ಹಾಸನ ವಿಮಾನ ನಿಲ್ದಾಣ ಯೋಜನೆಗೆ ಶಂಕುಸ್ಥಾಪನೆಗೆ 2ನೇ ಬಾರಿ ಎಚ್.ಡಿ.ರೇವಣ್ಣ ವಿರೋಧ
ಹಾಸನ: ಮಾರ್ಚ್ 13 ರಂದು ಹಾಸನದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗಾಗಿ ಹಾಸನಕ್ಕೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅವಮಾನ ಎದುರಿಸುವ ಸಾಧ್ಯತೆ ಇದೆ.
ಎರಡು ದಶಕಗಳ ಹಿಂದೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಇದೇ ಹಾಸನ ವಿಮಾನ ನಿಲ್ದಾಣ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಈಗ ಎರಡನೇ ಬಾರಿಗೆ ಶಂಕುಸ್ಥಾಪನೆ ನೆರವೇರಿಸುವುದಕ್ಕೆ ಮಾಜಿ ಸಚಿವ ಮತ್ತು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿರೋಧದ ನಡುವೆಯೂ ಮುಖ್ಯಮಂತ್ರಿಗಳು ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಶಂಕುಸ್ಥಾಪನೆ ಮಾಡಲು ಆಗಮಿಸಿದರೆ ಪ್ರತಿಭಟನೆ ನಡೆಸಲು ಜೆಡಿಎಸ್ ಕಾರ್ಯಕರ್ತರು ನಿರ್ಧರಿಸಿದ್ದಾರೆ.
ಹಾಸನದಲ್ಲಿ ಸೂಪರ್ ಸ್ಪೆಷಾಲಿಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಪ್ರವಾಸಿ ಮಂದಿರ ಮತ್ತು ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಅಪೂರ್ಣ ಯೋಜನೆಗಳನ್ನು ಸಹ ಮುಖ್ಯಮಂತ್ರಿ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ಮಿನಿ ವಿಧಾನಸೌಧ ಸೇರಿದಂತೆ 11 ವಿವಿಧ ಯೋಜನೆಗಳಿಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದು, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಎರಡೂ ಯೋಜನೆಗಳಿಗೆ ತಲಾ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು ಎಂದು ರೇವಣ್ಣ ತಿಳಿಸಿದ್ದಾರೆ.
ಅಪೂರ್ಣ ಯೋಜನೆಗಳ ಉದ್ಘಾಟನೆಗೆ ತರಾತುರಿ ಏಕೆ? ಎಂದು ಪ್ರಶ್ನಿಸಿರುವ ರೇವಣ್ಣ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾದ ಈ ಎಲ್ಲಾ ಯೋಜನೆಗಳಿಗೆ ಅನುದಾನ ನೀಡಿರುವುದರಿಂದ ಕಾರ್ಯಕ್ರಮ ಆಯೋಜಿಸಲು ಬಿಜೆಪಿ ನಾಯಕರಿಗೆ ಯಾವುದೇ ನೈತಿಕ ಹಕ್ಕಿಲ್ಲ. ಈಗಾಗಲೇ ಆರಂಭಗೊಂಡಿರುವ ಯೋಜನೆಗಳಿಗೆ ಶಂಕುಸ್ಥಾಪನೆ ಕಾರ್ಯವನ್ನೂ ಜಿಲ್ಲಾ ಪ್ರಾಧಿಕಾರ ನಿಗದಿ ಮಾಡಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಅಪೂರ್ಣ ಯೋಜನೆಗಳನ್ನು ಉದ್ಘಾಟನೆ ಮಾಡಲು ಸಿಎಂ ಬರುತ್ತಿದ್ದಾರೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