ಚಾಮುಂಡಿ ತಾಯಾಣೆ ನನ್ನ ಮಗನಿಗೆ ನಾನು ಟಿಕೆಟ್ ಕೇಳಿಲ್ಲ, ನಾನು ರಾಜಕೀಯದಲ್ಲಿ ಇರುವವರೆಗೆ ಅಭಿಷೇಕ್ ರಾಜಕೀಯ ಸೇರಲ್ಲ: ಸುಮಲತಾ

ದೇಶವನ್ನು ಸರಿಯಾದ ದಿಕ್ಕಿನ ಕಡೆಯಲ್ಲಿ ತೆಗೆದುಕೊಂಡು ಹೋಗುವ ನಾಯಕತ್ವ ಇರುವುದು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಂದು ನಾನು ನಂಬಿದ್ದೇನೆ. ಕಳೆದ ನಾಲ್ಕು ವರ್ಷಗಳಲ್ಲಿ ಸಂಸದೆಯಾಗಿ ನಾನು ತೆಗೆದುಕೊಂಡ ನಿರ್ಧಾರ, ಮಾಡಿರುವ ಕೆಲಸ ಕೇಂದ್ರ ಸರ್ಕಾರದ ನಾಯಕರ ನೆರವಿನಿಂದ ಆಯಿತು. ಕಳೆದ ನಾಲ್ಕು ವರ್ಷಗಳಲ್ಲಿ ನಾನು ಕಂಡಿರುವುದು ಇದನ್ನು, ಹೀಗಾಗಿ ನಾನು ಈ ಸಂದರ್
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್

ಮಂಡ್ಯ: ದೇಶವನ್ನು ಸರಿಯಾದ ದಿಕ್ಕಿನ ಕಡೆಯಲ್ಲಿ ತೆಗೆದುಕೊಂಡು ಹೋಗುವ ನಾಯಕತ್ವ ಇರುವುದು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಂದು ನಾನು ನಂಬಿದ್ದೇನೆ. ಕಳೆದ ನಾಲ್ಕು ವರ್ಷಗಳಲ್ಲಿ ಸಂಸದೆಯಾಗಿ ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ಮಾಡಿರುವ ಕೆಲಸ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ನಾಯಕರ ನೆರವಿನಿಂದ ಆಯಿತು. ಮಂಡ್ಯ ಜಿಲ್ಲೆಗೆ ಇಂದು ಬದಲಾವಣೆ ಬೇಕಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಮುಂದಿನ ಹೆಜ್ಜೆ ಇಡುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್ ಹೇಳಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೆಲಸ, ನಾಯಕತ್ವವನ್ನು ಹೊಗಳುತ್ತಾ ಸಾಗಿದ ಸುಮಲತಾ ಅಂಬರೀಷ್, ದೇಶದಲ್ಲಿ ಅಭಿವೃದ್ಧಿಯಾಗುತ್ತಿರುವುದು ಮೋದಿಯವರು ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳು ಮತ್ತು ಕ್ರಮಗಳಿಂದ. ಕಳೆದ ನಾಲ್ಕು ವರ್ಷಗಳಿಂದ ನನ್ನ ಕೆಲಸಗಳಿಗೆ ಬೆಂಗಾವಲಾಗಿ ನಿಲ್ಲುತ್ತಿರುವ ಪಕ್ಷದ ಕಡೆಗೆ ಹೋಗುವ ನಿರ್ಧಾರ ತೆಗೆದುಕೊಂಡಿದ್ದೇನೆ. ಇದು ನನ್ನ ಭವಿಷ್ಯದ ದೃಷ್ಟಿಯಿಂದಲ್ಲ, ಮಂಡ್ಯ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಎಂದು ಹೇಳಿ ಬಿಜೆಪಿ ಪಕ್ಷಕ್ಕೆ ಇನ್ನು ಮುಂದೆ ಬೆಂಬಲ ನೀಡುತ್ತೇನೆ ಎಂದು ನಿರ್ಧಾರ ಪ್ರಕಟಿಸಿದರು. 

