ಬಿಜೆಪಿಯ ಯಾವುದೇ ಶಾಸಕರು ಪಕ್ಷ ಬಿಡಲ್ಲ; ಆಗಸ್ಟ್ 23ಕ್ಕೆ ಬೃಹತ್ ಪ್ರತಿಭಟನೆ: ಬೊಮ್ಮಾಯಿ, ಬಿಎಸ್ ವೈ

ಲೋಕಸಭಾ ಚುನಾವಣೆಗೂ ಮುನ್ನಾ'ಆಪರೇಷನ್ ಹಸ್ತದ ಮಾತುಗಳು ಜೋರಾಗಿ ಕೇಳಿರುತ್ತಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ 2019ರಲ್ಲಿ ಜೆಡಿಎಸ್- ಕಾಂಗ್ರೆಸ್ ಸರ್ಕಾರ ಪತನಗೊಳಿಸಿ ಬಿಜೆಪಿ ಸೇರಿದ್ದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್, ಭೈರತಿ ಬಸವರಾಜ, ಗೋಪಾಲಯ್ಯ ಮತ್ತಿತರರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎನ್ನಲಾಗುತ್ತಿದೆ.
ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ
ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ

ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನಾ'ಆಪರೇಷನ್ ಹಸ್ತದ ಮಾತುಗಳು ಜೋರಾಗಿ ಕೇಳಿರುತ್ತಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ 2019ರಲ್ಲಿ ಜೆಡಿಎಸ್- ಕಾಂಗ್ರೆಸ್ ಸರ್ಕಾರ ಪತನಗೊಳಿಸಿ ಬಿಜೆಪಿ ಸೇರಿದ್ದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್, ಭೈರತಿ ಬಸವರಾಜ, ಗೋಪಾಲಯ್ಯ ಮತ್ತಿತರರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎನ್ನಲಾಗುತ್ತಿದೆ.

ಈ ವದಂತಿಗಳ ನಡುವೆ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು ಅಸಮಾಧಾನಿತರ ಮನವೊಲಿಸುವ ಕಾರ್ಯದಲ್ಲಿ ನಿರಂತರ ಸಭೆ, ಸಂಪರ್ಕ ಸಾಧಿಸುವಲ್ಲಿ ನಿರತರಾಗಿದ್ದಾರೆ. ಅವರನ್ನು ಸಮಾಧಾನಪಡಿಸುವ ಕಾರ್ಯವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಗಲಿಗೆ ಹಾಕಲಾಗಿದೆ.

ಶುಕ್ರವಾರ ರಾತ್ರಿ ಗೋಪಾಲಯ್ಯ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಬಿಜೆಪಿಯ ಯಾವೊಬ್ಬ ಶಾಸಕರೂ ಪಕ್ಷ ಬಿಡುವುದಿಲ್ಲ. ಕೆಲವು ಸ್ಥಳೀಯ ಸಮಸ್ಯೆಗಳಿವೆ. ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ನಾವು ಎಲ್ಲವನ್ನೂ ಪರಿಹರಿಸುತ್ತೇವೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಿಂದ ಕೂಡಿದೆ. ತಮ್ಮದೇ ಶಾಸಕರು ಬಂಡಾಯವೆದ್ದಿದ್ದಾರೆ ಎಂಬ ಸತ್ಯವನ್ನು ಮರೆಮಾಚಲು  ಪಕ್ಷಾಂತರದ ಸುಳ್ಳು ಕಥೆಗಳನ್ನು ಹೇಳುತ್ತಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಶಾಸಕ ಗೋಪಾಲಯ್ಯ, ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯಲ್ಲ, ಕಾಂಗ್ರೆಸ್ ಸೇರುವಂತೆ ಸಾಕಷ್ಟು ಕರೆಗಳು ಬರುತ್ತಿವೆ. ಆದರೆ, ಗೌರವ ಸ್ಥಾನಮಾನ ನೀಡಿದ ಬಿಜೆಪಿಯನ್ನು ಎಂದಿಗೂ ತೊರೆಯಲ್ಲ ಎಂದು ಸ್ಪಷ್ಪಪಡಿಸಿದರು.

ಮತ್ತೊಂದೆಡೆ ಪ್ರತಿಕ್ರಿಯಿಸಿದ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ, ಕರ್ನಾಟಕದಲ್ಲಿನ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದನ್ನು ಇಂದಿನ ಸಭೆಯಲ್ಲಿ ಚರ್ಚಿಸಿದ್ದೇವೆ. ಒಂದಿಬ್ಬರು ಶಾಸಕರು ಅಸಮಾಧಾನಗೊಂಡಿದ್ದು, ಅವರನ್ನು ಮನವೊಲಿಸಲಾಗುತ್ತಿದೆ. ಆಗಸ್ಟ್ 23 ರಂದು ಐದರಿಂದ ಆರು ಸಾವಿರಕ್ಕೂ ಹೆಚ್ಚು ಜನರು ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು. 

ಇದು ಒಂದು ರೀತಿಯ ಸರ್ವಾಧಿಕಾರ ಸರ್ಕಾರ. ಮಾಧ್ಯಮಗಳಿಗೆ ಮತ್ತು ಸಾಮಾಜಿಕ ಜಾಲತಾಣಗಳಿಗೆ ಬೆದರಿಕೆ ಹಾಕುತ್ತಿದ್ದಾರೆ.ಈ ಸರ್ಕಾರ ದಿವಾಳಿಯಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ.ಯಾವುದೇ ಕೆಲಸ ಆಗುತ್ತಿಲ್ಲ. ರಸ್ತೆ ಕಾಮಗಾರಿ ನಡೆಯುತ್ತಿದೆಯೇ ಎಂಬುದನ್ನು ತೋರಿಸಲು  ಸಿಎಂ ಮತ್ತು ಉಪ ಮುಖ್ಯಮಂತ್ರಿಯನ್ನು ಕೇಳುತ್ತಿದ್ದೇನೆ. ಎಲ್ಲ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದ್ದು, ಅವರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಮತ್ತು ಅದಕ್ಕಾಗಿಯೇ ನಾವು ಪ್ರತಿಭಟಿಸಲು ನಿರ್ಧರಿಸಿದ್ದೇವೆ, ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com