
ಹಾಸನ: ಬಿಜೆಪಿಯ ಫೈರ್ ಬ್ರಾಂಡ್ ಶಾಸಕ ಬಸನಗೌಡ ಪಾಟೀಲ್ ಯೆತ್ನಾಳ್ ಅವರು ಶನಿವಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರುದ್ಧ ಮತ್ತೆ ಗುಡುಗಿದ್ದಾರೆ.
ಇಂದು ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕಕ್ಕೆ ತೆರಳುವ ಮಾರ್ಗ ಮಧ್ಯ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, 2024 ರ ಸಂಸತ್ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಎಲ್ಲಾ 28 ಸ್ಥಾನಗಳನ್ನು ಗೆದ್ದರೆ ಅದರ ಕ್ರೆಡಿಟ್ ಪ್ರಧಾನಿ ನರೇಂದ್ರ ಮೋದಿಗೆ ಮಾತ್ರ ಸಲ್ಲುತ್ತದೆ. ಇತರ ಯಾವುದೇ ನಾಯಕರಿಗೆ ಅಲ್ಲ ಎಂದರು.
ಹಿಂದೂ ಧರ್ಮ ಮತ್ತು ದೇಶದ ಹಿತದೃಷ್ಟಿಯಿಂದ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಬೇಕು ಎಂಬ ಕಾರಣಕ್ಕೆ ಯಾವುದೇ ನಾಯಕರು ಬಿಜೆಪಿ ತೊರೆಯುವುದಿಲ್ಲ ಎಂದು ಯತ್ನಾಳ್ ಹೇಳಿದರು.
ಬಿಜೆಪಿ ಗೆಲುವಿಗೆ ಜೋಡೆತ್ತು ಕೆಲಸ ಮಾಡುತ್ತಾರೆ ಎಂಬ ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ಹೇಳಿಕೆಯನ್ನು ಲೇವಡಿ ಮಾಡಿದ ಯೆತ್ನಾಳ್, ಜೋಡೆತ್ತುಗಳಲ್ಲಿ ಒಬ್ಬರು ದೆಹಲಿಯಲ್ಲಿ ಮತ್ತು ಇನ್ನೊಬ್ಬರು ಬೆಂಗಳೂರಿನಲ್ಲಿದ್ದಾರೆ ಎಂದರು.
ಇದೇ ವೇಳೆ ಮಾಜಿ ಸಚಿವ ವಿ.ಸೋಮಣ್ಣ ರಾಜೀನಾಮೆ ನೀಡುವುದಿಲ್ಲ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಸೋಲಿಗೆ ಕಾರಣ ಎಲ್ಲರಿಗೂ ತಿಳಿದಿದೆ. ದುರದೃಷ್ಟವಶಾತ್ ಬಿಜೆಪಿಯಲ್ಲಿರುವ ಕೆಲವು ನಾಯಕರು ಅವರನ್ನು ರಾಜ್ಯದಲ್ಲಿ ಮಹಾನ್ ನಾಯಕರೆಂದು ಬಿಂಬಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
Advertisement