ಅಮಿತ್ ಶಾ ಆಟ ನನ್ನ ಮುಂದೆ ನಡೆಯಲ್ಲ, ದೇವೇಗೌಡರ ಕಾಲ್ಬೆರಳ ಉಗುರಿಗೂ ಅವರು ಸಮವಲ್ಲ: ಎಚ್ ಡಿ ಕುಮಾರಸ್ವಾಮಿ ಕಿಡಿ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕಾಲ್ಬೆರಳ ಉಗುರಿಗೂ ಸಮನಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕಾಲ್ಬೆರಳ ಉಗುರಿಗೂ ಸಮನಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಹೇಳುವ ಅಮಿತ್ ಶಾ ಒಂದೇ ಒಂದು ಭ್ರಷ್ಟಾಚಾರವನ್ನು ಜನರ ಮುಂದಿಡಬೇಕಿತ್ತು. ಆದರೆ ಜೆಡಿಎಸ್ ಪಕ್ಷದ ಭಯದಿಂದ ಬಾಯಿಗೆ ಬಂದಹಾಗೆ ಹೇಳಿ ಹೋಗಿದ್ದಾರೆ ಎಂದು ಕಿಡಿಕಾರಿದರು. ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ, ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ, ಅಥವಾ ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಕುಟುಂಬ ಒಂದೇ ಒಂದು ಭ್ರಷ್ಟಾಚಾರ ಮಾಡಿದ್ದರೆ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ದೇಶದಲ್ಲಿ 800ಕ್ಕೂ ಹೆಚ್ಚು ಶಾಸಕರನ್ನು, ಸಂಸದರನ್ನು ಖರೀದಿ ಮಾಡಿರುವ ಇತಿಹಾಸ ಇದ್ರೆ ಅದು ಬಿಜೆಪಿಯದ್ದು. ಚುನಾವಣೆಗೂ ಮುನ್ನವೇ ಆಪರೇಷನ್‌ ಕಮಲ ಹುನ್ನಾರ ಮಾಡಿದೆ. ರಾಜ್ಯದಿಂದ ಬಿಜೆಪಿ ಪಕ್ಷವನ್ನು ಕಳುಹಿಸಲು ಜೆಡಿಎಸ್‌ ಪಣ ತೊಟ್ಟಿದೆ ಎಂದ ಅವರು, ನಿಮ್ಮ ರಾಜಕಾರಣ ಉತ್ತರ ಭಾರತದಲ್ಲಿ ಇಟ್ಟುಕೊಳ್ಳಿ, ಕರ್ನಾಟಕದಲ್ಲಿ ಅಲ್ಲ ಎಂದು ಅಮಿತ್‌ ಶಾ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ಅಮಿತ್ ಶಾ ತನ್ನ ಮಗನಿಗೆ ಬಿಸಿಸಿಐ ವಾರಸುದಾರಿಕೆ ಯಾವ ಅರ್ಹತೆ ಪ್ರತಿಭೆ ಮೇಲೆ ಕೊಡಿಸಿದ್ದಾರೆ ಗೊತ್ತು. ಇವರ ಪಕ್ಷದ ಭ್ರಷ್ಟಾಚಾರದಿಂದ ಬೇಸತ್ತು ಜನ ಸಾಯುತ್ತಿದ್ದಾರೆ. ಮೊನ್ನೆ ತುಮಕೂರಿನಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದ, ನಿನ್ನೆ ಬೆಂಗಳೂರಿನಲ್ಲಿ ಇವರ ಪಕ್ಷದ ಶಾಸಕರ ಹೆಸರನ್ನು ಬರೆದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ನೀಡಿರುವ ಹೊಸ ವರುಷದ ಕೊಡುಗೆ ಎಂದು ಲೇವಡಿ ಮಾಡಿದರು.

ಮುಂಬರುವ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ ಯಾರು ಇವರ ಮನೆ ಬಾಗಿಲಿಗೆ ಅರ್ಜಿ ಹಿಡಿದುಕೊಂಡು ಹೋಗಿದ್ದರು. 2008 ರಲ್ಲಿ ಇದೇ ಬಿಜೆಪಿಯವರು ಜೆಡಿಎಸ್ ಮನೆ ಬಾಗಿಲ ಬಳಿ ನಿಂತಿದ್ದರು ಎಂದು ಕುಟುಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com