ಲೋಕಸಭೆ ಚುನಾವಣೆಗೆ ಜೆಡಿಎಸ್-ಬಿಜೆಪಿ ದೋಸ್ತಿ; ಅಭ್ಯರ್ಥಿಗಳ ಆಯ್ಕೆಗಾಗಿ 'ಕೈ' ಜಂಗೀಕುಸ್ತಿ! ಸುರಕ್ಷಿತ ಕ್ಷೇತ್ರಕ್ಕಾಗಿ ಸುರೇಶ್ ಹುಡುಕಾಟ!

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಜಂಟಿಯಾಗಿ ಸ್ಪರ್ಧಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಭಾವ್ಯರ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ.
ಡಿ.ಕೆ ಸುರೇಶ್
ಡಿ.ಕೆ ಸುರೇಶ್
Updated on

ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಜಂಟಿಯಾಗಿ ಸ್ಪರ್ಧಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಭಾವ್ಯರ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ. ಪ್ರತ್ಯೇಕ ಸ್ಥಾನಗಳ ಕುರಿತು ಗ್ರೌಂಡ್ ರಿಪೋರ್ಟ್ ನೀಡುವ ಹೊಣೆ ಹೊತ್ತಿರುವ ಸಚಿವರು ಇನ್ನೂ ವರದಿ ಸಲ್ಲಿಸಿಲ್ಲ.

ಬಹುಪಾಲು ಸ್ಥಾನಗಳಲ್ಲಿ, ಸಚಿವರು ಮತ್ತು  ಪ್ರಭಾವಿ ಕುಟುಂಬದ ಸದಸ್ಯರ ಹೆಸರುಗಳು ಮುಂಚೂಣಿಗೆ ಬಂದಿವೆ ಎಂದು ಮೂಲಗಳು ತಿಳಿಸಿವೆ. ಸೂಕ್ತ ಅಭ್ಯರ್ಥಿಗಳ ಕೊರತೆಯಿಂದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರದಲ್ಲಿ ಪಕ್ಷದ ನಾಯಕತ್ವವು  ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡಿತ್ತು.

ಕೆಲವು ಕ್ಷೇತ್ರಗಳಲ್ಲಿ ಸಚಿವರ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸುವ ಯೋಜನೆಯಿದೆ ಎಂದು ಮೂಲಗಳು ತಿಳಿಸಿವೆ. ಬೀದರ್ ಲೋಕಸಭಾ ಕ್ಷೇತ್ರಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ್ ಹೆಸರು ಕೇಳಿ ಬರುತ್ತಿದೆ. ಉತ್ತರ ಕನ್ನಡದಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರ ಪುತ್ರ ಪ್ರಶಾಂತ್ ಮತ್ತು ಮಾಜಿ ಕೇಂದ್ರ ಸಚಿವ ಮಾರ್ಗರೇಟ್ ಆಳ್ವ ಅವರ ಪುತ್ರ ನಿವೇದಿತ್ ಆಳ್ವ, ಹಾಗೂ ತುಮಕೂರಿನಲ್ಲಿ ಮಾಜಿ ಸಚಿವ ಟಿಬಿ ಜಯಚಂದ್ರ ಅವರ ಪುತ್ರ ಸಂಜಯ್ ಆಕಾಂಕ್ಷಿಗಳಾಗಿದ್ದಾರೆ.

ಚಾಮರಾಜನಗರದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್, ಮಾಜಿ ಸಚಿವ ವಿನಯ್ ಕುಲಕರ್ಣಿ ಕಿರಿಯ ಸಹೋದರ ವಿಜಯ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಂಬಂಧಿ ರಜತ್ ಉಳ್ಳಾಗಡ್ಡಿಮಠ ಹುಬ್ಬಳ್ಳಿ-ಧಾರವಾಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಕ್ರಮವಾಗಿ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ತಮ್ಮ ಕುಟುಂಬಸ್ಥರಿಗಾಗಿ ಟಿಕೆಟ್ ಕೊಡಿಸಲು ಲಾಬಿ ನಡೆಸುತ್ತಿದ್ದಾರೆ, ಯುವ ಸಬಲೀಕರಣ ಸಚಿವ ಬಿ ನಾಗೇಂದ್ರ ಬಳ್ಳಾರಿಯಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಿಸಲು ಹೆಣಗಾಡುತ್ತಿದ್ದಾರೆ.

ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದು, ಗೆದ್ದರೆ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಪುತ್ರ ರವೀಂದ್ರ ಅವರನ್ನು ಕಣಕ್ಕಿಳಿಸಲು ಬಯಸಿದ್ದಾರೆ. ಅವರ ಹಿರಿಯ ಪುತ್ರ ರಾಜೇಂದ್ರ ಸ್ಥಳೀಯ ಸಂಸ್ಥೆಗಳಿಂದ ಹಾಲಿ ಎಂಎಲ್‌ಸಿಯಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರ ಹೆಸರನ್ನು ಮೈಸೂರಿಗೆ ಸೂಚಿಸಲಾಗಿತ್ತು, ಆದರೆ ಬಿಜೆಪಿ-ಜೆಡಿಎಸ್ ಮೈತ್ರಿ ನಂತರ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಇದನ್ನು ಸವಾಲಾಗಿ ಸ್ವೀಕರಿಸಿ ಮಗನನ್ನು ಕಣಕ್ಕಿಳಿಸಬೇಕು ಎಂದು ಕೆಲವರು ಒತ್ತಡ ಹಾಕುತ್ತಿದ್ದಾರ ಎನ್ನಲಾಗಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಸಂಸದ ಡಿ.ಕೆ.ಸುರೇಶ್ ಬೆಂಗಳೂರು ಉತ್ತರದಂತಹ ಸುರಕ್ಷಿತ ಸ್ಥಾನಕ್ಕೆ ತಮ್ಮ ಕ್ಷೇತ್ರ ಬದಲಾಯಿಸಲು ಮುಂದಾಗಿದ್ದಾರೆ ಎಂದು  ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ. ಹಾಲಿ ಸಂಸದ ಡಿವಿ ಸದಾನಂದಗೌಡ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಹೊಸ ಮುಖಕ್ಕಾಗಿ ಹುಡುಕುತ್ತಿದೆ.

ಸಂಭವನೀಯ ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡುವ ಕಾರ್ಯದಲ್ಲಿರುವ ಸಚಿವರು ಕ್ಷೇತ್ರಗಳಿಗೆ ಭೇಟಿ ನೀಡಿ ಸಭೆಗಳನ್ನು ನಡೆಸಿದರು. ಈಗ ಅವರ ವರದಿಗಳೊಂದಿಗೆ ಗೌಪ್ಯವಾಗಿ ಭೇಟಿಯಾಗುತ್ತಿದ್ದೇನೆ. 2-3 ದಿನಗಳಲ್ಲಿ ಸಂಭವನೀಯರ ಪಟ್ಟಿಯನ್ನು ಶೀಘ್ರವೇಮಸಲ್ಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಶಿವಕುಮಾರ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. ಮೂಲಗಳ ಪ್ರಕಾರ ಖರ್ಗೆ ಅವರೊಂದಿಗೆ ಪಟ್ಟಿ ಸಂಬಂಧ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com