ಲೂಟಿ ಹೊಡೆತವೂ ತಿಳಿದಿದೆ, ಈ ಡಾಕ್ಟರ್‌ಗೂ ಲವ್ವಾಗಿದೆ: ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ; ಮಂಡ್ಯದ ಭಗ್ನಪ್ರೇಮಿಗೆ ನಮ್ಮ ಸಾಂತ್ವಾನಗಳು!
ಬೆಂಗಳೂರು: ಬಿಜೆಪಿಗರು ಶುದ್ಧ 40% ಪ್ರೇಮಿಗಳು, ಶೇ, 40 ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ , ರಾಜ್ಯ ಬಿಜೆಪಿ ಸಚಿವರಿಗೆ ಪ್ರೇಮಿಗಳ ದಿನಾಚರಣೆಯ ಶುಭಾಶಯ ತಿಳಿಸಿದೆ. ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ ಎಂದು ಟ್ವೀಟ್ ಮಾಡುವ ಮೂಲಕ ಸಿಎಂ ಬೊಮ್ಮಾಯಿ ಅವರ ಕಾಲೆಳೆದಿದೆ.
ಇನ್ನೂ ಸಂಸದ ತೇಜಸ್ವಿ ಸೂರ್ಯ ಅವರಿಗೆ ಟಾಂಗ್ ನೀಡಿರುವ ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು ಎಂದು ವ್ಯಂಗ್ಯ ಮಾಡಿದೆ. ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವುದು. ಸಿಎಂ ಮನೆಗೆ ಕಲ್ಲು ಹೊಡೆಯುವುದು. ರೈತರಿಗೆ ಅವಮಾನಿಸುವುದು. ಪ್ರೀತಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ಈ ಭಗ್ನಪ್ರೇಮಿಗೆ ಕೌನ್ಸ್‌ಲಿಂಗ್ ಅಗತ್ಯವಿದೆ ಎಂದಿದೆ.
"ಪ್ರೀತಿ ಮಧುರ, ತ್ಯಾಗ ಅಮರ ಎಂದು ಟ್ವೀಟ್ ಮಾಡುವ ಮೂಲಕ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಟಾಂಗ್ ನೀಡಿದೆ. ಕುರ್ಚಿಯೊಂದಿಗಿನ ಪ್ರೇಮದ ಸವಿಗಳಿಗೆಯ ನೆನಪು, ವಿರಹದ ನೋವು ಸದಾ ಕಾಡುತ್ತಿರುತ್ತದೆ, ಈಶ್ವರಪ್ಪನವರೇ ತಮಗೆ ವಿರಹದ ನೋವು ಭರಿಸುವ ಶಕ್ತಿ ಸಿಗಲಿ ಎಂದು ಟ್ವೀಟ್ ಮಾಡಿದೆ.
ಈ ಸ್ಪೆಷಲ್ ಡಾಕ್ಟರ್‌ಗೆ ಹೃದಯ ಬಡಿತವೂ ತಿಳಿಯುತ್ತದೆ. ಲೂಟಿ ಹೊಡೆತವೂ ತಿಳಿದಿದೆ! ಈ ಡಾಕ್ಟರ್‌ಗೂ ಲವ್ವಾಗಿದೆ - ಪಿಎಸ್ ಐ ಹುದ್ದೆಗಳ ಮೇಲೆ ಎಂದು ಡಾ. ಅಶ್ವತ್ಥ ನಾರಾಣ ವಿರುದ್ಧ ಕಿಡಿ ಕಾರಿದೆ.
ಬಿಜೆಪಿಗರದ್ದು ಗೋ ಪ್ರೀತಿಯಲ್ಲ, Go ಪ್ರೀತಿ, ಬಿಜೆಪಿಗರು ಗೋವಿನ ಎದುರು ಫ್ಲರ್ಟ್ ಮಾಡುತ್ತಾರೆ ಹೊರತು ಪ್ರೀತಿಯಲ್ಲ. ಒಮ್ಮೆ ತಿರಸ್ಕಾರ ಭಾವ ಮೂಡಿದರೆ ಮತ್ತೆಂದೂ ಅಲ್ಲಿ ಪ್ರೀತಿಗೆ ಜಾಗವಿಲ್ಲ.
ಮಂಡ್ಯದಲ್ಲಿ ತಿರಸ್ಕಾರದ ಪ್ರೇಮ ವೈಫಲ್ಯ ಅನುಭವಿಸಿ ನೋವಿನಲ್ಲಿರುವ ಭಗ್ನಪ್ರೇಮಿಗೆ ನಮ್ಮ ಸಾಂತ್ವಾನಗಳು ಎಂದು ಹೇಳುವ ಮೂಲಕ ಕಂದಾಯ ಸಚಿವ ಆರ್. ಅಶೋಕ್ ಕಾಲೆಳೆದಿದೆ.
ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ, "ಸಚಿವ ಹುದ್ದೆ" ಎಂಬ ಪ್ರೇಮ ವೈಫಲ್ಯದಿಂದ ಭಗ್ನಪ್ರೇಮಿಯಾಗಿ ತಿರುಗುತ್ತಿರುವವರ ನೋವು ಜಗತ್ತಿನ ಕಣ್ಣಿಗೆ ಕಾಣುವುದಿಲ್ಲ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಪ್ರೇಮದಲ್ಲಿ ಮುಳುಗಿದವರು ಸದಾ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಮತ್ತು ಆ ಭ್ರಮೆಗಳನ್ನೇ ವಾಸ್ತವ ಎಂದು ತಿಳಿದುಕೊಂಡಿರುತ್ತಾರೆ. ಇದು ಪ್ರೇಮದ ಮೊದಲ ಹಂತ!
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