ಕರ್ನಾಟಕ ಚುನಾವಣೆ ಗೆಲುವು ವಿಪಕ್ಷಗಳ ಮೈತ್ರಿ ರಚನೆಯಲ್ಲಿ ಕಾಂಗ್ರೆಸ್ ಗೆ ಒಂದು 'ಗೇಮ್ ಚೇಂಜರ್': ಹೇಗೆ? ಇಲ್ಲಿದೆ ವಿಶ್ಲೇಷಣೆ
ಈ ಬಾರಿ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅದ್ವಿತೀಯ ಗೆಲುವು ಸಾಧಿಸಿರುವುದು ಈಗ ಇತಿಹಾಸ. ಇದು ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಕಾಂಗ್ರೆಸ್ ಗೆ ಗೇಮ್ ಚೇಂಜರ್ ಆಗಲಿದೆಯೇ ಎಂಬ ಮಾತುಗಳು, ಚರ್ಚೆಗಳು ನಡೆಯುತ್ತಿವೆ. ಅದಕ್ಕೆ ಕಾರಣ ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ವಿರೋಧ ಪಕ್ಷಗಳ ಸಭೆ.
Published: 19th July 2023 02:54 PM | Last Updated: 19th July 2023 07:12 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಈ ಬಾರಿ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅದ್ವಿತೀಯ ಗೆಲುವು ಸಾಧಿಸಿರುವುದು ಈಗ ಇತಿಹಾಸ. ಇದು ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಕಾಂಗ್ರೆಸ್ ಗೆ ಗೇಮ್ ಚೇಂಜರ್ ಆಗಲಿದೆಯೇ ಎಂಬ ಮಾತುಗಳು, ಚರ್ಚೆಗಳು ನಡೆಯುತ್ತಿವೆ. ಅದಕ್ಕೆ ಕಾರಣ ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ವಿರೋಧ ಪಕ್ಷಗಳ ಸಭೆ.
ಕೇವಲ ಸಭೆ ನಡೆದಿದ್ದು ಮಾತ್ರವಲ್ಲ, 2024ರ ಲೋಕಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗಿದ್ದು, 26 ವಿರೋಧ ಪಕ್ಷಗಳು ಸಭೆಯಲ್ಲಿ ಭಾಗವಹಿಸಿ ಮೈತ್ರಿಕೂಟ ರಚಿಸಿ ಅದಕ್ಕೆ ಇಂಡಿಯಾ ಎಂದು ನಾಮಕರಣ ಮಾಡಿವೆ. Indian National Developmental Inclusive Alliance (I.N.D.I.A).
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿನ ಗೆಲುವು ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಸತತ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಗೆ ಮರುಹುಟ್ಟು ಸಿಕ್ಕಂತಾಗಿದೆ ಎಂದು ಹೇಳಬಹುದು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಯನ್ನು ಮುನ್ನಡೆಸುವ ನಾಯಕತ್ವವನ್ನು ಕಾಂಗ್ರೆಸ್ ವಹಿಸಲು ತನ್ನ ಹಕ್ಕು ಪ್ರತಿಪಾದಿಸಲು ಅದಕ್ಕೊಂದು ಅವಕಾಶ ಸಿಕ್ಕಂತಾಗಿದೆ.
ಕರ್ನಾಟಕ ಚುನಾವಣೆ ರಾಷ್ಟ್ರ ಮಟ್ಟದಲ್ಲಿ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗುತ್ತದೆ ಎಂದು ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೊಂಡೇ ಬಂದಿದ್ದರು. ಈ ಇಬ್ಬರು ನಾಯಕರು ಮತ್ತು ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಪ್ರಯತ್ನವನ್ನು ವಿಧಾನಸಭೆ ಚುನಾವಣೆಯುದ್ಧಕ್ಕೂ ಮಾಡಿ ಗೆದ್ದರು. ಇದು ಮುಂಬರುವ ಮಧ್ಯ ಪ್ರದೇಶ, ರಾಜಸ್ತಾನ, ಛತ್ತೀಸ್ ಗಢ ಮತ್ತು ತೆಲಂಗಾಣ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಹಾಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಪ್ರತಿಪಕ್ಷಗಳ ಒಕ್ಕೂಟಕ್ಕೆ INDIA ಹೆಸರು ಸಲಹೆ ನೀಡಿದ್ಯಾರು?: ಯಾರು ಯಾವೆಲ್ಲಾ ಹೆಸರು ಸೂಚಿಸಿದ್ದರು?... ಇಲ್ಲಿದೆ ವಿವರ
ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆ ಫಲಪ್ರದವಾಗಿದೆ. ಸಭೆಯಲ್ಲಿ ಭಾಗವಹಿಸಿದ ನಾಯಕರು ಉತ್ತಮ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಇಂಡಿಯಾ ಹೆಸರಿನಲ್ಲಿ ಮೈತ್ರಿ ಮುನ್ನಡೆಸುವ ಬಗ್ಗೆ ಮತ್ತು 11 ಸದಸ್ಯರ ಸಮನ್ವಯ ಸಮಿತಿ ರಚನೆ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ.
ಈ ಸಮಾವೇಶದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಕ್ರಿಯವಾಗಿ ಭಾಗವಹಿಸಿದ್ದರು, ಅವರು ಹಿಂದೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ರಾಜಕೀಯ ಸಾಮರ್ಥ್ಯದ ಬಗ್ಗೆ ತೀವ್ರವಾಗಿ ಬಹಿರಂಗವಾಗಿಯೇ ಟೀಕಿಸಿದ್ದರು. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಹುಲ್ ಅತಿ ಹೆಚ್ಚು ಟಿಆರ್‌ಪಿ ವಿಜೇತ ಎಂದು ಆರೋಪಿಸಿದ್ದರು. ರಾಹುಲ್ ನಾಯಕತ್ವದ ಶೈಲಿಯನ್ನು ಕಟುವಾಗಿ ಟೀಕಿಸಿದ್ದರು. ಆದರೆ ಅವೆಲ್ಲ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಮಾತ್ರ. ಇಂದು ಪರಿಸ್ಥಿತಿ ಬದಲಾಗಿದೆ.
ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಮೋಘ ಗೆಲುವಿನಿಂದ ರಾತ್ರೋರಾತ್ರಿ ಪರಿಸ್ಥಿತಿ ಬದಲಾಗಿದೆ. ಈ ಗೆಲುವು ಪ್ರಾದೇಶಿಕ ಪಕ್ಷದ ನಾಯಕರನ್ನು ಕಾಂಗ್ರೆಸ್‌ನತ್ತ ತಿರುಗಿ ನೋಡುವಂತೆ ಮಾಡಿದೆ. ರಾಷ್ಟ್ರಮಟ್ಟದಲ್ಲಿ ಮೈತ್ರಿ ಮಾತುಕತೆಗೆ ತೆರೆದುಕೊಂಡಿದೆ.
ಇದನ್ನೂ ಓದಿ: ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ 'I.N.D.I.A' ಎಂದು ನಾಮಕರಣ: ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಘೋಷಣೆ
ನಿನ್ನೆ ಮಮತಾ ಬ್ಯಾನರ್ಜಿ ಅವರು ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಅವರ ಪಕ್ಕದಲ್ಲಿ ಕುಳಿತು ಪ್ರಧಾನಿ ಮೋದಿ ಮತ್ತು ಎನ್‌ಡಿಎ ವಿರುದ್ಧ ವಾಗ್ದಾಳಿ ನಡೆಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಮೋದಿ ಅವರು ಕಳೆದ ಒಂಬತ್ತು ವರ್ಷಗಳ ಆಡಳಿತದಲ್ಲಿ ಎಲ್ಲಾ ಕ್ಷೇತ್ರಗಳನ್ನು ನಾಶಪಡಿಸಿದ್ದಾರೆ. ಸಮಾಜದ ಎಲ್ಲಾ ವರ್ಗಗಳನ್ನು ನಿರಾಶೆಗೊಳಿಸಿದ್ದಾರೆ ಎಂದು ಟೀಕಿಸಿದರು.
"ನಾವು ಇಲ್ಲಿ ಸೇರಿರುವುದು ನಮಗಾಗಿ ಅಲ್ಲ, ದ್ವೇಷ ರಾಜಕಾರಣದಿಂದ ದೇಶವನ್ನು ಉಳಿಸಲು" ಎಂದು ಕೇಜ್ರಿವಾಲ್ ಅವರು ಹೇಳಿದರು. ಯುವಕರು, ರೈತರು, ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳು ಎನ್‌ಡಿಎ ಸರ್ಕಾರದ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಟೀಕಿಸಿದರು.