ಸಮರ್ಥ ನಾಯಕರಿಗೆ ಬಿಜೆಪಿ ಹುಡುಕಾಟ: ಜುಲೈ 2ರೊಳಗೆ ವಿರೋಧ ಪಕ್ಷದ ನಾಯಕನ ಆಯ್ಕೆ!

ಜುಲೈ 3 ರಿಂದ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಪ್ರಾರಂಭವಾಗಲಿದ್ದು, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪಕ್ಷದ ಆಯ್ಕೆಯನ್ನು ರಾಜ್ಯ ಬಿಜೆಪಿ ಇನ್ನೂ ಅಂತಿಮಗೊಳಿಸಿಲ್ಲ.
ಬಸವರಾಜ ಬೊಮ್ಮಾಯಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್
ಬಸವರಾಜ ಬೊಮ್ಮಾಯಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್
Updated on

ಬೆಂಗಳೂರು: ವಿರೋಧ ಪಕ್ಷದ ನಾಯಕ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆಗೆ ಭಾರಿ ಕಸರತ್ತು ನಡೆಸುತ್ತಿರುವ ಬಿಜೆಪಿ ವರಿಷ್ಠರು, ಈ ವಿಚಾರದಲ್ಲಿ ರಾಜ್ಯದ ಪ್ರಮುಖರ ಅಭಿಪ್ರಾಯಗಳನ್ನೂ ಆಲಿಸುತ್ತಿದ್ದಾರೆ. ಆ ಮೂಲಕ ‘ಸರ್ವಸಮ್ಮತ ಆಯ್ಕೆ’ಗೆ ಪ್ರಯತ್ನಿಸುತ್ತಿದ್ದಾರೆ. ಜುಲೈ 3 ರಿಂದ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಪ್ರಾರಂಭವಾಗಲಿದ್ದು, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪಕ್ಷದ ಆಯ್ಕೆಯನ್ನು ರಾಜ್ಯ ಬಿಜೆಪಿ ಇನ್ನೂ ಅಂತಿಮಗೊಳಿಸಿಲ್ಲ.

ಎರಡೂ ಹುದ್ದೆಗಳಿಗೆ ಸಮರ್ಥರನ್ನು ಆಯ್ಕೆ ಮಾಡಬೇಕೆಂಬ ಬೇಡಿಕೆಯೂ ಇದೆ. ಈ ಹಿಂದೆ ಇಂತಹ ಸಂದರ್ಭಗಳಲ್ಲಿ ಪಕ್ಷದ ರಾಷ್ಟ್ರೀಯ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಈ ಬಾರಿ ನಿರ್ಧಾರಕ್ಕೂ ಮೊದಲು ರಾಜ್ಯ ಬಿಜೆಪಿಯ ಕೆಲವು ಪ್ರಮುಖ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.

ಮೂಲಗಳ ಪ್ರಕಾರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಮುಂಚೂಣಿಯಲ್ಲಿದ್ದಾರೆ. ಆದರೆ ಪಕ್ಷದ ಹೈಕಮಾಂಡ್ ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ಈಗ, ಜುಲೈ 3 ರಂದು ಅಧಿವೇಶನ ಪ್ರಾರಂಭವಾಗಲಿದ್ದು, ಜುಲೈ 2 ರೊಳಗೆ ಹೆಸರನ್ನು ಅಂತಿಮಗೊಳಿಸುವ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ.

ದೆಹಲಿಯಲ್ಲಿ ಪಕ್ಷದ ನಾಯಕರ ಬಿಡುವಿಲ್ಲದ ವೇಳಾಪಟ್ಟಿಯೇ ವಿಳಂಬಕ್ಕೆ ಕಾರಣ ಎಂದು ಬಿಜೆಪಿ ಮೂಲಗಳು ತಿಳಿಸಿವೆ. "ಒಂದು ಅಥವಾ ಎರಡು ದಿನಗಳಲ್ಲಿ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಮತ್ತು ಭಾನುವಾರದೊಳಗೆ ಹೆಸರನ್ನು ಪ್ರಕಟಿಸಲಾಗುವುದು ಎಂದು ನಾವು ಭಾವಿಸುತ್ತೇವೆ" ಎಂದು ಬಿಜೆಪಿ ನಾಯಕರೊಬ್ಬರು  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಬೊಮ್ಮಾಯಿ ಮತ್ತು ಯತ್ನಾಳ್ ಅವರು ಮುಂಚೂಣಿಯಲ್ಲಿದ್ದರೂ, ವಿವಿಧ ಸಮಸ್ಯೆಗಳನ್ನು ವಿಂಗಡಿಸಬೇಕಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ಹೆಚ್ಚಿನ ವಿವರಣೆ ನೀಡದೆ ಹೇಳಿದರು.  ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಎಂಎಲ್‌ಸಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಹೆಸರು ಕೇಳಿಬರುತ್ತಿದೆ. ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಡಾ.ಸಿ.ಎನ್.ಅಶ್ವನಾರಾಯಣ್ ಮತ್ತು ವಿ.ಸೋಮಣ್ಣ ಹೆಸರು ಕೇಳಿಬರುತ್ತಿದೆ.

ಶಾಸಕಾಂಗ ಪಕ್ಷದ ಸಭೆಯನ್ನು ನಡೆಸುವ ಮುನ್ನವೇ ಪ್ರಮುಖ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿ, ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆ ಕುರಿತು ತೀರ್ಮಾನಕ್ಕೆ ಬರಲು ವರಿಷ್ಠರು ನಿರ್ಧರಿಸಿದ್ದಾರೆ. ಜುಲೈ 3ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುನ್ನ ತೀರ್ಮಾನ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com