'500 ರೂಪಾಯಿ ಕೊಟ್ಟು ಜನ್ರನ್ನ ಕರ್ಕೊಂಡು ಬರೋದು, ಅವ್ರು ಕೂಡ ದುಡ್ಡು ಕೊಟ್ಟು ಜನ ಸೇರಿಸ್ತಾರೆ': ಸಿದ್ದರಾಮಯ್ಯ ಮಾತಿನ ವಿಡಿಯೊ ವೈರಲ್

ರಾಜಕೀಯ ಪಕ್ಷಗಳ, ರಾಜಕೀಯ ನಾಯಕರ ಸಮಾವೇಶಗಳು, ರ್ಯಾಲಿಗಳಿಗೆ ಹಣ ಕೊಟ್ಟು ಜನರನ್ನು ಸೇರಿಸುವ ವಿಚಾರ ರಹಸ್ಯವೇನಲ್ಲ. ಅದೂ ಚುನಾವಣೆ ಹೊತ್ತಲ್ಲಿ ದುಡ್ಡಿನ ಹೊಳೆ ಹರಿಯುವುದು ಸಾಮಾನ್ಯ. ಈಗ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಪರ್ವ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಳಗಾವಿ: ರಾಜಕೀಯ ಪಕ್ಷಗಳ, ರಾಜಕೀಯ ನಾಯಕರ ಸಮಾವೇಶಗಳು, ರ್ಯಾಲಿಗಳಿಗೆ ಹಣ ಕೊಟ್ಟು ಜನರನ್ನು ಸೇರಿಸುವ ವಿಚಾರ ರಹಸ್ಯವೇನಲ್ಲ. ಅದೂ ಚುನಾವಣೆ ಹೊತ್ತಲ್ಲಿ ದುಡ್ಡಿನ ಹೊಳೆ ಹರಿಯುವುದು ಸಾಮಾನ್ಯ. ಈಗ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಪರ್ವ.

ಕರ್ನಾಟಕ ವಿಧಾನ ಸಭಾ ಚುನಾವಣೆ(Karnataka Assembly Elections 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ರಾಜ್ಯಾದ್ಯಂತ ಕ್ಷೇತ್ರಗಳಲ್ಲಿ ಸಂಚರಿಸುತ್ತವೆ. ಪ್ರಜಾಧ್ವನಿ, ವಿಜಯ ಸಂಕಲ್ಪ, ಪಂಚರತ್ನ ರಥಯಾತ್ರೆಗಳ ಮೂಲಕ ಮತದಾರರನ್ನು ಸೆಳೆಯಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಂತ್ರ ಹಣೆಯುತ್ತಿವೆ. ಈ ಹೊತ್ತಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಿರುವ ಮಾತು ವಿಡಿಯೊದಲ್ಲಿ ಸೆರೆಯಾಗಿ ವೈರಲ್ ಆಗಿದೆ. ಇದನ್ನು ಸಾಂಪ್ರದಾಯಿಕ ಎದುರಾಳಿ ಬಿಜೆಪಿ ಬಳಸಿಕೊಂಡು ವೈರಲ್ ಮಾಡುತ್ತಿದೆ.

ವಿಡಿಯೊದಲ್ಲಿ ಏನಿದೆ?: ನಿನ್ನೆ ಮಾರ್ಚ್ 1ರಂದು ಬೆಳಗಾವಿ ಜಿಲ್ಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಲಾಯಿತು. ಈ ವೇಳೆ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬರುವ ಬಗ್ಗೆ ಸಿದ್ದರಾಮಯ್ಯ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ. ವಿಡಿಯೊದಲ್ಲಿ ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರಿದ್ದಾರೆ. 

ಬಸ್ಸಿನಲ್ಲಿ ಪ್ರಯಾಣಿಸುವಾಗ ಸಿದ್ದರಾಮಯ್ಯನವರು, ಪ್ರತಿಯೊಬ್ಬರಿಗೂ 500 ರೂಪಾಯಿ ಕೊಟ್ಟು ಪ್ರಚಾರಕ್ಕೆ ಕರೆದುಕೊಂಡು ಬನ್ನಿ ಎಂದು ಹೇಳುತ್ತಿದ್ದಾರೆ. ಎಲೆಕ್ಷನ್ ಇರೋದ್ರಿಂದ ಅವರು ಕೂಡ ಜನ ಸೇರಿಸ್ತಾರೆ ಎನ್ನುತ್ತಾರೆ. ಈ ವಿಡಿಯೊವನ್ನು ಟ್ವೀಟ್ ಮಾಡಿ ಟೀಕಿಸಿರುವ ಬಿಜೆಪಿ, ದುಡ್ಡು ಕೊಟ್ಟು ಜನರನ್ನು ಕರೆದು ತರುವುದು, ಅವರಿಗೆಲ್ಲ ಬಿಟ್ಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡುವುದು, ಆ ಕಡೆ ಅದೂ ಇಲ್ಲ, ಈ ಕಡೆ ಇದೂ ಇಲ್ಲ. ಕಾಂಗ್ರೆಸ್ ಕಥೆ ಈಗ ಮುಂಡಾಸು ಇಲ್ಲದಿರುವ ಮದುಮಗನ ಥರ ಆಗಿದೆ ಎಂದು ಟೀಕಿಸಿದೆ. 

ಈ ಬಾರಿ ಶತಾಯಗತಾಯ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರಬೇಕು ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿಧಾನಸಭೆ ಕ್ಷೇತ್ರವಾರು ಬಸ್ ಯಾತ್ರೆ ಮಾಡುತ್ತಿದ್ದಾರೆ. ‌ಬೆಳಗಾವಿಯಿಂದ ಈ ಪ್ರಜಾಧ್ವನಿ ಯಾತ್ರೆ ಎಂದು ಹೆಸರಿಟ್ಟು ಚಾಲನೆ ನೀಡಿದ್ದ ಯಾತ್ರೆ ಇದೀಗ ಎರಡನೇ ಸುತ್ತು ಬೆಳಗಾವಿ ಪ್ರವೇಶ ಮಾಡಿದೆ.‌ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com