ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ವೀರೇಂದ್ರ ಪಾಟೀಲ್ ಪರಿಸ್ಥಿತಿ ಏನು ಇತ್ತು ಅಂತ ನನಗೆ ಗೊತ್ತಿತ್ತು, ಮೋದಿ ಅವರಿಗೆ ರಾಜಕೀಯ ಏನೆಂದು ಗೊತ್ತಿಲ್ಲ: ಡಿ.ಕೆ ಶಿವಕುಮಾರ್

ಮೋದಿ ಅವರು ಕಲಾವಿದರು. ನಾವು ಕಲಾವಿದರನ್ನ ಸ್ಮರಿಸಿಕೊಳ್ತೀವಿ. ಪ್ರಧಾನಿ ಮೋದಿ ಅವರ ಬಗ್ಗೆ ಗೌರವ ಇದೆ. ಆದರೆ ಯಡಿಯೂರಪ್ಪರಿಗೆ ಕೊಟ್ಟ ನೋವು, ಕಣ್ಣೀರಿನ‌ ಬಗ್ಗೆ ಮೋದಿ ಅವರು ಹೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
Published on

ಬೆಂಗಳೂರು: ಮೋದಿ ಅವರು ಕಲಾವಿದರು. ನಾವು ಕಲಾವಿದರನ್ನ ಸ್ಮರಿಸಿಕೊಳ್ತೀವಿ. ಪ್ರಧಾನಿ ಮೋದಿ ಅವರ ಬಗ್ಗೆ ಗೌರವ ಇದೆ. ಆದರೆ ಯಡಿಯೂರಪ್ಪರಿಗೆ ಕೊಟ್ಟ ನೋವು, ಕಣ್ಣೀರಿನ‌ ಬಗ್ಗೆ ಮೋದಿ ಅವರು ಹೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಬಿಎಸ್‌ ಯಡಿಯೂರಪ್ಪ ಅವರು ವಿಧಾನಸೌಧದಿಂದ ರಾಜಭವನಕ್ಕೆ ಹೋಗೋವಾಗ ಕಣ್ಣೀರು ಇಟ್ಟರು. ಪ್ರಧಾನಿ ಮೋದಿ ಅದರ ಬಗ್ಗೆ ಉತ್ತರ ಕೊಡಲಿ. ಅವರ ಕುಟುಂಬದವರಿಗೆ, ಸ್ನೇಹಿತರಿಗೆ ಐಟಿ ರೇಡ್ ಆಯ್ತು. ಇಡಿ ಸಮನ್ಸ್ ಆಯ್ತಲ್ಲ. ಅದೆಲ್ಲ ಏನೆಂದು ಹೇಳಬೇಕು ಎಂದು ಸವಾಲು ಹಾಕಿದರು.

ರಾಜ್ಯದ, ರಾಷ್ಟ್ರದ ಜನತೆಗೆ ಇದರ ಬಗ್ಗೆ ಹೇಳಬೇಕು. ಇದರ ಹಿನ್ನೆಲೆ ಏನು, ಎಷ್ಟು ಬಾರಿ ಅವರನ್ನ ಅಧಿಕಾರಿಗಳು ಕರೆಸಿಕೊಂಡಿದ್ರು. ಎಲ್ಲವೂ ಏನೇನಾಯ್ತು ಜನರ ಮುಂದೆ ಇಡಿ. ಬಿಎಸ್‌ವೈ ಯಾಕೆ ಕಣ್ಣೀರು ಹಾಕಿದ್ರು? ಯಡಿಯೂರಪ್ಪರನ್ನ ಯಾಕೆ ಸಿಎಂ ಸ್ಥಾನದಿಂದ ಇಳಿಸಿದ್ರು? ಎಂಬುದಕ್ಕೆ ಉತ್ತರವನ್ನು ಕೊಡಲಿ ಎಂದರು.

