ಬಿಜೆಪಿಯ ಒಬ್ಬ ಕಾರ್ಯಕರ್ತನಾಗಿ ಯಡಿಯೂರಪ್ಪನವರ ಭಾಷಣ ನನಗೆ ಅತ್ಯಂತ ಸ್ಫೂರ್ತಿದಾಯಕ: ಪ್ರಧಾನಿ ಮೋದಿ

ಆಪರೇಷನ್ ಕಮಲ ನಂತರ 2019ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಪೂರ್ವ ಷರತ್ತಿನಂತೆ 2021ರ ಜುಲೈಯಲ್ಲಿ ಕಣ್ಣೀರು ಹಾಕುತ್ತಲೇ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ(B S Yedyurappa) ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದಿದ್ದರು.
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ನವದೆಹಲಿ: ಆಪರೇಷನ್ ಕಮಲ ನಂತರ 2019ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಪೂರ್ವ ಷರತ್ತಿನಂತೆ 2021ರ ಜುಲೈಯಲ್ಲಿ ಕಣ್ಣೀರು ಹಾಕುತ್ತಲೇ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ(B S Yedyurappa) ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದಿದ್ದರು.

ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಂದ ಕೆಲಸ ಆರಂಭಿಸಿ ಅನೇಕ ಹೋರಾಟ ನಡೆಸಿ, ಸಂಘಟನೆ ಮಾಡಿ ಪ್ರಮುಖ ಲಿಂಗಾಯತ ನಾಯಕರಾಗಿ, ರೈತ ನಾಯಕರಾಗಿ ಗುರುತಿಸಿಕೊಂಡು ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಯಡಿಯೂರಪ್ಪನವರ ಪಾತ್ರ ಪ್ರಮುಖ ಎಂಬುದನ್ನು ರಾಜ್ಯದ ಜನತೆ, ಬಿಜೆಪಿ ನಾಯಕರು, ಹೈಕಮಾಂಡ್ ಕೂಡ ಒಪ್ಪಿಕೊಳ್ಳುತ್ತದೆ.

ಮುಖ್ಯಮಂತ್ರಿ ಪದವಿಯನ್ನು ಬಿಟ್ಟುಕೊಟ್ಟ ನಂತರ ಯಡಿಯೂರಪ್ಪನವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ, ಹೈಕಮಾಂಡ್ ಅವರನ್ನು ಅನುಪಸ್ಥಿತಿ ಮಾಡುತ್ತಿದೆ ಎಂಬ ಟೀಕೆಗಳನ್ನು ವಿರೋಧ ಪಕ್ಷಗಳು ಆಗಾಗ ಮಾಡಿಕೊಂಡು ಬಂದಿವೆ. ಯಡಿಯೂರಪ್ಪನವರ ಕಣ್ಣೀರಿಗೆ ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಬೆಲೆ ತೆರಬೇಕಾಗುತ್ತದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ.

ಇದೀಗ ವಿಧಾನಸಭೆ ಚುನಾವಣೆಗೆ ದಿನ ಸಮೀಪಿಸುತ್ತಿದೆ. 15ನೇ ವಿಧಾನಸಭೆ ಅಧಿವೇಶನದಲ್ಲಿ ಮೊನ್ನೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಿದಾಯದ ಭಾಷಣ ಮಾಡಿದ್ದಾರೆ. ಇನ್ನು ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ ಬಿಜೆಪಿ ಪಕ್ಷ, ಅದನ್ನು ಕಟ್ಟಿ ಬೆಳೆಸಿದ್ದು, ರಾಜ್ಯ ಬಿಜೆಪಿಯನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು, ಮುಂದಿನ ದಿನಗಳಲ್ಲಿ ಪಕ್ಷದ ಬೆಳವಣಿಗೆಗೆ ತಾನು ಏನು ಮಾಡುತ್ತೇನೆ ಎಂಬ ವಿಚಾರಗಳನ್ನು ಹೇಳಿದ್ದರು.

