ನಾನು ದೆಹಲಿಗೆ ಬಂದ ಕೆಲಸ ಸುಸೂತ್ರವಾಗಿ ನಡೆದಿದೆ: ವಿ ಸೋಮಣ್ಣ; ಬಿಜೆಪಿಯನ್ನು ಅಧಿಕಾರಕ್ಕೆ ತರುವ ಎದೆಗಾರಿಕೆ ಇದೆಯಾ ಎಂದ ವಿಜಯೇಂದ್ರ

ರಾಜ್ಯ ಬಿಜೆಪಿಯಲ್ಲಿ ಲಿಂಗಾಯತ ಧರ್ಮದ ಪ್ರಬಲ ನಾಯಕ ವಸತಿ ಸಚಿವ ವಿ ಸೋಮಣ್ಣ ಅವರ ಅಸಮಾಧಾನದ ನಡೆ, ಹೇಳಿಕೆಗಳು ಬಹು ಚರ್ಚಿತ ವಿಷಯ. ಅದು ಬಿಜೆಪಿಯ ರಾಜಾಹುಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕುಟುಂಬದ ಮೇಲೆಯೇ ಅವರು ನೇರವಾಗಿ ಅಸಮಾಧಾನ ಹೊಂದಿದ್ದಾರೆ ಎಂಬುದು ವಿಶೇಷ.
ವಿ ಸೋಮಣ್ಣ, ಬಿ ವೈ ವಿಜಯೇಂದ್ರ, ಸಿ ಟಿ ರವಿ(ಸಂಗ್ರಹ ಚಿತ್ರ)
ವಿ ಸೋಮಣ್ಣ, ಬಿ ವೈ ವಿಜಯೇಂದ್ರ, ಸಿ ಟಿ ರವಿ(ಸಂಗ್ರಹ ಚಿತ್ರ)

ನವದೆಹಲಿ: ರಾಜ್ಯ ಬಿಜೆಪಿಯಲ್ಲಿ ಲಿಂಗಾಯತ ಧರ್ಮದ ಪ್ರಬಲ ನಾಯಕ ವಸತಿ ಸಚಿವ ವಿ ಸೋಮಣ್ಣ ಅವರ ಅಸಮಾಧಾನದ ನಡೆ, ಹೇಳಿಕೆಗಳು ಬಹು ಚರ್ಚಿತ ವಿಷಯ. ಅದು ಬಿಜೆಪಿಯ ರಾಜಾಹುಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕುಟುಂಬದ ಮೇಲೆಯೇ ಅವರು ನೇರವಾಗಿ ಅಸಮಾಧಾನ ಹೊಂದಿದ್ದಾರೆ ಎಂಬುದು ವಿಶೇಷ. ಅವರ ಅಸಮಾಧಾನ, ಸಿಟ್ಟು ಬಿ ವೈ ವಿಜಯೇಂದ್ರ ಮೇಲೆ, ಏಕೆ ಎಂಬುದು ಬಹಳವಾಗಿ ಚರ್ಚೆಯಾಗುತ್ತಿದೆ. 

ಈ ಮಧ್ಯೆ ನಿನ್ನೆ ದೆಹಲಿಗೆ ಹೋಗಿದ್ದ ಸಚಿವ ಸೋಮಣ್ಣ ಕೇಂದ್ರ ನಾಯಕರಾದ ಅಮಿತ್ ಶಾ, ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಭೇಟಿಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನನ್ನ ಕೆಲಸ ಸುಸೂತ್ರವಾಗಿ ಆಗಿದೆ ಎಂದು ಹೇಳಿದ್ದಾರೆ.

ನಿನ್ನೆ ಬೆಳಗ್ಗೆ ಅಮಿತ್ ಶಾ ಸಿಕ್ಕಿರಲಿಲ್ಲ. ಧರ್ಮೇಂದ್ರ ಪ್ರಧಾನ್ ಮತ್ತು ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವಂತೆ ಸೂಚಿಸಿದರು. ಬಳಿಕ ಸಂಸತ್ ಭವನದಲ್ಲಿ ಸೋಮಣ್ಣ ಜತೆಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪ್ರಹ್ಲಾದ್ ಜೋಶಿ ಸಹ ಇದ್ದರು. ಸಾಯಂಕಾಲ ಅಮಿತ್ ಶಾ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ, ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಸೋಮಣ್ಣಗೆ ಕೇಂದ್ರ ನಾಯಕರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ನಿನ್ನೆ ರಾತ್ರಿ ಸುದ್ದಿಗಾರರ ಜೊತೆ ಮಾತನಾಡಿದ ವಿ ಸೋಮಣ್ಣ, ಕಳೆದ ನಾಲ್ಕು ವರ್ಷಗಳಲ್ಲಿ ಸಚಿವನಾದ ಮೇಲೆ ನಾನು ಇದು ಎರಡನೇ ಬಾರಿ ದೆಹಲಿಗೆ ಬರುತ್ತಿರುವುದು, ಇಲಾಖೆಯ ಕೆಲಸದ ನಿಮಿತ್ತ ಬಂದೆ ಎಂದಿದ್ದಾರೆ.

