'ಈ ಬಾರಿ ಚಾಮುಂಡೇಶ್ವರಿಯಲ್ಲಿ ಜಿ ಟಿ ದೇವೇಗೌಡಗೆ ತಕ್ಕ ಪಾಠ ಕಲಿಸಬೇಕು': ಸಿದ್ದರಾಮಯ್ಯ ಅಂಡ್ ಟೀಮ್ ಲೆಕ್ಕಾಚಾರ!

ಕೋಲಾರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ರಾಜಕೀಯ ಪ್ರತಿಸ್ಪರ್ಧಿ ಜಿ.ಟಿ.ದೇವೇಗೌಡ ಮತ್ತು ಜೆಡಿಎಸ್ ಸೋಲುವಂತೆ ಮಾಡಿ, ಕಳೆದುಹೋದ ಚಾಮುಂಡೇಶ್ವರಿ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ಗೆ ದಕ್ಕಿಸಿಕೊಡಲು ಪಣ ತೊಟ್ಟಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ಕೋಲಾರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ರಾಜಕೀಯ ಪ್ರತಿಸ್ಪರ್ಧಿ ಜಿ.ಟಿ.ದೇವೇಗೌಡ ಮತ್ತು ಜೆಡಿಎಸ್ ಸೋಲುವಂತೆ ಮಾಡಿ, ಕಳೆದುಹೋದ ಚಾಮುಂಡೇಶ್ವರಿ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ಗೆ ದಕ್ಕಿಸಿಕೊಡಲು ಪಣ ತೊಟ್ಟಿದ್ದಾರೆ.

1983ರಿಂದ ಐದು ಬಾರಿ ತಮ್ಮನ್ನು ಆಯ್ಕೆ ಮಾಡಿದ ಚಾಮುಂಡೇಶ್ವರಿಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವಿನ ನಗೆ ಬೀರಲಿದೆ ಎಂಬುದನ್ನು ತನ್ನ ವಿರೋಧಿಗಳಿಗೆ ಸಾಬೀತುಪಡಿಸಲು ಸಿದ್ದರಾಮಯ್ಯ ಲೆಕ್ಕಾಚಾರದ ನಡೆಗಳನ್ನು ಪ್ರಾರಂಭಿಸಿದ್ದಾರೆ ಮತ್ತು ದೇವೇಗೌಡರ ವಿರುದ್ಧ ಮುನಿಸಿಕೊಂಡಿರುವ ಜೆಡಿಎಸ್ ಅತೃಪ್ತ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ.

2018ರಲ್ಲಿ ಸಿದ್ದರಾಮಯ್ಯನವರನ್ನು ಹೀನಾಯವಾಗಿ ಸೋಲಿಸಿ ಜೆಡಿಎಸ್ ಚಾಮುಂಡೇಶ್ವರಿಯಲ್ಲಿ ಗೆಲುವು ಕಂಡಿತು. ಕಳೆದ ಬಾರಿ ಬಾದಾಮಿಯನ್ನು ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡು ಶಾಸಕರಾಗಿ ಆಯ್ಕೆಯಾದ ಸಿದ್ದರಾಮಯ್ಯ ಈ ಬಾರಿ ಮತ್ತೆ ಬಾದಾಮಿಯನ್ನು ಆಯ್ದುಕೊಳ್ಳುವಂತೆ ಕಾಣುತ್ತಿಲ್ಲ. ಈ ಬಾರಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಹೇಗಾದರೂ ಮಾಡಿ ಜಿ ಟಿ ದೇವೇಗೌಡರಿಗೆ ಒಂದು ಪಾಠ ಕಲಿಸಬೇಕು ಎಂದು ನಿರ್ಧರಿಸಿದ್ದಾರಂತೆ. ದೇವೇಗೌಡರ ಸೋಲನ್ನು ಸಿದ್ದರಾಮಯ್ಯನವರ ಗೆಲುವೆಂದೇ ಆಚರಿಸುವುದಾಗಿ ಕೆಲ ಕಾಂಗ್ರೆಸ್ಸಿಗರು ಹೇಳಿಕೊಳ್ಳುತ್ತಿದ್ದಾರೆ.

ಇದು ನನ್ನ ಕೊನೆಯ ಚುನಾವಣೆ: 2023ನೇ ವಿಧಾನಸಭೆ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ. ನಂತರ ತಮ್ಮ ನಾಲ್ಕು ದಶಕಗಳ ಪೂರ್ಣ ಪ್ರಮಾಣದ ರಾಜಕೀಯಕ್ಕೆ ಅವರು ಗುಡ್ ಬೈ ಹೇಳುವ ಮನಸ್ಸಿನಲ್ಲಿದ್ದಾರೆ. ಒಂದು ಕಾಲದಲ್ಲಿ ತಮ್ಮ ಅನುಯಾಯಿ ನಂತರ ರಾಜಕೀಯ ಪ್ರತಿಸ್ಪರ್ಧಿಯಾದ ಜಿ ಟಿ ದೇವೇಗೌಡರಿಗೆ ಸೋಲಿನ ರುಚಿ ತೋರಿಸಬೇಕು ಎಂಬ ಇರಾದೆ ಸಿದ್ದರಾಮಯ್ಯನವರದ್ದು. ಅವರು ಕಳೆದ ಬಾರಿ ಸಿದ್ದರಾಮಯ್ಯ ನವರನ್ನು 36,042 ಮತಗಳ ಅಂತರದಿಂದ ಸೋಲಿಸಿದ್ದರು. ಮೈಸೂರು ಭಾಗದಲ್ಲಿ ಜಿ ಟಿ ದೇವೇಗೌಡರ ಪ್ರಭಾವ ಕೂಡ ಸಾಕಷ್ಟಿದೆ.

