ನಾನು ಕೈಜೋಡಿಸಿದ್ದಕ್ಕೆ ಯಡಿಯೂರಪ್ಪ ರಾಜಕೀಯ ಜೀವನ ಉಳಿಯಿತು; ಪೇಶ್ವೆ ವಂಶಸ್ಥರು ಅವರಿಗೆ ಅಧಿಕಾರ ಕೊಡಲು ಬಿಡಲಿಲ್ಲ: ಹೆಚ್ ಡಿಕೆ ಹೊಸ ಬಾಂಬ್

ಬಿ ಎಸ್ ಯಡಿಯೂರಪ್ಪನವರ ರಾಜಕೀಯ ಜೀವನ ಬಿಜೆಪಿಯಲ್ಲಿ ನನ್ನಿಂದಾಗಿ ಉಳಿಯಿತು, ಇಲ್ಲದಿದ್ದರೆ ಯಾವಾಗಲೇ ಅವರ ರಾಜಕೀಯ ಭವಿಷ್ಯ ಮುಳುಗಿಹೋಗುತ್ತಿತ್ತು ಎಂದು ಹೊಸ ಬಾಂಬ್ ಹಾಕಿದ್ದಾರೆ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ

ಕುಮಟಾ: ಬಿ ಎಸ್ ಯಡಿಯೂರಪ್ಪನವರ ರಾಜಕೀಯ ಜೀವನ ಬಿಜೆಪಿಯಲ್ಲಿ ನನ್ನಿಂದಾಗಿ ಉಳಿಯಿತು, ಇಲ್ಲದಿದ್ದರೆ ಯಾವಾಗಲೇ ಅವರ ರಾಜಕೀಯ ಭವಿಷ್ಯ ಮುಳುಗಿಹೋಗುತ್ತಿತ್ತು ಎಂದು ಹೊಸ ಬಾಂಬ್ ಹಾಕಿದ್ದಾರೆ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ.

ಕುಮಟಾದಲ್ಲಿ ಇಂದು ಜೆಡಿಎಸ್ ಪಂಚರತ್ನ ರಥಯಾತ್ರೆಯನ್ನು ಮುಂದುವರಿಸುವ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ ಬಿಎಸ್ ವೈ ಪುತ್ರ ವಿಜಯೇಂದ್ರಗೆ ರಾಜಕೀಯ ಧಾಟಿಯಲ್ಲಿ ತಿರುಗೇಟು ಕೊಟ್ಟರು.

ನಾನು ಯಡಿಯೂರಪ್ಪ ಜೊತೆ ಕೈ ಜೋಡಿಸಿ ಅಂದು 20-20 ಸರ್ಕಾರ ರಚಿಸಿದೆವು, ನಾನು ಸಹಕಾರ ನೀಡಿರದಿದ್ದರೆ ಅವರು ರಾಜಕೀಯವಾಗಿ ನಿರ್ನಾಮ ಆಗುತ್ತಿದ್ದರು. ವಿಜಯೇಂದ್ರ ಆಗ ಎಲ್ಲಿದ್ದರು, ಇವರು ನಿನ್ನೆ ಮೊನ್ನೆ ಬಂದವರು ಮಾತನಾಡುತ್ತಾರೆ ಎಳಸುಗಳು ಎಂದರು.

ಸಿದ್ದಲಿಂಗಯ್ಯ ಬದುಕಿದ್ದಾರಲ್ಲವೇ, ಅಂದು ಸಿದ್ದಲಿಂಗಯ್ಯ ಎನ್ನುವವರು ನನಗೆ ಚೀಟಿ ತಂದುಕೊಟ್ಟರು, ಅಂದು ತಮ್ಮನ್ನು ಮಂತ್ರಿಯಾದರೂ ಮಾಡುವಂತೆ ಯಡಿಯೂರಪ್ಪ ಸಿದ್ದಲಿಂಗಯ್ಯ ಮೂಲಕ ಚೀಟಿಯಲ್ಲಿ ಬರೆದು ಕಳುಹಿಸಿಕೊಟ್ಟಿದ್ದರು. ಆಗ ನಾನು ನಿಮ್ಮ ನಾಯಕತ್ವ ಇರಲಿ ಎಂದು ಸಮ್ಮಿಶ್ರ ಸರ್ಕಾರ ಮಾಡಲು ಸಿಎಂ ಮಾಡಿದ್ದೆ. ವೀರಶೈವರಿಗೆ ಏನು ಮಾಡಿದೆ ಎಂದು ವಿಜಯೇಂದ್ರ ಅವರಿಗೆ ಗೊತ್ತಿಲ್ಲ ಎಂದು ತಿರುಗೇಟು ಕೊಟ್ಟರು. 