104 ಸ್ಥಾನ ಪಡೆದು ಅವರ ನಾಯಕತ್ವದಲ್ಲಿ ಸರ್ಕಾರ ಮಾಡಿದ್ರು. ಯಾಕೆ ಅವರನ್ನ ಇಳಿಸಿದ್ರಿ ಜನತೆಗೆ ಹೇಳಬೇಕು. ಆಪರೇಷನ್ ಮಾಡಲು ಅವರು ಬೇಕಿತ್ತು. ಸರ್ಕಾರ ಮಾಡಿದ್ರು‌,ಯಾಕೆ ಅವರನ್ನ ವಜಾ ಮಾಡಿದ್ರು ಎಂಬುದಕ್ಕೆ ಪ್ರಧಾನಿ ಉತ್ತರವನ್ನು ನೀಡಲಿ ಎಂದು ಸವಾಲು ಹಾಕಿದರು.

ವಿರೇಂದ್ರ ಪಾಟೀಲ್, ನಿಜಲಿಂಗಪ್ಪಕ್ಕೆ ಕಾಂಗ್ರೆಸ್ ಅಪಮಾನ ಮಾಡಿದೆ ಎಂಬ ಮೋದಿ ಆರೋಪ ವಿಚಾರವಾಗಿ ಮಾತನಾಡಿ, ವೀರೇಂದ್ರ ಪಾಟೀಲ್ ಪರಿಸ್ಥಿತಿ ಏನು ಇತ್ತು ಅಂತ ನನಗೆ ಗೊತ್ತು. ಮೋದಿ ಅವರಿಗೆ ಅವರ ರಾಜಕೀಯ ಏನು ಗೊತ್ತಿಲ್ಲ. ನಾನು ವಿರೇಂದ್ರ ಪಾಟೀಲ್ ಜೊತೆ ಶಾಸಕ ಆಗಿದ್ದವನು. ಆರೋಗ್ಯ ಪರಿಸ್ಥಿತಿ ಸರಿ ಇರಲಿಲ್ಲ. ವೀರೇಂದ್ರ ‌ಪಾಟೀಲ್ ಆರೋಗ್ಯ ಚೇತರಿಸಿಕೊಳ್ಳದ ಸ್ಥಿತಿಯಲ್ಲಿ ಇದ್ದರು.

ಅದನ್ನ ಮಧ್ಯರಾತ್ರಿ ಎಲ್ಲರ ಬಳಿ ಕೂತು ಚರ್ಚೆ ಮಾಡಿದ್ರು. ಡಾಕ್ಟರ್ ಆರೋಗ್ಯ ಸರಿ ಇಲ್ಲ ಅಂತ ಹೇಳಿದ್ರು. ಆರೋಗ್ಯ ಸರಿ ಇಲ್ಲ ಅಂತ ರಾಜೀವ್ ಗಾಂಧಿ ಅವರನ್ನು ಕೆಳಗೆ ಇಳಿಸಿದ್ರು ಅಷ್ಟೆ. ಇಂದಿರಾಗಾಂಧಿ ಮೇಲೆ ಸ್ಪರ್ಧೆ ಮಾಡಿದವರನ್ನ ಮತ್ತೆ ಲೋಕಸಭೆಗೆ ನಿಲ್ಲಿಸಿದ್ರು. ಮತ್ತೆ ಕೇಂದ್ರದಲ್ಲಿ ಮಂತ್ರಿ ಮಾಡಿದ್ದು ಕಾಂಗ್ರೆಸ್ ‌ಪಕ್ಷ. ಅವರನ್ನ ಕೇಂದ್ರದಲ್ಲಿ ಮಂತ್ರಿ ಮಾಡಿದ ಹೃದಯ ಶ್ರೀಮಂತಿಗೆ ಗಾಂಧಿ ಕುಟುಂಬಕ್ಕೆ ಇತ್ತು. ಇದನ್ನ ಯಾರು ಮರೆಯೋದಕ್ಕೆ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com