ಶಾಸಕರದ್ದೇ ಈ ಪರಿ ಲೂಟಿ ಇರುವಾಗ ಮಂತ್ರಿಗಳದ್ದು ಇನ್ನೆಷ್ಟು? ಐಟಿ, ಇಡಿ, ಸಿಬಿಐಗಳು ಬಾಳೆಹಣ್ಣಿನ ಸಿಪ್ಪೆ ತೆಗೆಯುತ್ತಿವೆಯೇ ಅಮಿತ್ ಶಾ ಅವರೇ?

ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ, ಕೆಎಎಸ್‌ ಅಧಿಕಾರಿ ಮಾಡಾಳು ಪ್ರಶಾಂತ್‌ ಅವರು ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿರುವ ಪ್ರಕರಣ ಕಾಂಗ್ರೆಸ್‌ ರೊಟ್ಟಿ ಕೈಯಿಂದ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ.
ಕಾಂಗ್ರೆಸ್ ಟ್ವೀಟ್ ಮಾಡಿರುವ ಫೋಟೋ
ಕಾಂಗ್ರೆಸ್ ಟ್ವೀಟ್ ಮಾಡಿರುವ ಫೋಟೋ

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ, ಕೆಎಎಸ್‌ ಅಧಿಕಾರಿ ಮಾಡಾಳು ಪ್ರಶಾಂತ್‌ ಅವರು ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿರುವ ಪ್ರಕರಣ ಕಾಂಗ್ರೆಸ್‌ ರೊಟ್ಟಿ ಕೈಯಿಂದ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 40% ಕಮಿಷನ್ನಿಗೆ ದಾಖಲೆ ಕೊಡಿ ಎನ್ನುತ್ತಿದ್ದ ಬಸವರಾಜ ಬೊಮ್ಮಾಯಿಯವರೇ ಇಂದು ಲೋಕಾಯುಕ್ತ ದಾಳಿಯಲ್ಲಿ ಕಮಿಷನ್ ಕರ್ಮಕಾಂಡಕ್ಕೆ ದಾಖಲೆ ಸಿಕ್ಕಿತಲ್ಲವೇ? ಇದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ? ಈಗ ಭ್ರಷ್ಟಾಚಾರಕ್ಕೆ ಹೊಣೆ ಹೊತ್ತು ರಾಜೀನಾಮೆ ಕೊಡುವಿರಾ? ನಿಮ್ಮದು 40% ಸರ್ಕಾರ ಎನ್ನಲು ಇನ್ನೇನು ಬೇಕು ಬಿಜೆಪಿಯವರೇ ಎಂದು ಪ್ರಶ್ನಿಸಿತ್ತು

ಕಮಿಷನ್ನಿನ ಪರ್ಸೆಂಟೂ ನಲವತ್ತು, ಪಡೆಯುತ್ತಿದ್ದ ಲಂಚವೂ ನಲವತ್ತು, ನಲವತ್ತು ನಲವತ್ತು, ತೋಳ ಹಳ್ಳಕ್ಕೆ ಬಿತ್ತ,  ಶಾಸಕರ ಪರವಾಗಿ ಶಾಸಕರ ಪುತ್ರ ಲಂಚ ಸ್ವೀಕರಿಸುವಾಗ ಸಿಕ್ಕಿಬೀಳುವ ಮೂಲಕ ಕರ್ನಾಟಕ ಬಿಜೆಪಿಯ ಕಮಿಷನ್ ದಂಧೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಂತಾಗಿದೆ. ಈಗ ಬೊಮ್ಮಾಯಿ ಅವರು ರಾಜೀನಾಮೆ ಕೊಡ್ತಾರಾ?- ಎಂದು ಕೇಳಿದೆ. ಇದಕ್ಕೆ ಕಾಂಗ್ರೆಸ್‌ #ElectionCollection ಎಂಬ ಹ್ಯಾಷ್‌ ಟ್ಯಾಗ್‌ ನೀಡಿದೆ.

