2024 ಲೋಕಸಭಾ ಚುನಾವಣೆ: ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಕುರಿತು ಅಡ್ಡಗೋಡೆ ಮೇಲೆ ದೀಪ ಇಟ್ಟ ಹೆಚ್.ಡಿ. ದೇವೇಗೌಡ!

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಮಾತುಗಳ ಕುರಿತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.
ಹೆಚ್. ಡಿ. ದೇವೇಗೌಡ
ಹೆಚ್. ಡಿ. ದೇವೇಗೌಡ
Updated on

ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಮಾತುಗಳ ಕುರಿತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮುಂಬರುವ ಲೋಕಸಬಾ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಹೋರಾಟ ನಡೆಸಲಿದೆ. ಆದಾಗ್ಯೂ, ಪರಿಸ್ಥಿತಿ ಆಧಾರಿಸಿ ಪಕ್ಷ ಮುಂದೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು. 

ಈ ತಿಂಗಳ ಆರಂಭದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಗೆ ತಮ್ಮ ಉಪಸ್ಥಿತಿ ಇರಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಯಸಿದ್ದರೂ ಕರ್ನಾಟಕದ ಕಾಂಗ್ರೆಸ್‌ನ ಒಂದು ವರ್ಗ ಅಂತಹ ಕ್ರಮವನ್ನು ವಿರೋಧಿಸಿದ್ದರಿಂದ ತಮ್ಮಗೆ ಆಹ್ವಾನ ನೀಡಿರಲಿಲ್ಲ ಎಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಳೆದ ವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ವಿಷಯಗಳಲ್ಲಿ ಬಿಜೆಪಿಯೊಂದಿಗೆ ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳುವ ಮೂಲಕ ಮುಂದಿನ ವರ್ಷದ ಚುನಾವಣೆಗೆ ಎರಡು ಪಕ್ಷಗಳು ಕೈಜೋಡಿಸುತ್ತವೆ ಎಂಬ ಊಹಾಪೋಹಗಳಿಗೆ ರೆಕ್ಕೆಪುಕ್ಕ ನೀಡಿದ್ದರು. ಆದರೆ, ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ದೇವೇಗೌಡರು, ಅಂತಹ ಊಹಾಪೋಹಗಳನ್ನು ತಳ್ಳಿಹಾಕಿದರು.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಪಕ್ಷ ಐದು, ಆರು, ಮೂರು, ಎರಡು ಅಥವಾ ಒಂದು ಸ್ಥಾನಗಳನ್ನು ಗೆದ್ದರೂ, ನಾವು ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಹೋರಾಡುತ್ತೇವೆ. ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದ ನಂತರ ಪ್ರಬಲವಾಗಿರುವ ಸ್ಥಳಗಳಲ್ಲಿ ಮಾತ್ರ ನಾವು ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ. ಆದಾಗ್ಯೂ, ಪರಿಸ್ಥಿತಿಯನ್ನು ಆಧರಿಸಿ ಪಕ್ಷವು ತನ್ನ ಮುಂದಿನ ಕ್ರಮವನ್ನು ನಿರ್ಧರಿಸುತ್ತದೆ ಎಂದು ಅವರು ತಿಳಿಸಿದರು. 

ಇದೇ ಸಂದರ್ಭದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ತಮ್ಮ ಪಕ್ಷ ಹೇಗೆ ಬೆಂಬಲ ನೀಡಿತ್ತು ಎಂಬುದನ್ನು ಸ್ಮರಿಸಿದ ದೇವೇಗೌಡರು, 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಟ್ಟಾಗಿ ಸ್ಪರ್ಧಿಸಿದ್ದವು. ಆಗ ಕರ್ನಾಟಕದ 28 ಸ್ಥಾನಗಳ ಪೈಕಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ ಒಂದು ಸ್ಥಾನ ಗಳಿಸಿದ್ದರೆ, ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯೂ ಗೆಲುವು ಸಾಧಿಸಿದ್ದರು. ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ದೇವೇಗೌಡರೂ ಸೋತಿದ್ದರು.

ಜುಲೈ 17 ರಂದು ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳು ತಮ್ಮನ್ನು ಏಕೆ ಆಹ್ವಾನಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ದೇವೇಗೌಡರನ್ನು ಆಹ್ವಾನಿಸಿದರೆ ಕಾಂಗ್ರೆಸ್‌ನ ಒಂದು ವರ್ಗ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಬೆದರಿಕೆ ಹಾಕಿತ್ತು. ಹೀಗಾಗಿ ನನ್ನನ್ನು ಕರೆಯಲಿಲ್ಲ. ನಿತೀಶ್ ಕುಮಾರ್ ಅವರನ್ನು ಆಹ್ವಾನಿಸಲು ಬಯಸಿದ್ದರು ಆದರೆ ಕೆಲವು ಸ್ಥಳೀಯ ಕಾಂಗ್ರೆಸ್ ನಾಯಕರು ತಮ್ಮ ಪರವಾಗಿರಲಿಲ್ಲ ಎಂದರು.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಕಳಪೆ ಪ್ರದರ್ಶನ ನೀಡಿ ಕೇವಲ 19 ಸ್ಥಾನಗಳನ್ನು ಗಳಿಸಿತ್ತು. 1983ರಿಂದ ಇಂದಿನವರೆಗೂ ಪಕ್ಷ ಅಸ್ತಿತ್ವದಲ್ಲಿದೆ ಮತ್ತು ಮುಂದೆಯೂ ಇರುತ್ತದೆ.
ಪಕ್ಷ ಮುಗಿಯುತ್ತದೆ ಎಂದುಕೊಂಡವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಅದು ಸಾಧ್ಯವಿಲ್ಲ ಎಂದು ಗೌಡರು ಹೇಳಿದರು.

ಗೌಡರ ಪ್ರಕಾರ, 19 ಶಾಸಕರು, ಏಳು ಎಂಎಲ್‌ಸಿಗಳು ಮತ್ತು ಉನ್ನತ ನಾಯಕರು ಕಳೆದ ವಾರ ಸಭೆ ನಡೆಸಿ ಜಿಲ್ಲೆಗಳಲ್ಲಿ ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದು, ಕುಮಾರಸ್ವಾಮಿ ವಿದೇಶದಿಂದ ಮರಳಿದ ನಂತರ ದಿನಾಂಕ ಅಂತಿಮಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com