ಭವಾನಿ ರೇವಣ್ಣ ಈ ಚುನಾವಣೆಯಲ್ಲಿ ಅನಿವಾರ್ಯವಲ್ಲ, ಟಿಕೆಟ್ ಗೊಂದಲವನ್ನು ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತೇವೆ: ಹೆಚ್ ಡಿ ಕುಮಾರಸ್ವಾಮಿ

ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ಕುರಿತು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ. ಇಂದು ಜೆಡಿಎಸ್ ನ ಪಂಚರತ್ನ ಯಾತ್ರೆಯ ಮಧ್ಯೆ ಕುಮಾರಸ್ವಾಮಿ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಬೆಳಗಾವಿ: ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ಕುರಿತು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ. ಇಂದು ಜೆಡಿಎಸ್ ನ ಪಂಚರತ್ನ ಯಾತ್ರೆಯ ಮಧ್ಯೆ ಕುಮಾರಸ್ವಾಮಿ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಿಂದ ಹಾಸನ ಮತ್ತು ಹೊಳೆನರಸೀಪುರ ಕ್ಷೇತ್ರದ ಟಿಕೆಟ್ ಹಂಚಿಕೆಗೆ ಸಂಬಂಧಪಟ್ಟಂತೆ ಪತ್ರಕರ್ತರಿಂದ ಕುಮಾರಸ್ವಾಮಿಯವರಿಗೆ ಪ್ರಶ್ನೆ ಕೇಳಿಬಂತು.

ಅದಕ್ಕೆ ಉತ್ತರಿಸಿದ ಹೆಚ್ ಡಿಕೆ, ಅದಕ್ಕೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ, ಚುನಾವಣೆಯಲ್ಲಿ ಗೆಲ್ಲಲು ತೀರ್ಮಾನ ಮಾಡುತ್ತೇವೆ, ಅದರಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ಭವಾನಿ ರೇವಣ್ಣ ಅವರು ಈ ಚುನಾವಣೆಯಲ್ಲಿ ಅನಿವಾರ್ಯವಲ್ಲ ಎಂದು ಹಿಂದೆ ಹೇಳಿದ್ದೆ, ಅದನ್ನು ಇವತ್ತು ಕೂಡ ಸ್ಪಷ್ಟವಾಗಿ ಹೇಳುತ್ತೇನೆ. ಅದರಲ್ಲಿ ಯಾವ ಗೊಂದಲ ಬೇಕಾಗಿಲ್ಲ, ನಾವು ನಾಯಕರು ಕುಳಿತು ಹಾಸನ ಮತ್ತು ಹೊಳೆನರಸೀಪುರ ಕ್ಷೇತ್ರದ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ. 

ಜನತಾದಳ ನಾಯಕರನ್ನು ಸೃಷ್ಟಿ ಮಾಡುವ ಕಾರ್ಖಾನೆ, ಈ ಕಾರ್ಖಾನೆಯಲ್ಲಿ ಬಹಳಷ್ಟು ಜನ ನಾಯಕರಾಗಿ ಬೆಳೆದು ಪಕ್ಷ ಬಿಟ್ಟು ಹೋದರು. ಈಗ ನಮ್ಮನ್ನು ಟೀಕೆ ಮಾಡುತ್ತಾರೆ. ಬೈಯುತ್ತಾರೆ, ನಾವು ಬೆಳೆಸುತ್ತೇವೆ, ಮಾರುಕಟ್ಟೆಗೆ ದಾರಿ ತೋರಿಸುತ್ತೇವೆ, ಮಾರುಕಟ್ಟೆ ಸಿಕ್ಕಿದಾಕ್ಷಣ ಅವರು ಬಿಟ್ಟು ಹೋಗಿ ಎಲ್ಲೆಲ್ಲಿ ಮಾರುಕಟ್ಟೆ ಇದೆಯೋ ಅಲ್ಲಿ ವ್ಯಾಪಾರ ಮಾಡಿಕೊಳ್ಳುತ್ತಾರೆ.

30-40 ಅಭ್ಯರ್ಥಿಗಳ ಕೊರತೆಯಿದೆ: ರಾಜ್ಯದಲ್ಲಿ ಈ ಬಾರಿ ಚುನಾವಣೆಯಲ್ಲಿ 120 ಸೀಟು ಗೆಲ್ಲುವುದು ನಮ್ಮ ಗುರಿ, 30-40 ಕ್ಷೇತ್ರಗಳಲ್ಲಿ ನಮ್ಮಲ್ಲಿ ಅಭ್ಯರ್ಥಿ ಇಲ್ಲ ಅನ್ನುವುದು ಸತ್ಯವಿಚಾರ. ಆ ಸಮಸ್ಯೆಯನ್ನು ತುಂಬುವಂತಹ, ಜನರ ವಿಶ್ವಾಸ ಗಳಿಸಿ ಕೆಲಸ ಮಾಡುವ ವ್ಯಕ್ತಿಗಳು ಹೊಸ ಮುಖಗಳಿಗೆ ಬೆಂಬಲ ಕೊಡಲು ತಯಾರಾಗಿದ್ದೇನೆ ಎಂದರು.

ರಾಜ್ಯದ 65 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ನಾಳೆ ರಾಯಭಾಗ, ಕುಡಚಿ ಸಭೆ ಬಳಿಕ ಅರಸೀಕೆರೆಗೆ ಹೋಗುತ್ತೇನೆ.  ಅರಸೀಕೆರೆ ಜೆಡಿಎಸ್​ ಅಭ್ಯರ್ಥಿಯನ್ನು ಘೋಷಿಸುತ್ತೇವೆ. ಫೆ.21ರಿಂದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಚಾಮರಾಜನಗರ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ ಎಂದ ಹೆಚ್​ಡಿಕೆ ಮಾಹಿತಿ ನೀಡಿದರು.

ಉತ್ತರ ಕನ್ನಡ ಜಿಲ್ಲೆ 4 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಆಯ್ಕೆ ನಡೆಯಬೇಕಿದೆ. ವಿಶ್ರಾಂತಿ ತೆಗೆದುಕೊಳ್ಳದೇ ನಾಡಿನ ಜನರ ನಡುವೆ ಇರಲು ಬಯಸುತ್ತೇನೆ. ಕಲಬುರಗಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಖರ್ಗೆಗೆ ಮೋದಿ ಪ್ರಶ್ನಿಸಿದ್ದಾರೆ. ಹಾಗಾದರೆ ರಾಜ್ಯ ಬಿಜೆಪಿ ಸರ್ಕಾರದ ಕೊಡುಗೆ ಏನೆಂದು ಸಿಎಂ ಹೇಳಬೇಕಿದೆ. ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಪಂಚರತ್ನ ರಥಯಾತ್ರೆಯ ಯೋಜನೆಗಳನ್ನು ನಾವು ಜಾರಿಗೊಳಿಸುತ್ತೇವೆ. ಎಲ್ಲ ಕ್ಷೇತ್ರಗಳಲ್ಲೂ ನನಗೆ ಉತ್ತಮ ಸ್ಪಂದನೆ ಸಿಗ್ತಿದೆ. ನಾಡಿನ ಜನರ ಕಷ್ಟವನ್ನು ಬಗೆಹರಿಸಲು ನಮಗೆ ಬಹುಮತ ನೀಡಲಿ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com