ಬಿಜೆಪಿಯತ್ತ ಜೆಡಿಎಸ್ ಶಾಸಕ- ಎಚ್.ಸಿ ಬಾಲಕೃಷ್ಣ ಹೊಸ ಬಾಂಬ್: ಯಾರ ಗಾಳಕ್ಕೂ ಬೀಳಲ್ಲ, ನಾನು ಗೌಡರ ಕುಟುಂಬದ ನಿಯತ್ತಿನ ನಾಯಿ-ಮಂಜುನಾಥ್

ಇದೀಗ ಮಾಗಡಿ ಕ್ಷೇತ್ರ ಶಾಸಕರ ಕರಿತು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಜೆಡಿಎಸ್​ ಶಾಸಕರಾಗಿ ಆಯ್ಕೆಯಾದ ಬಳಿಕ ಬಿಜೆಪಿ ಸೇರಲು ಮಂಜುನಾಥ್ ಅವರು ಸಿ.ಪಿ.ಯೋಗೇಶ್ವರ್​ ಜೊತೆ ಮಾತುಕತೆ ನಡೆಸಿದ್ದರಂತೆ.
ಎಚ್.ಸಿ ಬಾಲಕೃಷ್ಣ
ಎಚ್.ಸಿ ಬಾಲಕೃಷ್ಣ

ರಾಮನಗರ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯ ಜತೆಜತೆಗೆ ಸ್ಫೋಟಕ ಹೇಳಿಕೆಯೂ ಕೇಳಿಬರುತ್ತಿದೆ. ಇದೀಗ ಮಾಗಡಿ ಕ್ಷೇತ್ರ ಶಾಸಕರ ಕರಿತು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಜೆಡಿಎಸ್​ ಶಾಸಕರಾಗಿ ಆಯ್ಕೆಯಾದ ಬಳಿಕ ಬಿಜೆಪಿ ಸೇರಲು ಮಂಜುನಾಥ್ ಅವರು ಸಿ.ಪಿ.ಯೋಗೇಶ್ವರ್​ ಜೊತೆ ಮಾತುಕತೆ ನಡೆಸಿದ್ದರಂತೆ.

ಈ ಕುರಿತು ಯೋಗೇಶ್ವರ್ ಹಾಗೂ ನನ್ನ(ಬಾಲಕೃಷ್ಣ) ಜೊತೆ ಹಲವು ಬಾರಿ ಮಂಜುನಾಥ್​ ಮಾತುಕತೆ ನಡೆಸಿದ್ದರು. ಯೋಗೇಶ್ವರ್​ರ ಕಾರಿನಲ್ಲಿ ಬೆಂಗಳೂರು ಸುತ್ತಾಡಿದ್ದರು. ಕೊನೆಗೆ ತಮ್ಮ ಧರ್ಮಪತ್ನಿ ಬಳಿ ಮಾತಾಡಿ ಮುಂದಿನ ನಿರ್ಣಯ ತೆಗೆದುಕೊಳ್ಳುವುದಾಗಿಯೂ ಹೇಳಿದ್ದರು.

‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಹೆದರಿಕೊಂಡು ಅವರು ಇನ್ನೂ ಜೆಡಿಎಸ್‌ನಲ್ಲಿ ಇದ್ದಾರೆ. ನನ್ನಷ್ಟು ಅವರಿಗೆ ಧೈರ್ಯ ಇಲ್ಲ. ಆದರೆ, ಸಚಿವ ಅಶ್ವತ್ಥನಾರಾಯಣ ಜೊತೆ ಅವರು ಯಾವಾಗ ಬಿಜೆಪಿಗೆ ಕಾಲು ಕೀಳುತ್ತಾರೋ ಕಾದುನೋಡಿ’ ಎಂದು ಬಾಲಕೃಷ್ಣ ಹೇಳಿದ್ದಾರೆ. 

ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್​ನಿಂದ ಗೆದ್ದು ಬಿಜೆಪಿ ಪಕ್ಷಕ್ಕೆ ಸೇರಲು ಶಾಸಕ ಎ.ಮಂಜುನಾಥ್ ಮುಂದಾಗಿದ್ದರು. ಈ ಸಂಬಂಧ ಸಿ.ಪಿ.ಯೋಗೇಶ್ವರ್ ಜೊತೆ ಮಾತುಕತೆ ನಡೆಸಿದ್ದರು. ಬಾಲಕೃಷ್ಣ ಅವರು ಬಿಜೆಪಿಗೆ ಬಂದ್ರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧೆ ಮಾಡುವೆ. ಬಾಲಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿಗೆ ಬರಬೇಕು. ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿ ಎಂದು ಸ್ವತಃ ಮಂಜುನಾಥ್​ ಅವರೇ ಹೇಳಿದ್ದರು ಎಂದು ಬಾಲಕೃಷ್ಣ ಹೇಳಿದ್ದಾರೆ.

ಬಾಲಕೃಷ್ಣ ಅವರ ಹೇಳಿಕೆ ಬೆನ್ನಲ್ಲೇ ತುರ್ತು ಸುದ್ದಿಗೋಷ್ಠಿ ಕರೆದ ಶಾಸಕ ಎ. ಮಂಜುನಾಥ್‌ ಅವರು, ‘ಜೆಡಿಎಸ್‌ ನನಗೆ ಎಲ್ಲವನ್ನೂ ನೀಡಿದೆ. ಹೀಗಿರುವಾಗ ಜೆಡಿಎಸ್‌ ಬಿಟ್ಟು ಬಿಜೆಪಿ ಏಕೆ ಸೇರಲಿ. ನಾನು ದೇವೇಗೌಡರ ಕುಟುಂಬದ ನಿಯತ್ತಿನ ನಾಯಿ’ ಎಂದು ಸಮಜಾಯಿಷಿ ನೀಡಿದರು.

ಸುದ್ದಿಗೋಷ್ಠಿಯುದ್ದಕ್ಕೂ ಎಚ್.ಸಿ. ಬಾಲಕೃಷ್ಣ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಅವರು, ‘ಎಚ್‌.ಸಿ. ಬಾಲಕೃಷ್ಣ ಅವರೇ ಸಿ.ಪಿ. ಯೋಗೇಶ್ವರ್ ಅವರನ್ನು ನನ್ನ ಬಳಿ ಕಳುಹಿಸಿ ಗಾಳ ಹಾಕಿದ್ದರು. ನಾನು ದೇವೇಗೌಡ ಅವರು ಬೆಳೆಸಿದ ತಿಮಿಂಗಿಲ. ಅಷ್ಟು ಸುಲಭವಾಗಿ ಯಾರ ಗಾಳಕ್ಕೂ ಬೀಳುವ ಮೀನು ಅಲ್ಲ’ ಎಂದು ತಿರುಗೇಟು ನೀಡಿದರು.

ನನ್ನನ್ನು ಯೋಗೇಶ್ವರ್‌ ವಿಧಾನಸೌಧಕ್ಕೆ ಕರೆಸಿದ್ದು ನಿಜ. ಆದರೆ, ನಾನು ಕೂಡಲೇ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ವಿಷಯ ತಿಳಿಸಿದ್ದೆ. ಸಚಿವ ಡಾ.ಅಶ್ವತ್ಥನಾರಾಯಣ ನನ್ನನ್ನು ಎಂದಿಗೂ ಬಿಜೆಪಿ ಸೇರುವಂತೆ ಕರೆದಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com