ವಿರೋಧ ಪಕ್ಷದ ನಾಯಕನ ನೇಮಕಕ್ಕೆ ಇಲ್ಲ ಆತುರ; ರಾಜ್ಯ ಘಟಕದ ಬಗ್ಗೆ ಬಿಜೆಪಿ ಹೈಕಮಾಂಡ್ ನಿರ್ಲಕ್ಷ್ಯ?

ಪ್ರತಿಪಕ್ಷ ನಾಯಕ ಹಾಗೂ ನೂತನ ರಾಜ್ಯಾಧ್ಯಕ್ಷರ ನೇಮಕ ಮಾಡುವಂತೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಲು ರಾಜ್ಯ ನಾಯಕರು ಯತ್ನಿಸುತ್ತಿದ್ದರೂ ಕೇಂದ್ರದ ನಾಯಕರ ಆತುರ ತೋರುತ್ತಿಲ್ಲ.
ಬಸವರಾಜ ಬೊಮ್ಮಾಯಿ ಮತ್ತು ನಳಿನ್ ಕುಮಾರ್ ಕಟೀಲ್
ಬಸವರಾಜ ಬೊಮ್ಮಾಯಿ ಮತ್ತು ನಳಿನ್ ಕುಮಾರ್ ಕಟೀಲ್
Updated on

ಬೆಂಗಳೂರು: ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ಕಳೆದ ವಾರ ವಿಧಾನಮಂಡಲದ ಅಧಿವೇಶನ ಮುಗಿದಿದೆ. ಭಾರತೀಯ ಜನತಾ ಪಕ್ಷವು (ಬಿಜೆಪಿ) ವಿರೋಧ ಪಕ್ಷದ ನಾಯಕನನ್ನು ಶೀಘ್ರದಲ್ಲೇ ನೇಮಿಸುವ ಆತುರದಲ್ಲಿಲ್ಲ ಎಂದು ತೋರುತ್ತಿದೆ. ಇದರ ಜೊತೆಗೆ ರಾಜ್ಯ ಘಟಕದ ಅಧ್ಯಕ್ಷರ ನೇಮಕವೂ ವಿಳಂಬವಾಗುವ ಸಾಧ್ಯತೆ ಇದೆ.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರ ನೇಮಕದ ವಿಳಂಬದಿಂದಾಗಿ ಶಾಸಕರು ಮತ್ತು ಕಾರ್ಯಕರ್ತರು ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ಪ್ರತಿಪಕ್ಷ ನಾಯಕ ಹಾಗೂ ನೂತನ ರಾಜ್ಯಾಧ್ಯಕ್ಷರ ನೇಮಕ ಮಾಡುವಂತೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಲು ರಾಜ್ಯ ನಾಯಕರು ಯತ್ನಿಸುತ್ತಿದ್ದರೂ ಕೇಂದ್ರದ ನಾಯಕರ ಆತುರ ತೋರುತ್ತಿಲ್ಲ.

ಈ ಎರಡು ಹುದ್ದೆಗಳಿಗೆ ನೇಮಕ ಮಾಡಲು ವರಿಷ್ಠರು ಯಾವುದೇ ಆಸಕ್ತಿ ಹೊಂದಿಲ್ಲ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಈ ಹಿಂದೆ ಮೂರು ಸಂದರ್ಭಗಳಲ್ಲಿ, ಅಧಿವೇಶನದ ಹಿಂದಿನ ದಿನ ಸೇರಿದಂತೆ, ದೆಹಲಿ ನಾಯಕರು ಹೆಸರುಗಳನ್ನು ಘೋಷಿಸಲು ತಾತ್ಕಾಲಿಕ ದಿನಾಂಕಗಳನ್ನು ನೀಡಿದ್ದರು.

ವಾಸ್ತವವಾಗಿ, ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಹಿರಿಯ ಬಿಜೆಪಿ ನಾಯಕ ವಿನೋದ್ ತಾವ್ಡೆ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಕೆಲವು ವಾರಗಳ ಹಿಂದೆ ಬೆಂಗಳೂರಿನಲ್ಲಿ ಹಲವು ಬಾರಿ ನಾಯಕರ ಪ್ರತಿಕ್ರಿಯೆ ಪಡೆಯುತ್ತಿದ್ದರು. ಆದರೆ ಈಗ ಒಂದು ತಿಂಗಳು ಸಮೀಪಿಸುತ್ತಿದ್ದರೂ ಇಲ್ಲಿಯವರೆಗೆ ಏನೂ ಮಾಡಲಾಗಿಲ್ಲ.

ಪಕ್ಷದ ನಾಯಕರಿಗೆ, ಈ ಸಮಯದಲ್ಲಿ ಇದು ಆದ್ಯತೆಯಲ್ಲ. ಕರ್ನಾಟಕದಲ್ಲಿ ವಿಧಾನಸಭೆ ಅಧಿವೇಶನ ಕೂಡ ಮುಗಿದಿದೆ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವಲ್ಲಿ ಅವರಿಗೆ ಹೆಚ್ಚಿನ ಆಯ್ಕೆಗಳಿಲ್ಲ, ಹೀಗಾಗಿ ಅವರು ಆತುರಪಡುವುದಿಲ್ಲ ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಜುಲೈ ಅಂತ್ಯದೊಳಗೆ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಪಕ್ಷದ ಹೈಕಮಾಂಡ್ ಉನ್ನತ ಹುದ್ದೆಗಳಿಗೆ ಹೆಸರುಗಳನ್ನು ಪ್ರಕಟಿಸುತ್ತದೆ ಎಂದು ಕೆಲವು ನಾಯಕರು ನಿರೀಕ್ಷಿಸುತ್ತಿದ್ದಾರೆ, ಈ ಹಿಂದೆ, ಮೇ ಕೊನೆಯ ವಾರದಲ್ಲಿ ಹೆಸರುಗಳನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಲಾಗಿತ್ತು, ನಂತರ ಅದು ಜೂನ್ ಮತ್ತು ನಂತರ ಜುಲೈ 3 ಆಗಿರುತ್ತದೆ ಎಂಬ ಗುಸುಗುಸು ಇತ್ತು. ಆದರೆ ಇದುವರೆಗೂ ಎರಡು ಹುದ್ದೆಗಳಿಗೂ ಹೆಸರು ಪ್ರಕಟಿಸಿಲ್ಲ.

ಲೋಕಸಭಾ ಚುನಾವಣೆಗೆ ಕೇವಲ ಹತ್ತು ತಿಂಗಳು ಬಾಕಿ ಇರುವಾಗ ಸದನದ ಒಳಗೆ ಮತ್ತು ಹೊರಗೆ ಆಡಳಿತ ಪಕ್ಷದ ವಿರುದ್ಧ ಹೋರಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಕ್ರಿಯಾ ಯೋಜನೆ ರೂಪಿಸಲು ಸಾಧ್ಯವಾಗುತ್ತಿಲ್ಲ. ಪಕ್ಷವನ್ನು ಒಂದೇ ದಿಕ್ಕಿನಲ್ಲಿ ಕೊಂಡೊಯ್ಯುವ ವ್ಯಕ್ತಿ ನಮಗೆ ಬೇಕು ಎಂದು ಬಿಜೆಪಿಯ ಹಿರಿಯ ಶಾಸಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com