ಪ್ರಧಾನಿ ಮೋದಿ, ಶಾ ಪ್ರಚಾರ ಮಾಡಿದ್ರೂ ಕೋಲಾರದಲ್ಲಿ ಗೆಲುವು ಖಚಿತ: ಸಿದ್ದರಾಮಯ್ಯ

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ಮಾಡಿದ್ರೂ ಕೋಲಾರ ಕ್ಷೇತ್ರದಲ್ಲಿ ತಮ್ಮ ಗೆಲುವು ಖಚಿತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ

ಮೈಸೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ಮಾಡಿದ್ರೂ ಕೋಲಾರ ಕ್ಷೇತ್ರದಲ್ಲಿ ತಮ್ಮ ಗೆಲುವು ಖಚಿತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಯಸ್ಸು ಹಾಗೂ ದೂರದ ಸಮಸ್ಯೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಕ್ಷೇತ್ರದ ಬದಲು ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್, ಸಂತೋಷ್ ಬರಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಜಾ, ಪ್ರಧಾನಿ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಯಾರೇ ಬಂದೂ ನನ್ನು ವಿರುದ್ಧವಾಗಿ ಪ್ರಚಾರ ಮಾಡಲಿ, ಕೋಲಾರದಿಂದ ಗೆಲುವು ನಿಶ್ಚಿತ ಎಂದರು. 

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ನಾಲ್ಕು ತಿಂಗಳಷ್ಟೇ ಬಾಕಿಯಿರುವಂತೆಯೇ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸಿದಾಗಿನಿಂದಲೂ ಋಣಾತ್ಮಕ ಪ್ರಚಾರ ಶುರುವಾಗಿದ್ದು, ಜಿಲ್ಲೆಯಲ್ಲಿ ಕರಪತ್ರ ಹಂಚಲಾಗುತ್ತಿದೆ ಎಂಬ ವರದಿಗಳು ಬಂದಿವೆ.

ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ,  2018 ರ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಯಲ್ಲೂ ಅದೇ ರೀತಿ ಪ್ರಯತ್ನಿಸಲಾಯಿತು ಮತ್ತು ಅಮಿತ್ ಶಾ ಮತ್ತು ಇತರ ಹಿರಿಯ ಬಿಜೆಪಿ ನಾಯಕರ ಪ್ರಚಾರದ ಹೊರತಾಗಿಯೂ ತಾನು ಚುನಾವಣೆಯಲ್ಲಿ ಗೆದಿದ್ದಾಗಿ ತಿಳಿಸಿದರು. 

ಸಿದ್ದರಾಮಯ್ಯ ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎಂಬ ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ ಟಿ ದೇವೇಗೌಡರ ವಿರುದ್ಧ 36 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋತರೆ, ಬಾದಾಮಿಯಲ್ಲಿ ಬಿಜೆಪಿಯ ಬಿ ಶ್ರೀರಾಮುಲು ವಿರುದ್ಧ 1,700 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 

ಬಾದಾಮಿ ದೂರದಲ್ಲಿರುವುದು ಮತ್ತು ವಯಸ್ಸಿನ ಕಾರಣ ಅಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಮಾಜಿ ಸಿಎಂ ಸ್ಪಷ್ಟಪಡಿಸಿದರು. ಬಾದಾಮಿ ಜನರು ನಾನು ಅಲ್ಲಿಯೇ ಸ್ಪರ್ಧಿಸಲು ಬಯಸುತ್ತಿದ್ದಾರೆ, ಅಲ್ಲದೇ ಹೆಲಿಕಾಪ್ಟರ್ ಪ್ರಾಯೋಜಿಸಲು ಸಿದ್ಧರಿದ್ದಾರೆ ಆದರೆ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ದೂರದ ಕಾರಣ ಕೋಲಾರದಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ತಿಳಿಸಿದರು. 

ಕರ್ನಾಟಕ ಸರ್ಕಾರವನ್ನು ಪ್ರಧಾನಿ ಹೊಗಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದರು.  "ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣದಲ್ಲಿ  ಹಣ ಸಂಪಾದಿಸಿದ್ದು ಸತ್ಯವಲ್ಲವೇ? ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪಾಲ್ ಜೈಲು ಸೇರಿದ್ದು ಏಕೆ? ಎಂದು  ಪ್ರಶ್ನಿಸಿದರು. ‘ನಟೋರಿಯಸ್ ಕ್ರಿಮಿನಲ್ ಸ್ಯಾಂಟ್ರೋ ರವಿ’ಗೆ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದರು.

ಸ್ಯಾಂಟ್ರೋ ರವಿಯನ್ನು ರಕ್ಷಿಸಲಾಗುತ್ತಿದೆ. ಆತ ಕುಖ್ಯಾತ ಕ್ರಿಮಿನಲ್, ಅತ್ಯಾಚಾರದ ಆರೋಪ ಹೊತ್ತಿದ್ದಾನೆ. ವರ್ಗಾವಣೆ ವ್ಯವಹಾರ ಮತ್ತು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ.) ಅವರನ್ನು ಇನ್ನೂ ಏಕೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಿಲ್ಲ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ,  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ 140 ರಿಂದ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಮತ್ತು ಕುಟುಂಬವನ್ನು ಮುನ್ನಡೆಸುವ ಮಹಿಳೆಯರಿಗೆ ತಿಂಗಳಿಗೆ 2,000 ರೂ.ಗಳ ನೆರವು ನೀಡುವ ಗೃಹ ಲಕ್ಷ್ಮಿ ಯೋಜನೆಯ ಕಾಂಗ್ರೆಸ್ ಘೋಷಣೆ ಬಗ್ಗೆ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com