ನಮ್ಮ ತಂದೆ ದೇವೇಗೌಡರು ವಿಧಾನಸಭೆ ವಿಸರ್ಜನೆ ಮಾಡಲು ಹೋಗಿದ್ದರು. ಆಗ ಯಡಿಯೂರಪ್ಪ ಜೊತೆ ಸೇರಿ ಸರ್ಕಾರ ಮಾಡಿದ್ದೆವು. ಅಧಿಕಾರದಲ್ಲಿ ಇದ್ದ ವೇಳೆ ಬಿಜೆಪಿಗರನ್ನು ಗೌರವದಿಂದ ಕಂಡಿದ್ದೇನೆ. ಬಿಜೆಪಿ ಬೆಳವಣಿಗೆಗೆ ಇದೇ ಸಹಕಾರಿ ಆಗಿತ್ತು. ಪೇಶ್ವೆ ವಂಶಸ್ಥರು ಅವರಿಗೆ ಅಧಿಕಾರವನ್ನು ಕೊಡಲು ಬಿಡಲಿಲ್ಲ. ಅವರೇ ಯಡಿಯೂರಪ್ಪ ಸರ್ಕಾರವನ್ನು ತೆಗೆದರು. ಎರಡನೇ ಬಾರಿ ಕಷ್ಟ ಪಟ್ಟು ಯಡಿಯೂರಪ್ಪ ಸಿಎಂ ಆದರು. ಅವರನ್ನು ಹೇಗೆ ನಡೆಸಿಕೊಂಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ನಾನು ವೀರಶೈವ, ದಲಿತ ಎಲ್ಲಾ ಸಮುದಾಯಕ್ಕೂ ಗೌರವ ನೀಡಿದ್ದೇನೆ ಎಂದರು.

ಇನ್ನು ತಮ್ಮ ಮತ್ತು ತಮ್ಮ ಕುಟುಂಬದವರ ಮೇಲೆ ವಂಶಾಡಳಿತ ರಾಜಕೀಯ, ಕುಟುಂಬ ರಾಜಕಾರಣದ ಬಗ್ಗೆ ಪದೇ ಪದೇ ಮಾಡುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ವಂಶಾಡಳಿತ ಬಿಜೆಪಿ, ಕಾಂಗ್ರೆಸ್‌ನಲ್ಲಿ ಇಲ್ಲವೇ? ನನ್ನ ಕುಟುಂಬದ ಮೇಲೆ ಟಾರ್ಗೆಟ್ ಮಾಡಿದ್ದಾರೆ. ಜನರ ಮೇಲೆ ನಮ್ಮ ಕುಟುಂಬದ ಪ್ರೀತಿಯನ್ನ ನೋಡಿ ಟಾರ್ಗೆಟ್ ಮಾಡ್ತಾ ಇದ್ದಾರೆ ಎಂದರು. 

ಗಣೇಶನ ಆಶೀರ್ವಾದ, ಆತ್ಮಲಿಂಗದ ಪ್ರಸಾದವೂ ನನಗೆ ಸಿಕ್ಕಿದೆ. ಅಲ್ಲದೇ ಬೋಲೋ ಶಂಕರ ದೇವರ ಪ್ರಸಾದ ಕೂಡ ಸಿಕ್ಕಿದೆ. ದೈವ ಅನುಗ್ರಹ ಜನತಾದಳದ ಮೇಲೆ ಇದೆ. ನಾಡಿನ ಜನತೆಗೆ ದೇವರ ಆಶೀರ್ವಾದ ಇದೆ. ಜೆಡಿಎಸ್ ಅಧಿಕಾರಕ್ಕೆ ಬಂದು ನಾಡಿನ ಜನರ ಕ್ಷೇಮ ಕಾಪಾಡಲು ಆದ್ಯತೆ ನೀಡುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com