ರಾಷ್ಟ್ರ ರಾಜಕಾರಣಕ್ಕೆ ಸತೀಶ್ ಜಾರಕಿಹೊಳಿ ಪುತ್ರಿ: ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿಯಿಂದ ಪ್ರಿಯಾಂಕಾ ಸ್ಪರ್ಧೆ?

ಬೆಳಗಾವಿ ಮತ್ತು ಚಿಕ್ಕೋಡಿ ಸೇರಿದಂತೆ ಕೆಲವು ಲೋಕಸಭಾ ಸ್ಥಾನಗಳಿಗೆ ಪಕ್ಷವು ಮುಂದಿನ ಎರಡು ತಿಂಗಳೊಳಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಯತ್ನದಲ್ಲಿದ್ದಾರೆ.
ಪ್ರಿಯಾಂಕಾ ಜಾರಕಿಹೊಳಿ
ಪ್ರಿಯಾಂಕಾ ಜಾರಕಿಹೊಳಿ

ಬೆಳಗಾವಿ: 2024ರ ಲೋಕಸಭೆ ಚುನಾವಣೆಗಾಗಿ ಮೂರು ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಸುತ್ತಿವೆ.  ರಾಜ್ಯದ ಹಲವಾರು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ ರಾಜಕೀಯ ಚಟುವಟಿಕೆಗಳು ಚುರುಕಾಗಿವೆ.  ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳ ಪಟ್ಟಿ ಉದ್ದವಾಗಿದ್ದರೂ, ಹಿರಿಯ ಮತ್ತು ಜನಪ್ರಿಯ ನಾಯಕರ ಬದಲಿಗೆ ಈ ಬಾರಿ ಅನೇಕ ಹೊಸ ಮುಖಗಳನ್ನು ಕಣಕ್ಕಿಳಿಸಲು ಪಕ್ಷವು ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ಮತ್ತು ಚಿಕ್ಕೋಡಿ ಸೇರಿದಂತೆ ಕೆಲವು ಲೋಕಸಭಾ ಸ್ಥಾನಗಳಿಗೆ ಪಕ್ಷವು ಮುಂದಿನ ಎರಡು ತಿಂಗಳೊಳಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಯತ್ನದಲ್ಲಿ ಈಗಾಗಲೇ ವಿವಿಧ ವಿಧಾನಸಭಾ ಕ್ಷೇತ್ರಗಳ ಹಾಲಿ ಶಾಸಕರ ಜೊತೆ ಹಲವು ಸುತ್ತಿನ ಚರ್ಚೆ ನಡೆಸಲಾಗಿದೆ.

ಕಳೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿರುವ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್ ಉತ್ಸುಕವಾಗಿದೆ. ಗೋಕಾಕದ ಜಾರಕಿಹೊಳಿ ಕುಟುಂಬದ ಒಬ್ಬರು ಒಮ್ಮತದ ಪಕ್ಷದ ಅಭ್ಯರ್ಥಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಚಿವ ಸತೀಶ್ ಜಾರಕಿಹೊಳಿ  ಬಿಜೆಪಿಯ ಮಂಗಳಾ ಅಂಗಡಿ ವಿರುದ್ಧ ಕಡಿಮೆ ಅಂತರದಿಂದ ಸೋತಿದ್ದರು.

ಸತೀಶ್ ಜಾರಕಿಹೊಳಿ ರಾಜ್ಯ ರಾಜಕೀಯದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದರೊಂದಿಗೆ, ಅವರ ಪುತ್ರಿ 25 ವರ್ಷದ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆ ತರಲು ಚಿಂತಿಸುತ್ತಿದ್ದಾರೆ. ಹೈಕಮಾಂಡ್ ಸಮ್ಮತಿಸಿದರೇ ತಮ್ಮ ಕುಟುಂಬದ ಯಾರನ್ನಾದರೂ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲು ಸಿದ್ಧವಾಗಿರುವುದಾಗಿ ಸತೀಶ್ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ತನ್ನ ಕುಟುಂಬದ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಯುವ ಮತ್ತು ಹೊಸ ಮುಖ ಪ್ರಿಯಾಂಕಾ ಪಕ್ಷದ ಅಭ್ಯರ್ಥಿಯಾಗಿ ಹೊರಹೊಮ್ಮಬಹುದು ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

2024ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೇ ದೇಶದ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರಾಗಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ, ಅವರು ತಮ್ಮ ತಂದೆಯೊಂದಿಗೆ ಅನೇಕ ರಾಜಕೀಯ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ನಾಯಕಿಯಾಗುವ ಸಾಮರ್ಥ್ಯ ಅವರಲ್ಲಿದೆ ಎನ್ನುತ್ತಾರೆ ಜಾರಕಿಹೊಳಿ ಆಪ್ತರು.

