ಜೆಡಿಎಸ್ ನ 'ಪೋಸ್ಟಿಂಗ್‌ಗೆ ನಗದು' ಆರೋಪಕ್ಕೆ ಬಿಜೆಪಿ ಬೆಂಬಲ: ಕಾಂಗ್ರೆಸ್ ತಿರುಗೇಟು

ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಎದುರಿಸಲು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕೈಜೋಡಿಸುವುದಾಗಿ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಹೇಳಿದ್ದು, ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ನ “ಪೋಸ್ಟಿಂಗ್‌ಗೆ ನಗದು” ಆರೋಪಕ್ಕೆ ತನ್ನ ಬೆಂಬಲವನ್ನು ನೀಡಿದೆ.
ಮೂರೂ ಪಕ್ಷಗಳ ಚಿಹ್ನೆಗಳು
ಮೂರೂ ಪಕ್ಷಗಳ ಚಿಹ್ನೆಗಳು

ಬೆಂಗಳೂರು: ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಎದುರಿಸಲು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕೈಜೋಡಿಸುವುದಾಗಿ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಹೇಳಿದ್ದು, ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ನ “ಪೋಸ್ಟಿಂಗ್‌ಗೆ ನಗದು” ಆರೋಪಕ್ಕೆ ತನ್ನ ಬೆಂಬಲವನ್ನು ನೀಡಿದೆ.

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜೆಡಿಎಸ್ ಮುಖಂಡ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಭ್ರಷ್ಟಾಚಾರ ಆರೋಪಕ್ಕೆ ನಮ್ಮ ಬೆಂಬಲವಿದೆ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ಶಾಸಕರ ಶಿಫಾರಸು ಪತ್ರದೊಂದಿಗೆ ಪೋಸ್ಟಿಂಗ್‌ಗಾಗಿ ಹೋದ ಅಧಿಕಾರಿಗೆ 30 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. 

ಕುಮಾರಸ್ವಾಮಿ ಅವರು ಸರಿಯಾದ ದಾಖಲೆಗಳು, ಮಾಹಿತಿ ಇಟ್ಟುಕೊಂಡು ಆರೋಪ ಮಾಡಿದ್ದಾರೆ. ಸರ್ಕಾರದ ವಿರುದ್ಧದ ಅವರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

ಇದೇ ವೇಳೆ, ತಮ್ಮ ಆರೋಪಕ್ಕೆ ಪುರಾವೆಗಳನ್ನು ನೀಡಿದರೆ ಸಂಬಂಧಪಟ್ಟ ಸಚಿವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎಂದು ಕುಮಾರಸ್ವಾಮಿ ಅವರು ಸರ್ಕಾರವನ್ನು ಕೇಳಿದ್ದಾರೆ. ಸಾಕ್ಷ್ಯ ಕೇಳುವ ಎಲ್ಲಾ ಸಚಿವರಿಗೆ ನಾನು ಸಾಕ್ಷಿ ನೀಡುತ್ತೇನೆ, ನೀವು ಸಂಬಂಧಪಟ್ಟ ಸಚಿವರನ್ನು ವಜಾ ಮಾಡಬಹುದೇ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ಜನರ ಮುಂದೆ ಏನು ಸಾಕ್ಷ್ಯವನ್ನು ನೀಡಿದ್ದೀರಿ ಎಂದು ಜೆಡಿಎಸ್ ಮುಖಂಡರು ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ಮಾಡಿರುವ ಆರೋಪವನ್ನು ತಳ್ಳಿಹಾಕುವ ಮೂಲಕ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ಯಾವುದೇ ಭ್ರಷ್ಟಾಚಾರ ನಡೆದಿಲ್ಲ, ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಅವರ ಬಳಿ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ಒಪ್ಪಿಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿನ್ನೆ ಹೇಳಿದ್ದಾರೆ. 

ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಕಳಪೆ ಸಾಧನೆಯಿಂದ ಅಸಮಾಧಾನಗೊಂಡಿರುವ ಅವರು ಆರೋಪಗಳನ್ನು ಮಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ನಾಯಕರ ಆರೋಪಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದಿದ್ದಾರೆ. 

ಗೃಹ ಸಚಿವ ಜಿ.ಪರಮೇಶ್ವರ ಮಾತನಾಡಿ, ಪ್ರಕರಣ ನಿರ್ದಿಷ್ಟವಾಗಿದ್ದು ಸರಿಯಾದ ಸಾಕ್ಷ್ಯಾಧಾರಗಳಿದ್ದರೆ ಕುಮಾರಸ್ವಾಮಿಯವರು ವಿಧಾನಸಭೆಯಲ್ಲಿ ಚರ್ಚೆ ನಡೆಸಲಿ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com