ಕುಟುಂಬ ರಾಜಕಾರಣ ಮಾಡುವುದಿಲ್ಲ: ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣ ಮಾಡುವುದಿಲ್ಲ, ತಾವು ರಾಜಕೀಯದಲ್ಲಿ ಇರುವವರೆಗೂ ಪುತ್ರ ಅಭಿಷೇಕ್ ಅಂಬರೀಷ್ ರಾಜಕಾರಣಕ್ಕೆ ಬರುವುದಿಲ್ಲ ಎಂದು ಘೋಷಿಸಿದರು. 

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡುವ ನಾಯಕತ್ವ ನನಗೆ ಬೇಕು, ಅಂತಹ ಆಶ್ವಾಸನೆ ನೀಡುವವರು ಬಿಜೆಪಿ ನಾಯಕರು. ನಾನು ಕೊನೆಯವರೆಗೂ ಕುಟುಂಬ ರಾಜಕೀಯ ಮಾಡುವುದಿಲ್ಲ. ಇದು ಮೈಸೂರಿನ ಚಾಮುಂಡಿ ತಾಯಾಣೆ ನಿಮ್ಮ ಮುಂದೆ ಇಂದು ಭಾಷೆ ಕೊಡುತ್ತಿದ್ದೇನೆ. ಅಂಬರೀಷ್ ಅವರು ಬದುಕಿರುವವರೆಗೂ ಕುಟುಂಬ ರಾಜಕಾರಣ ಮಾಡಲಿಲ್ಲ, ಅದನ್ನು ಒಪ್ಪುತ್ತಲೂ ಇರಲಿಲ್ಲ. ನಾನು ಕೂಡ ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ಸಾಗುತ್ತೇನೆ. 

ನಾನು ಪಕ್ಷಕ್ಕೆ ಸೇರ್ಪಡೆ ಆಗಬೇಕೆಂದರೆ ಅಭಿಷೇಕ್ ಅಂಬರೀಷ್ ಗೆ ಟಿಕೆಟ್ ನೀಡಬೇಕು ಎಂದು ಕೇಳಿದ್ದರೆ ನಾನು ಅಂಬರೀಷ್ ಪತ್ನಿ ಎಂದು ಹೇಳಿಕೊಳ್ಳಲು ಅನರ್ಹಳು. ನಾನು ರಾಜಕೀಯದಲ್ಲಿ ಇರುವವರೆಗೂ ಅಭಿಷೇಕ್ ರಾಜಕೀಯಕ್ಕೆ ಬರುವುದಿಲ್ಲ. 

ಮದ್ದೂರು ಅಥವಾ ಮಂಡ್ಯದಿಂದ ಟಿಕೆಟ್ ಕೊಡುತ್ತೇವೆ ಎಂದು ಎರಡು ಪಕ್ಷಗಳಿಂದ ಆಹ್ವಾನ ಬಂದಿತ್ತು. ಆದರೆ ಅಭಿಷೇಕ್ ಅದಕ್ಕೆ ಒಪ್ಪಲಿಲ್ಲ. ಹಾಗೇನಾದರೂ ಟಿಕೆಟ್ ಪಡೆಯಬೇಕೆಂದರೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿ, ಟಿಕೆಟ್ ಪಡೆಯುತ್ತೇನೆ. ನಾನು ಇಂಥವರ ಮಗ ಎಂದು ಹೇಳಿಕೊಂಡು ಟಿಕೆಟ್ ಪಡೆಯುವುದಿಲ್ಲ ಎಂದು ನಿರ್ಧಾರ ಮಾಡಿದ್ದಾನೆ, ಸದ್ಯಕ್ಕೆ ಸಿನಿಮಾದಲ್ಲಿ ನಟಿಸುತ್ತಿದ್ದಾನೆ, ಅದರಲ್ಲಿಯೇ ಮುಂದುವರಿಯಲಿದ್ದಾನೆ ಎಂದರು.

ನಾವು 40-45 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದರೂ ಅಭಿಷೇಕ್ ಸಿನಿಮಾ ನಿರ್ಮಿಸಲು ನಾವೇ ಮುಂದಾಗಿಲ್ಲ. ಬೇರೆ ನಿರ್ಮಾಪಕರು ಅವರಾಗಿಯೇ ಬಂದು ಕೇಳಿದಾಗ ಸಿನಿಮಾ ಮಾಡಿದ್ದೇವೆ. ಅಂತಹದ್ದರಲ್ಲಿ ರಾಜಕೀಯವಾಗಿ ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com