ಕಾಂಗ್ರೆಸ್ ಗೆ ನಮ್ಮ ಅಗತ್ಯವಿಲ್ಲ; ಬಿಜೆಪಿ ಜೊತೆ ಜೆಡಿಎಸ್ ವಿಲೀನ ಇಲ್ಲ; ಕೇಂದ್ರದಲ್ಲಿ ಸಚಿವ ಸ್ಥಾನ ಕೇಳಿಲ್ಲ: ಎಚ್.ಡಿಕೆ

ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಶಾಸಕರು ಸಂಪೂರ್ಣ ಅಧಿಕಾರ ನೀಡಿ, ಪಕ್ಷವನ್ನು ಉಳಿಸಲು ನೀವು ಏನು ಮಾಡುತ್ತೀರೋ ಅದನ್ನು ಮಾಡಿ ಎಂದು ಹೇಳಿದ್ದಾರೆ. 19 ಶಾಸಕರು ಮತ್ತು 7 ಎಂಎಲ್‌ಸಿಗಳು ಯಾವುದೇ ಆಕ್ಷೇಪಣೆಯಿಲ್ಲದೆ ಕುಮಾರಸ್ವಾಮಿಗೆ ಅಧಿಕಾರ ನೀಡಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: 2024 ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಲಿದೆ ಎನ್ನುವ ಚರ್ಚೆಗಳು ಜೋರಾಗಿದ್ದು, ಇದೀಗ ಜೆಡಿಎಸ್‌ ನಾಯಕ ಹೆಚ್‌ ಡಿ ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಅವರು ನಡೆಸಿದ ಜಂಟಿ ಸುದ್ದಿಗೋಷ್ಠಿ, ಮೈತ್ರಿಯ ಮಹಾ ಸುಳಿವಿಗೆ ಪುಷ್ಠಿ ನೀಡಿದೆ.

ಬಿಜೆಪಿ ಜೊತೆ ಜೆಡಿಎಸ್ ಹೋಗಲು ನಿರ್ಧರಿಸಿದೆ. ಗುರುವಾರ ಕರೆಯಲಾದ ಜನತಾ ದಳ ಶಾಸಕಾಂಗ ಪಕ್ಷದ ಸಭೆಯಲ್ಲಿ, ಪಕ್ಷದ ಶಾಸಕರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಥವಾ ಜಾತ್ಯತೀತ ವಿರೋಧ ಪಕ್ಷಗಳ ಗುಂಪು - ಐಎನ್‌ಡಿಐಎ ಸೇರುವ ವಿಷಯದ ಬಗ್ಗೆ ಚರ್ಚಿಸಿದರು.  ಮುಂಬರುವ ಲೋಕಸಭೆ ಚುನಾವಣಾ ಪೂರ್ವ ಹೊಂದಾಣಿಕೆ ಸೇರಿದಂತೆ ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಜೆಡಿಎಸ್ ಪಕ್ಷ , ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಿದೆ.

ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಶಾಸಕರು ಸಂಪೂರ್ಣ ಅಧಿಕಾರ ನೀಡಿ, ಪಕ್ಷವನ್ನು ಉಳಿಸಲು ನೀವು ಏನು ಮಾಡುತ್ತೀರೋ ಅದನ್ನು ಮಾಡಿ ಎಂದು ಹೇಳಿದ್ದಾರೆ. 19 ಶಾಸಕರು ಮತ್ತು 7 ಎಂಎಲ್‌ಸಿಗಳು ಯಾವುದೇ ಆಕ್ಷೇಪಣೆಯಿಲ್ಲದೆ ಕುಮಾರಸ್ವಾಮಿಗೆ ಅಧಿಕಾರ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಬೆಂಬಲದ ಅಗತ್ಯವಿಲ್ಲದ ಕಾರಣ ಕುಮಾರಸ್ವಾಮಿ ಪ್ರೀತಿ ಬಿಜೆಪಿಯತ್ತ ಎಂಬುದು ಸ್ಪಷ್ಟವಾಗಿದೆ. ಈ ಸಂಬಂಧ ಎಚ್.ಡಿ ಕುಮಾರಸ್ವಾಮಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರ: ಗುರುವಾರ ನಡೆದ ಜೆಡಿಎಲ್‌ಪಿ ಸಭೆಯು ಬಿಜೆಪಿ ಅಥವಾ ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಎಲ್ಲಾ ಅಧಿಕಾರವನ್ನು ನಿಮಗೆ ನೀಡಲಾಗಿದೆ?

