ಪ್ರತಾಪ್ ಸಿಂಹಗೆ ಆಸೆ ಇದ್ದರೆ ಇನ್ನೊಂದು ಮದುವೆಯಾಗಲಿ: ತನ್ವೀರ್ ಸೇಠ್ ತಿರುಗೇಟು
ಮೈಸೂರು: ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಆಸೆ ಇದ್ದರೆ ಇನ್ನೊಂದು ಮದುವೆಯಾಗಿ, ಅದರ ಅನುಭವವನ್ನು ನಮಗೆ ಹೇಳಲಿ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು ಶನಿವಾರ ತಿರುಗೇಟು ನೀಡಿದ್ದಾರೆ.
ಗೃಹ ಲಕ್ಷ್ಮಿ ಯೋಜನೆ ಜಾರಿಯಿಂದ ಕುಟುಂಬಗಳಲ್ಲಿ ಒಡಕು ಉಂಟಾಗಿದೆ. ಮುಸ್ಲಿಮರಿಗೆ ಎರಡು ಮೂರು ಹೆಂಡತಿಯರಿರುತ್ತಾರೆ. ಆಗ ಯಾರನ್ನು ಮನೆಯ ಯಜಮಾನಿ ಎಂದು ಗುರುತಿಸುತ್ತೀರಾ ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದರು.
ಇಂದು ಮೈಸೂರಿನಲ್ಲಿ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ್ ಅವರು, ಪ್ರತಾಪ್ ಸಿಂಹಗೆ ಆಸೆ ಇದ್ದರೆ ಇನ್ನೊಂದು ಮದುವೆಯಾಗಿ ಅದರ ಅನುಭವವನ್ನು ನಮಗೆ ಬಂದು ಹೇಳಲಿ ಎಂದು ಟಾಂಗ್ ನೀಡಿದರು.
ಇದೇ ವೇಳೆ ಪ್ರತಾಪ್ ಸಿಂಹ ಅವರ ಹೊಂದಾಣಿಕೆ ರಾಜಕೀಯದ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಅಡ್ಜೆಸ್ಟ್‌ಮೆಂಟ್ ರಾಜಕೀಯ ನನಗೆ ಗೊತ್ತಿಲ್ಲ. ಆ ರೀತಿ ಮಾಡಿರುವವರಿಗೆ ಆ ವಿಚಾರ ಗೊತ್ತು. ಅಡ್ಜೆಸ್ಟ್ ಮೆಂಟ್ ಮಾಡ್ಕೊಂಡು ಒಬ್ಬರನ್ನು ತುಳಿಯಲು ಮತ್ತೊಬ್ಬರನ್ನು ಬಳಸಿಕೊಳ್ಳೋದು ಸರಿಯಲ್ಲ. ಅನುಭವ ಇರುವವರು ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರವೇ ನೇರ ಕಾರಣ. ವಿದ್ಯುತ್ ದರ ಹೆಚ್ಚಳಕ್ಕೆ ಕೆಇಆರ್‌ಸಿ ಮಾಡಿದ್ದ ಶಿಫಾರಸ್ಸಿಗೆ ಈ ಹಿಂದಿನ ಬಿಜೆಪಿ ಸರ್ಕಾರ ಒಪ್ಪಿಗೆ ಸೂಚಿಸಿದೆ. ಬಿಜೆಪಿಯರಿಗೆ ಚುನಾವಣೆಯಲ್ಲಿ ಸೋಲುವುದು ಖಚಿತವಾಗಿದ್ದರಿಂದ ವಿದ್ಯುತ್ ದರ ಹೆಚ್ಚಳ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