ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ಟಿ-20 ಮ್ಯಾಚ್ ರೀತಿ, ಕೊನೆಯ ಓವರ್ವರೆಗೂ ಕುತೂಹಲವಿರುತ್ತದೆ: ಹೆಚ್ ಡಿ ಕುಮಾರಸ್ವಾಮಿ
ಶೃಂಗೇರಿ: ಜೆಡಿಎಸ್ ನಲ್ಲಿ ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ಗೊಂದಲ ಕ್ಷಣಕ್ಷಣಕ್ಕೆ ತೀವ್ರ ಕುತೂಹಲ ಕೆರಳಿಸುತ್ತಿದೆ. ಇದಕ್ಕೆ ಕಾರಣ ಹೆಚ್ ಡಿ ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಟಿಕೆಟ್ ಗಾಗಿ ಪ್ರಬಲ ಸ್ಪರ್ಧಿಯಾಗಿರುವುದು. ಅದಕ್ಕೆ ಅವರ ಪತಿ ಹೆಚ್ ಡಿ ರೇವಣ್ಣ ಮತ್ತು ಮಕ್ಕಳ ಬೆಂಬಲವೂ ಇದೆ.
ಇತ್ತ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರು ಸ್ವರೂಪ್ ಗೆ ಟಿಕೆಟ್ ನೀಡಲು ಹಠ ಹಿಡಿದು ಕುಳಿತಿದ್ದಾರೆ. ಇದೀಗ ಅಂತಿಮವಾಗಿ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ನಾಳೆ ನಡೆಯಲಿರುವ ಜೆಡಿಎಸ್ ನಾಯಕರು, ಕಾರ್ಯಕರ್ತರ ಸಭೆಯಲ್ಲಿ ಅಂತಿಮ ನಿರ್ಣಯವಾಗಲಿದೆ ಎಂದು ಸ್ವತಃ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಜೆಡಿಎಸ್ ಯಾತ್ರೆಯ ಮಧ್ಯೆ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ ಡಿಕೆ, ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ಟಿ-20 ಮ್ಯಾಚ್ ರೀತಿ ಕುತೂಹಲವಿದೆ. ಕೊನೆಯ ಓವರ್ವರೆಗೂ ಈ ಕುತೂಹಲವಿರಲಿದೆ. ಹಾಸನ ಕ್ಷೇತ್ರದಲ್ಲಿ ಟಿಕೆಟ್ ನೀಡಿಕೆ ಬಗ್ಗೆ ಚರ್ಚಿಸುವ ಸಲುವಾಗಿ ನಾಳೆ ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಆ ಸಭೆಗೆ ರೇವಣ್ಣ ಅವರನ್ನು ಕರೆದಿಲ್ಲ. ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ರಾಜ್ಯದ ಜನರಿಗೂ ಕುತೂಹಲವಿದೆ. ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರೆಲ್ಲರೂ ನನ್ನ ಕುಟುಂಬ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಬಿಜೆಪಿ ಸೋಲಿಸ್ತೇನೆ ಎಂದಿದ್ದೆ. ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಕಾರ್ಯಕರ್ತರ ಅಭಿಮಾನಕ್ಕೆ ಚ್ಯುತಿ ಬರದಂತೆ ಟಿಕೆಟ್ ನೀಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಹಾಸನ ಟಿಕೆಟ್ ಘೋಷಣೆ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಹಾಸನ ಜೆಡಿಎಸ್ ಟಿಕೆಟ್ ವಿಷಯ ಬೆಂಗಳೂರು ಅಂಗಳಕ್ಕೆ!
ಕಾಂಗ್ರೆಸ್ನವರು ಬಿಜೆಪಿಯ ಬಿ ಟೀಂ ಜೆಡಿಎಸ್ ಎಂದು ಹೇಳುತ್ತಾರೆ. ಬಿಜೆಪಿಯವರು ಕಾಂಗ್ರೆಸ್ನ ಬಿ ಟೀಂ ಎಂದು ಹೇಳುತ್ತಾರೆ. ಆದರೆ ನಾವು ಯಾರ ಬಿ ಟೀಂ ಕೂಡ ಅಲ್ಲ, ಈ ರಾಜ್ಯದ ಜನರ ಟೀಂ ಎಂದು ಕುಮಾರಸ್ವಾಮಿ ಹೇಳಿದರು.
ಕುಮಾರಸ್ವಾಮಿ ಅವರು ಕೆಲವು ದಿನಗಳ ಹಿಂದೆ ಬ್ರಾಹ್ಮಣರ ವಿರುದ್ಧ ನೀಡಿದ್ದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ನಂತರ ಸ್ಪಷ್ಟನೆ ನೀಡಿದ್ದ ಅವರು ಮಹಾರಾಷ್ಟ್ರ ಮೂಲದ ಬ್ರಾಹ್ಮಣರು, ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ ಬ್ರಾಹ್ಮಣರ ಬಗ್ಗೆ ನಾನು ಹಾಗೆ ಹೇಳಿದೆನೇ ವಿನಃ ನಮ್ಮ ರಾಜ್ಯದವರ ಬಗ್ಗೆ ಅಲ್ಲ ಎಂದಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶೃಂಗೇರಿಗೆ ಭೇಟಿ ನೀಡಿದ್ದರು. ಅದಾದ ಬೆನ್ನಲ್ಲೇ ಎಚ್ಡಿಕೆ ಶೃಂಗೇರಿಗೆ ಭೇಟಿ ನೀಡಿದ್ದಾರೆ.
ಮೋದಿ ಕೊಡುಗೆ ಏನು: ಇದೇ ವೇಳೆ ಕುಮಾರಸ್ವಾಮಿಯವರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ರಾಜ್ಯದ ಜನರು ಭೂಮಿ ನೀಡಿದ್ದಾರೆ. ಕೆಲವರಿಗೆ ಇನ್ನೂ ಹಣ ಬಂದಿಲ್ಲ. ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಮೋದಿ ಕೊಡುಗೆ ಶೂನ್ಯ ಎಂದು ಟೀಕಿಸಿದ್ದಾರೆ. ಮಾರ್ಚ್ 11ರಂದು ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಗೆ ಮೋದಿ ಬರುತ್ತಾರೆ. ತಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಬಿಂಬಿಸಲು ಅವರು ಬರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