ಎಂಬಿಎ ಪದವೀಧರರಾಗಿರುವ ಪ್ರಿಯಾಂಕಾ ಅವರು ಕಳೆದ ಕೆಲವು ವರ್ಷಗಳಿಂದ ಸತೀಶ್ ಜಾರಕಿಹೊಳಿ ಫೌಂಡೇಶನ್‌ನ ಮುಖ್ಯಸ್ಥರಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಆಕೆಗೆ 25 ವರ್ಷ ತುಂಬಲು ಕುಟುಂಬವು ಕಾಯುತ್ತಿತ್ತು. 25 ವರ್ಷ ವಯಸ್ಸು ತುಂಬಿದರೆ, ಆಕೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗುತ್ತಾರೆ. ಅವರನ್ನು ಬೆಳಗಾವಿಯಿಂದ ಕಣಕ್ಕಿಳಿಸಬೇಕೇ ಅಥವಾ ಇನ್ನಾವುದೇ ಹಿರಿಯ ನಾಯಕರನ್ನು ಕಣಕ್ಕಿಳಿಸುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಷಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಮೂವರು ಜಾರಕಿಹೊಳಿ ಕುಟುಂಬದ ಸಹೋದರರು ಯಮಕನಮರಡಿ ಕ್ಷೇತ್ರದಿಂದ (ಕಾಂಗ್ರೆಸ್) ಸತೀಶ್, ಅರಭಾವಿಯಿಂದ ಬಾಲಚಂದ್ರ ಜಾರಕಿಹೊಳಿ (ಬಿಜೆಪಿ) ಮತ್ತು ಗೋಕಾಕದಿಂದ ರಮೇಶ್ ಜಾರಕಿಹೊಳಿ (ಬಿಜೆಪಿ) ಶಾಸಕರಾಗಿದ್ದಾರೆ. ಇವರ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಬೆಳಗಾವಿ ಸ್ಥಳೀಯ ಸಂಸ್ಥೆಗಳ ಎಂಎಲ್‌ಸಿಯಾಗಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಅವರನ್ನು ಬೆಳಗಾವಿಯ ಒಂದು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು, ಆದರೆ ಆಕೆಯ ತಂದೆ ಅದನ್ನು ವಿರೋಧಿಸಿದರು. ಆದರೆ, ಪಕ್ಷದ ಹೈಕಮಾಂಡ್ ತೀರ್ಮಾನಿಸಿದರೆ ಬೆಳಗಾವಿಯಿಂದ ಲೋಕಸಭೆಗೆ ಸ್ಪರ್ಧಿಸಲು ಸಿದ್ಧ ಎಂದು ಸತೀಶ್ ಜಾರಕಿಹೊಳಿ ಇತ್ತೀಚೆಗೆ ಹೇಳಿದ್ದರು.

ರಾಜ್ಯ ರಾಜಕೀಯದಲ್ಲಿ ಅವರ ಅಸ್ತಿತ್ವವು ಪಕ್ಷಕ್ಕೆ ಹೆಚ್ಚು ಮಹತ್ವದ್ದಾಗಿರುವುದರಿಂದ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ, ಇನ್ನೆರಡು ತಿಂಗಳಲ್ಲಿ ಪಕ್ಷದ ನಾಯಕರು ಸಭೆ ಸೇರಿದಾಗ ಬೆಳಗಾವಿ ಸ್ಥಾನಕ್ಕೆ ಪ್ರಿಯಾಂಕಾ ನೆಚ್ಚಿನ ಅಭ್ಯರ್ಥಿಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com