ಕಳೆದ ಎರಡು ವರ್ಷಗಳಿಂದ ದೇವೇಗೌಡರು ಜೆಡಿಎಸ್ ನಲ್ಲಿ ಇದ್ದರೂ ಇಲ್ಲದಂತೆ ಇದ್ದರು. ಕ್ಷೇತ್ರದ ಕೆಲಸ, ಅಲ್ಲಿನ ಜನರೊಂದಿಗೆ ಹತ್ತಿರವಾಗಿದ್ದರೇ ಹೊರತು ಜೆಡಿಎಸ್ ನಿಂದ ದೂರವುಳಿದಿದ್ದರು. ಕೊನೆಗೆ ಅವರ ಮನೆಗೆ ಹೋಗಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಸಮಾಧಾನ ಮಾಡಿ ಮನವೊಲಿಸಿ ಪಕ್ಷದಲ್ಲಿಯೇ ಇರುವಂತೆ ಮಾಡಿದ್ದಾರೆ. ಇನ್ನೂ ಜೆಡಿಎಸ್ ನೊಳಗೆ ಆ ಭಿನ್ನಮತ ಶಮನ ಆಗಿಲ್ಲ. ಇದನ್ನೇ ಲಾಭ ಮಾಡಿಕೊಳ್ಳಲು ಸಿದ್ದರಾಮಯ್ಯ ಮತ್ತು ಅವರ ಅನುಯಾಯಿಗಳು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಮೈಸೂರು-ಹುಣಸೂರು ರಸ್ತೆಯ ಲಿಂಗದೇವರ ಕೊಪ್ಪಲುವಿನಲ್ಲಿ ನಾಳೆ ಶನಿವಾರ ನಡೆಯಲಿರುವ ಸಮಾವೇಶದಲ್ಲಿ ಜಿಪಂ ಮಾಜಿ ಸದಸ್ಯ ಬೀರೇಹುಂಡಿ ಬಸವಣ್ಣ, ಮಾವಿನಹಳ್ಳಿ ಸಿದ್ದೇಗೌಡ, ಮಾದೇಗೌಡ, ಕೆಂಪನಾಯಕ ಸೇರಿದಂತೆ ಹಲವು ಮುಖಂಡರು ಸಾವಿರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಸೇರಲಿದ್ದಾರೆ. 2018ರ ಚುನಾವಣೆಗೆ ಪೂರ್ವಭಾವಿಯಾಗಿ ಕುಮಾರಪರ್ವಕ್ಕೆ ಜೆಡಿಎಸ್ ಧ್ವಜಾರೋಹಣ ಮಾಡಿದ ಸ್ಥಳದಲ್ಲಿಯೇ ಅತೃಪ್ತ ಮುಖಂಡರು ಸಭೆಗಳನ್ನು ಆಯೋಜಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಕೆ.ಮರೀಗೌಡ ಮಾತನಾಡಿ, 2013ರಿಂದ 2018ರವರೆಗೆ ಚಾಮುಂಡೇಶ್ವರಿ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿ, 1500 ಕೋಟಿ ರೂ.ಗಳನ್ನು ಕ್ಷೇತ್ರದ ಅಭಿವೃದ್ಧಿಗೆ ವ್ಯಯಿಸಿದ ಸಿದ್ದರಾಮಯ್ಯ ಅವರಿಗೆ ಈ ಸಮಾವೇಶ ಶಕ್ತಿ ಪ್ರದರ್ಶನವಾಗಲಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಅಖಂಡವಾಗಿ ಗೆಲ್ಲಿಸುವ ಮೂಲಕ ಕ್ಷೇತ್ರದ ಜನತೆ ಸಿದ್ದರಾಮಯ್ಯ ಅವರ ಮೇಲೆ ಪ್ರೀತಿಯನ್ನು ಹರಿಸಲಿದ್ದಾರೆ ಎಂದರು. ಸಾಧನೆಗಳನ್ನು ಪಟ್ಟಿ ಮಾಡಿದ ಅವರು, ಎಸ್‌ಸಿ/ಎಸ್‌ಟಿ ವಿಶೇಷ ಘಟಕದ ಅನುದಾನದಲ್ಲಿ ಗ್ರಾಮಗಳು ಮತ್ತು ದಲಿತ ಕಾಲೋನಿಗಳನ್ನು ಅಭಿವೃದ್ಧಿಪಡಿಸಲಾಗಿದೆ, ಮಂಡಗಳ್ಳಿ ಬಳಿ 5,000 ಮನೆಗಳನ್ನು ನಿರ್ಮಿಸಿ, 2,400 ಮಂಜೂರು ಮಾಡಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com