
ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಎಲ್ಲಾ ಸುದ್ದಿಗಳು ಕೇವಲ ವದಂತಿ ಎಂದು ಜೆಡಿಎಸ್ ಹಿರಿಯ ನಾಯಕ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ, ಬಿಜೆಪಿ ನಾಯಕರ ಜೊತೆ ಅಂತಹ ಯಾವುದೇ ಚರ್ಚೆ ನಡೆದಿಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕೀಯದಲ್ಲಿ ಊಹಾಪೋಹಗಳು ಸಾಮಾನ್ಯ. ಇಲ್ಲಿಯವರೆಗೆ ಯಾವ ಬಿಜೆಪಿ ನಾಯಕರು ಕೂಡ ನನ್ನ ಜೊತೆ ಚರ್ಚೆ ನಡೆಸಿಲ್ಲ ಎಂದಿದ್ದಾರೆ.
ಜಿಲ್ಲಾವಾರು ಮಟ್ಟದಲ್ಲಿ ನಮ್ಮ ಪಕ್ಷದ ಸೋತ ಮತ್ತು ಗೆದ್ದ ಅಭ್ಯರ್ಥಿಗಳ ಜೊತೆ ಮಾತನಾಡಿದ್ದೇನೆ.ಪಕ್ಷವು ಈಗ ಮುಂದಿನ ಹಾದಿಯಲ್ಲಿ ಕೆಲಸ ಮಾಡುತ್ತಿದೆ. ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿದೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಎರಡು ಸ್ಥಾನಗಳಲ್ಲಿ ಪ್ರಬಲ ಅವಕಾಶವನ್ನು ಹೊಂದಿದೆ, ಮೂರು ಕ್ಷೇತ್ರಗಳಲ್ಲಿ ಪ್ರಬಲ ಹೋರಾಟ ನೀಡಬಹುದು. ಐದಾರು ಕ್ಷೇತ್ರಗಳಲ್ಲಿ ಫಲಿತಾಂಶ ನಿರೀಕ್ಷಿಸುತ್ತಿದ್ದೇವೆ ಎಂದರು.
ರಾಷ್ಟ್ರ ರಾಜಕಾರಣಕ್ಕೆ ಬರುವ ಆಸಕ್ತಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಈ ಹಿಂದೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದೇನೆ ಎಂದರು.
ಕಾಂಗ್ರೆಸ್ ಸರ್ಕಾರದ ಖಾತರಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಫಲಾನುಭವಿಗಳಿಗೆ ಸೌಲಭ್ಯಗಳು ಹೇಗೆ ತಲುಪಿಸುತ್ತವೆ ಎಂಬುದು ಮುಖ್ಯ, ಈಗಾಗಲೇ ಭೂಮಾಲೀಕರು ಬಾಡಿಗೆದಾರರಿಗೆ ಬಿಬಿಎಂಪಿ ಅಥವಾ ತೆರಿಗೆ ಅಧಿಕಾರಿಗಳ ಕ್ರಮಕ್ಕೆ ಹೆದರಿ ಗುತ್ತಿಗೆ ನೀಡುತ್ತಿಲ್ಲ, ಖಾತರಿಗಳು ಹೇಗೆ ಜನರಿಗೆ ಉಪಯೋಗವಾಗುತ್ತವೆ ಎಂಬುದು ಮುಖ್ಯವಾಗಿರುತ್ತದೆ ಎಂದರು.
ಸರ್ಕಾರಿ ಕಾಮಗಾರಿಗಳಲ್ಲಿ ಶೇಕಡಾ 40 ಕಮಿಷನ್ ಪಡೆದಿರುವ ಆರೋಪದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ದೊಡ್ಡ ಹಗರಣದ ತನಿಖೆಗೆ ಆಡಳಿತ ಪಕ್ಷ ಇನ್ನೂ ಆದೇಶ ನೀಡಿಲ್ಲ. ಹಿಂದಿನ ಸರಕಾರಗಳು ಮಾಡಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಸತ್ಯಾಂಶವನ್ನು ಜನರ ಮುಂದಿಡಬೇಕು ಎಂದರು.
Advertisement