ಪ್ರಜಾಪ್ರಭುತ್ವ-ಸಂವಿಧಾನ ಹಕ್ಕುಗಳ ರಕ್ಷಣೆಗೆ ನಾವೆಲ್ಲರೂ ಒಗ್ಗೂಡುತ್ತಿದ್ದೇವೆ: ವಿಪಕ್ಷ ನಾಯಕರ ಸಭೆಯ ಮುನ್ನ ಕಾಂಗ್ರೆಸ್ ನಾಯಕರ ಹೇಳಿಕೆ

ಲೋಕಸಭೆ ಚುನಾವಣೆ 2024ಕ್ಕೆ ಮುನ್ನುಡಿಯಾಗಿ ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಬಿರುಸಿನ ರಾಜಕೀಯ ಚಟುವಟಿಕೆಯ ತಾಣವಾಗುತ್ತಿದೆ. ದೇಶದ ಘಟಾನುಘಟಿ ರಾಜಕೀಯ ನಾಯಕರು ರಾಜಧಾನಿಗೆ ಆಗಮಿಸುತ್ತಿದ್ದಾರೆ.
ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿ
ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿ
Updated on

ಬೆಂಗಳೂರು: ಲೋಕಸಭೆ ಚುನಾವಣೆ 2024ಕ್ಕೆ ಮುನ್ನುಡಿಯಾಗಿ ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಬಿರುಸಿನ ರಾಜಕೀಯ ಚಟುವಟಿಕೆಯ ತಾಣವಾಗುತ್ತಿದೆ. ದೇಶದ ಘಟಾನುಘಟಿ ರಾಜಕೀಯ ನಾಯಕರು ರಾಜಧಾನಿಗೆ ಆಗಮಿಸುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟವನ್ನು ಕಟ್ಟಿಹಾಕುವುದು ಈ ನಾಯಕರ ಸಭೆಯ ಉದ್ದೇಶವಾಗಿದೆ.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿ ಲೋಕಸಭೆ ಚುನಾವಣೆಯನ್ನು ಗೆಲ್ಲಲು ತಂತ್ರ ರೂಪಿಸಲು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಜಾರಿಗೆ ತರುವುದು, ಸಹಮತಕ್ಕೆ ಬಂದು ಲೋಕಸಭೆ ಸ್ಥಾನಗಳಿಗೆ ಸ್ಪರ್ಧಿಸಲು ಸೀಟು ಹಂಚಿಕೆ, ವಿಪಕ್ಷಗಳಲ್ಲಿ ನಾಯಕನ ಆಯ್ಕೆ ಇತ್ಯಾದಿಗಳಿಗೆ ಸಹಮತಕ್ಕೆ ಬರಲು ಇನ್ನೂ ಹಲವಾರು ಸುತ್ತಿನ ಮಾತುಕತೆಗಳು ನಡೆಯಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಿಪಕ್ಷ ನಾಯಕರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಸೋಮವಾರ ಸಂಜೆ ವಿರೋಧ ಪಕ್ಷದ ನಾಯಕರಿಗೆ ಆಯೋಜಿಸಿರುವ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ. ನಾಳೆ ಅಂದರೆ ಮಂಗಳವಾರ ಬೆಳಿಗ್ಗೆ 11 ರಿಂದ ಚರ್ಚೆಗಳು ಪ್ರಾರಂಭವಾಗಲಿವೆ.

ಎಂಡಿಎಂಕೆ, ಕೆಡಿಎಂಕೆ, ವಿಸಿಕೆ, ಆರ್‌ಎಸ್‌ಪಿ, ಫಾರ್ವರ್ಡ್ ಬ್ಲಾಕ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಕೇರಳ ಕಾಂಗ್ರೆಸ್ (ಜೋಸೆಫ್) ಮತ್ತು ಕೇರಳ ಕಾಂಗ್ರೆಸ್ (ಮಣಿ) ಜೂನ್ 23 ರ ಸಭೆಯ ಭಾಗವಾಗದ ಹೊಸ ಆಹ್ವಾನಿತರು ಎಂದು ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ, ಒಟ್ಟಾರೆಯಾಗಿ 24ರಿಂದ 26 ವಿರೋಧ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. 

ರಾಷ್ಟ್ರೀಯ ಲೋಕದಳದ (ಆರ್‌ಎಲ್‌ಡಿ) ಜಯಂತ್ ಚೌಧರಿ ಅವರು ಕರ್ನಾಟಕದಲ್ಲಿ ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದಾರೆ. ಆದರೂ, ಆರ್‌ಎಲ್‌ಡಿ ಶೀಘ್ರದಲ್ಲೇ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸೇರುವ ಬಗ್ಗೆ ಊಹಾಪೋಹಗಳಿವೆ.

ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಸಭೆ ಆರಂಭಕ್ಕೆ ಮುನ್ನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ನಾವೆಲ್ಲರೂ ಒಂದೇ ಉದ್ದೇಶದಿಂದ ಒಂದಾಗಿದ್ದೇವೆ - ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು, ಸಾಂವಿಧಾನಿಕ ಹಕ್ಕುಗಳು ಮತ್ತು ನಮ್ಮ ಸಂಸ್ಥೆಗಳ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ವಿಪಕ್ಷಗಳ ಸಭೆಯ ಉದ್ದೇಶವಾಗಿದೆ. ಇವೆಲ್ಲವೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಈಗಿನ ಆಡಳಿತದ ದಾಳಿಗೆ ಒಳಗಾಗಿವೆ. ಅವರು ವಿರೋಧ ಪಕ್ಷದ ಧ್ವನಿಯನ್ನು ಅಡಗಿಸಲು ಬಯಸಿದ್ದರು.

ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಅದಕ್ಕೆ ದೊಡ್ಡ ಉದಾಹರಣೆಯಾಗಿದೆ. ಮಹಾರಾಷ್ಟ್ರದಲ್ಲಿ ನಡೆದ ಘಟನೆಯೂ ಒಂದು ಉದಾಹರಣೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಈ ದೇಶದ ಎಲ್ಲಾ ವಿರೋಧ ಪಕ್ಷಗಳು ಒಂದು ಒಳ್ಳೆಯ ಆರಂಭಕ್ಕಾಗಿ ಒಟ್ಟಾಗಿ ಸೇರಿಕೊಂಡಿವೆ ಎಂದು ನಾನು ಭಾವಿಸುತ್ತೇನೆ. ಇದು ವೈಯಕ್ತಿಕ ರಾಜಕೀಯ ಪಕ್ಷದ ಸಭೆಯಲ್ಲ, ಇದು 140 ಕೋಟಿ ಜನರ ಭವಿಷ್ಯಕ್ಕಾಗಿ ಈ ದೇಶವನ್ನು ರೂಪಿಸುತ್ತಿದೆ. ಈ ತಿಳುವಳಿಕೆ ಮತ್ತು ಒಗ್ಗಟ್ಟಿನಿಂದ ನಾವು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ ಇದರಿಂದ ಉತ್ತಮ ಫಲಿತಾಂಶವೇ ಹೊರಬರುತ್ತದೆ ಎಂದು ನಾನು ಭಾವಿಸುತ್ತೇನೆ. ಕರ್ನಾಟಕ ನಮಗೆ ಜನಾದೇಶ ನೀಡಿದಂತೆ, ಇಡೀ ದೇಶವು 2024 ರಲ್ಲಿ ನಮಗೆ ಜನಾದೇಶವನ್ನು ನೀಡುತ್ತದೆ, ಆ ನಿಟ್ಟಿನಲ್ಲಿ ಇಂದಿನ ಮಹತ್ವದ ಸಭೆ ನಡೆಯುತ್ತಿದೆ ಎಂದರು.

ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಪ್ರಧಾನಿ ಮೋದಿ ಮತ್ತು ಬಿಜೆಪಿ ವಿಪಕ್ಷ ನಾಯಕರ ಒಗ್ಗಟ್ಟು ಕಂಡು ದಿಗ್ಭ್ರಮೆಗೊಂಡಿದ್ದಾರೆ. ಕಳೆದ ತಿಂಗಳು ಪಾಟ್ನಾದಲ್ಲಿ ನಡೆದ ಸಭೆಯ ನಂತರ ಪಿಎಂ ಇದ್ದಕ್ಕಿದ್ದಂತೆ ಎನ್‌ಡಿಎ ಮೈತ್ರಿಕೂಟದ ಬಗ್ಗೆ ಯೋಚಿಸಲು ಆರಂಭಿಸಿದ್ದಾರೆ. ಎನ್‌ಡಿಎಗೆ ಹೊಸ ಜೀವ ತುಂಬುವ ಪ್ರಯತ್ನಗಳು ನಡೆಯುತ್ತಿವೆ. ನಾವು ಕರೆಯುತ್ತಿರುವ ಸಭೆ ಕಂಡು ನಾಳೆ ದೆಹಲಿಯಲ್ಲಿ ಎನ್ ಡಿಎ ಮೈತ್ರಿಕೂಟ ಸಭೆ ಕರೆಯಲಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com