ಕಾಂಗ್ರೆಸ್ ಜೊತೆ ಹೋಗುವ ಪ್ರಶ್ನೆಯೇ ಇಲ್ಲ, ಅವರಿಗೆ ನಮ್ಮ ಬೆಂಬಲದ ಅಗತ್ಯವಿಲ್ಲ. ವಿಧಾನಸಭೆಯ ಫಲಿತಾಂಶದ ನಂತರ ಎಂಟು ಪರಿಶೀಲನಾ ಸಭೆಗಳಲ್ಲಿಯೂ ಸಹ, ಯಾವುದೇ ಜೆಡಿಎಸ್ ನಾಯಕರು ಬಿಜೆಪಿಯೊಂದಿಗೆ ಹೋಗುವುದನ್ನು ವಿರೋಧಿಸಲಿಲ್ಲ. ಬಿಜೆಪಿಯೊಂದಿಗೆ ಹೋದರೂ ಪಕ್ಷದ ಹಿತದೃಷ್ಟಿಯಿಂದ ಏನು ಮಾಡಬೇಕು ಎಂಬದರ ಬಗ್ಗೆ ಒಕ್ಕೊರಲ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಭವಿಷ್ಯದಲ್ಲಿ ಪಕ್ಷಕ್ಕೆ ಒಳಿತಾಗುವ ನಿರ್ಧಾರ ಕೈಗೊಳ್ಳಬೇಕು ಎಂದು ಪಕ್ಷದ ಮುಖಂಡರು ಹಾಗೂ ಶಾಸಕರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಕ್ಷದ ಹಿತಾಸಕ್ತಿ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರ: ಸುಮಾರು 10 ದಿನಗಳ ಕಾಲ ವಿದೇಶಕ್ಕೆ ಹೋಗಿ ಆಗಸ್ಟ್ 4 ರಂದು ವಾಪಸ್ ಬರಲಿದ್ದೀರಿ ಎಂದು ಪಕ್ಷದ ಒಳಗಿನವರು ಹೇಳುತ್ತಿದ್ದಾರೆ. ಆ ನಂತರ ಬಿಜೆಪಿ ಜೊತೆಗಿನ ಮೈತ್ರಿಯ ಅಂತಿಮ ರೂಪುರೇಷೆ ನಿರ್ಧಾರವಾಗಲಿದೆಯೇ?

ಹೌದು, ನಾನು ಸುಮಾರು ಹತ್ತು ದಿನಗಳ ಕಾಲ ವಿದೇಶಕ್ಕೆ ತೆರಳುತ್ತಿದ್ದೇನೆ , ವಾಪಸ್ ಬಂದ ನಂತರ ಮುಂದಿನ ನಿರ್ಧಾರಗಳ ಬಗ್ಗೆ ಚಿಂತಿಸಲಾಗುವುದು.

ಪ್ರ: ನೀವು ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುತ್ತೀರಾ ಅಥವಾ ಎನ್‌ಡಿಎ ಪಾಲುದಾರರಾಗಿ ಸೇರುತ್ತೀರಾ?

ಬಿಜೆಪಿ ಜೊತೆ ವಿಲೀನದ ಪ್ರಶ್ನೆಯೇ ಇಲ್ಲ. ನಾವು ನಮ್ಮ ಸ್ವತಂತ್ರ ಅಸ್ವಿತ್ವ ಮತ್ತು ಗುರುತು ಉಳಿಸಿಕೊಳ್ಳುತ್ತೇವೆ. ಈ ವಿಷಯವಾಗಿ ಸೂಕ್ಷ್ಮತೆಯಿಂದ ಕೆಲಸ ಮಾಡಲಾಗುವುದು.

ಪ್ರ: ವಿರೋಧ ಪಕ್ಷದ ನಾಯಕರಾಗುತ್ತೀರಾ? ಈ ಹಿಂದೆ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮೇಲ್ಮನೆ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಅವರನ್ನು ಆಯ್ಕೆ ಮಾಡಿತ್ತಲ್ಲವೇ?

ವಿರೋಧ ಪಕ್ಷದ ನಾಯಕ ಯಾರು ಎಂಬುದನ್ನು ಬಿಜೆಪಿ ನಿರ್ಧರಿಸಲಿದೆ.  ವಿಪಕ್ಷ ನಾಯಕರಾಗುವುದು ಬಿಜೆಪಿಯವರೇ ಹೊರತು ಜೆಡಿಎಸ್ ಶಾಸಕರಲ್ಲ.

ಪ್ರ: ಜೆಡಿಎಸ್ ಎಷ್ಟು ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸುತ್ತದೆ? ಜಿಲ್ಲಾ ಪಂಚಾಯತ್/ತಾಲ್ಲೂಕು ಪಂಚಾಯತ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳ ಬಗ್ಗೆ ನಿಲುವು ಏನು?

ಈ ಸಂದರ್ಭದಲ್ಲಿ ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ, ಈ ಸಂಬಂಧ ಪ್ರಾಥಮಿಕ ಹಂತದ ಚರ್ಚೆಗಳು ನಡೆಯುತ್ತಿವೆ.  ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು.

ಪ್ರ: ಕೇಂದ್ರ ಸಂಪುಟದಲ್ಲಿ ನೀವು ಸಚಿವರಾಗುವ ಬಗ್ಗೆ ಚರ್ಚೆ ನಡೆಯುತ್ತಿದೆಯೇ?

ಅಂತಹ ಯಾವುದೇ ಮಾತುಕತೆ ನಡೆದಿಲ್ಲ. ಇಲ್ಲಿಯವರೆಗೆ ಈ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com