ಚುನಾವಣೆ ಖರ್ಚಿಗಾಗಿ ಬಿಜೆಪಿಯ #ElectionCollection ಬಿರುಸಿನಿಂದ ಸಾಗಿದೆ, ಅಧಿಕಾರಾವಧಿ ಮುಗಿಯುತ್ತಿದೆ, ಮತ್ತೆಂದೂ ಅಧಿಕಾರಕ್ಕೆ ಬರುವುದಿಲ್ಲ ಎಂದು  ಬಿಜೆಪಿ ಬಕಾಸುರನಂತೆ ದೋಚಿ ಬಾಚುತ್ತಿದೆ. ರಿಸರ್ವ್ ಬ್ಯಾಂಕಿನಲ್ಲಿರುವುದಕ್ಕಿಂತ ಹೆಚ್ಚು ಹಣ ಬಿಜೆಪಿಗರ ಮನೆಯಲ್ಲಿದೆ! ಒಬ್ಬ ಶಾಸಕರದ್ದೇ ಈ ಪರಿ ಲೂಟಿ ಇರುವಾಗ ಮಂತ್ರಿಗಳ ಲೂಟಿ ಇನ್ನೆಷ್ಟು? ಇಂದು ಅಮಿತ್ ಶಾ ಬರುತ್ತಿರುವುದಕ್ಕೂ, ಈ ನಿಧಿ ಸಂಗ್ರಹಕ್ಕೂ ಸಂಬಂಧವಿದೆಯೇ? ಅಮಿತ್ ಶಾ ಬರುತ್ತಿರುವುದೇ ಇಲ್ಲಿನ 'ಸಂಪತ್ತು' ಕೊಂಡೊಯ್ಯುವುದಕ್ಕಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಶಾಸಕರ ಮನೆಯಲ್ಲಿ ಸಿಕ್ಕ ಹಣದ ರಹಸ್ಯವೇನು? ಈ ಹಣ #PayCM ಗೆ ತಲುಪಿಸುವುದಕ್ಕಾ ಅಥವಾ #PayPM ಗೆ ತಲುಪಿಸುವುದಕ್ಕಾ? ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವ ಮೊ-ಶಾ ಜೋಡಿಗೆ ಕರ್ನಾಟಕ ಎಟಿಎಂ ಆಗಿದೆಯೇ? ಸಂಪತ್ತಿನ ಕ್ರೋಡೀಕರಣಕ್ಕಾಗಿಯೇ 40% ಕಮಿಷನ್ ಬಗ್ಗೆ ಮೋದಿ, ಶಾ ಮಾತಾಡುತ್ತಿಲ್ಲವೇ?

"ನಾ ಖಾವುಂಗಾ, ನಾ ಖಾನೆದುಂಗಾ" ಎನ್ನುವ ನರೇಂದ್ರ ಮೋದಿ ಅವರೇ, ಇಲ್ಲಿರುವುದು ಡಬಲ್ ಇಂಜಿನ್ ಸರ್ಕಾರವಲ್ಲ, ಡಬಲ್ ಲೂಟಿಯ ಸರ್ಕಾರ. ನಿಮ್ಮವರ ಲೂಟಿ ಸಾಧನೆಯನ್ನು ಕಣ್ತುಂಬಿಕೊಳ್ಳಲೆಂದೇ ಕರ್ನಾಟಕಕ್ಕೆ ತಿಂಗಳಿಗೆ ಮೂರು ಬಾರಿ ಬರುತ್ತಿರುವಿರಾ? "ಶಬಾಷ್" ಎಂದು ಬಿಜೆಪಿ ಭ್ರಷ್ಟರ ಬೆನ್ನು ತಟ್ಟಿ ಹೋಗುವಿರಾ? ಎಂದು ಕಾಂಗ್ರೆಸ್ ಟಾಂಗ್ ನೀಡಿದೆ.

ಕಮಿಷನ್ ಲೂಟಿಯ ಹಣ ಇಡಲು ಮನೆಗಳು ಸಾಲದೆ ಬಿಜೆಪಿಗರು ದೊಡ್ಡ ದೊಡ್ಡ ಗೋಡೌನ್‌ಗಳನ್ನೇ ಕಟ್ಟಿಸಿರುವಂತಿದೆ! ಒಬ್ಬೊಬ್ಬರಲ್ಲೂ ಲಾರಿಯಲ್ಲಿ ಲೋಡ್ ಮಾಡುವಷ್ಟು ಭ್ರಷ್ಟ ಹಣ ತುಂಬಿ ತುಳುಕುತ್ತಿದೆ. ಹೀಗಿದ್ದರೂ ಬಿಜೆಪಿಗರತ್ತ ಸುಳಿಯದ ಐಟಿ, ಇಡಿ, ಸಿಬಿಐಗಳು ಬಾಳೆಹಣ್ಣಿನ ಸಿಪ್ಪೆ ತೆಗೆಯುತ್ತಿವೆಯೇ ಅಮಿತ್ ಶಾ ಅವರೇ ಎಂದು ಕಾಂಗ್ರೆಸ್ ಚಾಟಿ ಬೀಸಿದೆ.

ಭ್ರಷ್ಟಾಚಾರವೇ ಬಿಜೆಪಿಯ ಭರವಸೆ! ನಾವು ಹಿಂದೆಯೂ ಹೇಳಿದ್ದೇವೆ ಮುಂದೆಯೂ ಹೇಳುತ್ತೇವೆ. ಬಿಜೆಪಿ ನೀಡುವ ಭರವಸೆ 40% ಕಮಿಷನ್, ಅಕ್ರಮ, ಹಗರಣ, ಭ್ರಷ್ಟಾಚಾರ ಮಾತ್ರ. ಕರ್ನಾಟಕವನ್ನು ಲೂಟಿ ಹೊಡೆದು ಕೇಂದ್ರದ ನಾಯಕರಿಗೆ ಕಪ್ಪ ಕಾಣಿಕೆ ನೀಡುವುದಷ್ಟೇ ಇವರ ಭರವಸೆ ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com