್ನನ್ನು ಯಾವ ದೃಷ್ಟಿಯಲ್ಲಿ ಸಿದ್ದರಾಮಯ್ಯ ನೋಡುತ್ತಿದ್ದರು, ಸಿದ್ದರಾಮಯ್ಯ ಘನತೆಗೆ ಇದು ಒಳ್ಳೆಯದಲ್ಲ. ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ನಾನು ಯಾವತ್ತಿಗೂ ವಿಚಲಿತ ಆಗಲ್ಲ ಎಂದು ಹೇಳಿದರು.
ಇನ್ನು ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಿದ್ದರಾಮನಹುಂಡಿ ಏನು ಸಿದ್ದರಾಮಯ್ಯನ ಸಂಸ್ಥಾನನಾ ಎಂದು ಕಿಡಿಕಾರಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಸಣ್ಣತನ ಯಾಕೆ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಸಿದ್ದರಾಮಯ್ಯ ಪಾಳಯದಲ್ಲಿ ಹತಾಶೆ ಮತ್ತು ಸೋಲಿನ ಭಯ ಶುರುವಾಗಿದೆ. ಇದರಿಂದ ಬಿಜೆಪಿ ಕಾರ್ಯಕರ್ತರು ಪ್ರಚಾರಕ್ಕೆ ಹೋದ ಕಡೆ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಅಲ್ಲದೆ ಹಲ್ಲೆಗೆ ಮುಂದಾಗುತ್ತಾರೆ ಎಂದು ಆರೋಪಿಸಿದರು.
ಮೊದಲೇ ಬಕೆಟ್‍ಗಳಲ್ಲಿ ಕಲ್ಲುಗಳನ್ನು ಇಟ್ಟುಕೊಂಡು ಗಲಾಟೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲೇನೂ ಸಿದ್ದರಾಮಯ್ಯ ಪಾಳೇಗಾರಿಕೆ ಮಾಡುತ್ತಿದ್ದಾರಾ ಸೋಮಣ್ಣ ಒಂದು ಕರೆ ಕೊಟ್ಟರೆ ನಿಮಗೂ ಎಲ್ಲಾ ಊರುಗಳಲ್ಲಿ ಇದೇ ರೀತಿಯ ಘಟನೆ ಎದುರಾಗಬಹುದು. ಇದನ್ನು ನೀವು ಮುಂದುವರಿಸಿದರೆ ನಮಗೂ ಶಕ್ತಿ ಇದೆ. ಅದನ್ನು ನಾವು ಸಾಬೀತು ಮಾಡಬೇಕಾಗುತ್ತದೆ. ಆಗ ವರುಣದ ಶಾಂತಿ ಕೆಡುತ್ತದೆ ಎಂದು ಪ್ರತಾಪ್ ಸಿಂಹ ಕಾಂಗ್ರೆಸ್ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.