ಅವರ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಟ್ವೀಟ್‌ ಮಾಡಿದ್ದಾರೆ. ಯಡಿಯೂರಪ್ಪ ಅವರ ಭಾಷಣ ನನಗೆ ಸ್ಫೂರ್ತಿದಾಯಕ ಎಂದಿದ್ದಾರೆ. ಮಾತ್ರವಲ್ಲದೇ, ಯಡಿಯೂರಪ್ಪ ಅವರ ಪಕ್ಷನಿಷ್ಠೆ ಕುರಿತು ಪ್ರಶಂಸೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಯಡಿಯೂರಪ್ಪ ಅವರ ಭಾಷಣದಲ್ಲಿ ನಮ್ಮ ನೈತಿಕತೆ ಅಡಕವಾಗಿ ಎಂದು ತಿಳಿಸಿದ್ದಾರೆ.

ಕನ್ನಡದಲ್ಲಿ ಟ್ವೀಟ್‌ ಮಾಡಿರುವ ಮೋದಿ: ಪ್ರಧಾನಿ ನರೇಂದ್ರ ಮೋದಿ ಅವರು ಯಡಿಯೂರಪ್ಪ ಅವರ ಭಾಷಣದ ಬಗ್ಗೆ ಇಂಗ್ಲಿಷ್‌ ಮತ್ತು ಕನ್ನಡ ಎರಡು ಭಾಷೆಯಲ್ಲೂ ಟ್ವೀಟ್‌ ಮಾಡಿದ್ದಾರೆ. ಇನ್ನು ಪ್ರಧಾನಿಗಳ ಟ್ವೀಟ್‌ಗೆ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಯಡಿಯೂರಪ್ಪನವರು ಮೊನ್ನೆ ಸದನದಲ್ಲಿ ಭಾಷಣದಲ್ಲಿ ನನ್ನನ್ನು ಪಕ್ಷದಿಂದ ಕಡೆಗಣಿಸುತ್ತಿದೆ, ನನಗೆ ಅನ್ಯಾಯ ಮಾಡಿದೆ ಎಂದು ವಿರೋಧ ಪಕ್ಷದವರು ಸೇರಿದಂತೆ ಹಲವರು ಟೀಕಿಸುತ್ತಿದ್ದಾರೆ. ಆದರೆ, ವಾಸ್ತವ ಬೇರೆ ಇದೆ. ಪಕ್ಷವಾಗಲಿ, ಪ್ರಧಾನಿ ಮೋದಿ ಅವರಾಗಲಿ ನನ್ನನ್ನು ಎಂದಿಗೂ ಕಡೆಗಣಿಸಿಲ್ಲ. ನನಗೆ ನೀಡಿರುವ ಸ್ಥಾನ, ತೋರಿದ ಗೌರವಕ್ಕೆ ಮೋದಿ ಅವರಿಗೆ ನಾನು ಸದಾ ಋುಣಿ ಎಂದು ಯಡಿಯೂರಪ್ಪ ವಿದಾಯದ ಭಾಷಣದಲ್ಲಿ ಹೇಳಿದ್ದರು.

ಪಕ್ಷ ಬಲಪಡಿಸಲು ಕೆಲಸ: ಪ್ರಧಾನಿಯವರ ಶ್ಲಾಘನೆಗೆ ಯಡಿಯೂರಪ್ಪನವರು ಧನ್ಯವಾದಗಳನ್ನು ಹೇಳಿದ್ದಾರೆ. ತಮ್ಮ ಸ್ಫೂರ್ತಿದಾಯಕ ನಾಯಕತ್ವದಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಕೂಡ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ, ಇನ್ನಷ್ಟು ಹುಮ್ಮಸ್ಸಿನಿಂದ ನಿರಂತರ ಕೆಲಸ ಮಾಡಲಿದ್ದೇವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com