ನಾನು 45 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇನೆ. ಸುಳ್ಳು ಹೇಳಿ ಅಧಿಕಾರ ಗಿಟ್ಟಿಸಿಕೊಳ್ಳುವ ಜಾಯಮಾನ ನನ್ನಲ್ಲಿಲ್ಲ. ನನ್ನದೇ ಆದ ವ್ಯವಸ್ಥೆಯಲ್ಲಿ ವ್ಯಾಮೋಹವಿಲ್ಲದೆ ಬದುಕಿದವನು ನಾನು. ನನ್ನ ಜೀವನ ತೆರೆದ ಪುಸ್ತಕವಿದ್ದಂತೆ. ನಾನು ಯಾವ ಪಕ್ಷದಲ್ಲಿರುತ್ತೇನೋ ಆ ಪಕ್ಷದಲ್ಲಿ ಶಕ್ತಿಯಾಗಿ ಕೆಲಸ ಮಾಡಿದ್ದೇನೆ. ಬಿಜೆಪಿ ಸೇವೆ ಮಾಡಲು ನನಗೆ ಅವಕಾಶ ಕೊಟ್ಟಿದೆ. ನಾನು ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ. ಈ ಸಲ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷಕ್ಕಾಗಿ ದುಡಿಯುತ್ತೇನೆ. ನಾನು ನನ್ನ ಇತಿಮಿತಿಯೊಳಗೆ ಬದುಕಿದವನು. ಯಾರ ಹಂಗಿನಲ್ಲಿಯೂ ಬದುಕಿಲ್ಲ, ಬದುಕುವುದೂ ಇಲ್ಲ ಎಂದರು.

ನಾನು ಬಂದ ಕೆಲಸ ಯಾವುದೇ ಸಮಸ್ಯೆ ಇಲ್ಲದೇ ಆಗಿದೆ. ಇದಕ್ಕೆ ಬೇಕಾದ ವಿಷಯದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಬಳಿಕ ಸಚಿವ ಪ್ರಲ್ಹಾದ ಜೋಶಿ ಅವರನ್ನು ಪಾರ್ಲಿಮೆಂಟ್​ನಲ್ಲಿ ಭೇಟಿ ಮಾಡಿದೆ. ಆಮೇಲೆ ಧರ್ಮೇಂದ್ರ ಪ್ರಧಾನ್ ಅವರನ್ನ ಸಹ ಭೇಟಿ ಆಗಿದ್ದೇನೆ. ಯಾವುದೇ ವೈಯಕ್ತಿಕ ಕೆಲಸ ಅಲ್ಲಾ, ಬದಲಿಗೆ ಪಕ್ಷದ ಕೆಲಸಕ್ಕೆ ಬಂದಿದ್ದು ಅಷ್ಟೇ. ಬೆಂಗಳೂರಿಗೆ ಹೋಗುತ್ತೇನೆ. ಅಮಿತ್ ಶಾ ಅವರನ್ನು ಭೇಟಿ ಆಗಿಲ್ಲ, ಅವರನ್ನು ಭೇಟಿ ಮಾಡಲು ನಾನು ಡೆಲ್ಲಿಗೆ ಬಂದಿಲ್ಲ ಎಂದರು.

ವಿಜಯೇಂದ್ರ ವಿರುದ್ಧ ದೂರು ಕೊಟ್ಟು ನನಗೆ ಏನಾಗಬೇಕಿದೆ?: ಬಿ ವೈ ವಿಜಯೇಂದ್ರ ಯಾರು, ಮಾಜಿ ಸಿಎಂ ಯಡಿಯೂರಪ್ಪ ಮಗ, ಅವನ ವಿರುದ್ಧ ದೂರು ಕೊಟ್ಟು ನನಗೆ ಏನಾಗಬೇಕಿದೆ ಎಂದು ಸೋಮಣ್ಣ ಮಾಧ್ಯಮ ಪ್ರತಿನಿಧಿಗಳನ್ನು ಕೇಳಿದರು.

ನನಗೆ 72 ವರ್ಷ, ಯಡಿಯೂರಪ್ಪನವರಿಗೆ 82 ವರ್ಷ, ಅವರಿಗೆ ದೇವರು ಆಯುರಾರೋಗ್ಯ ನೀಡಲಿ, ನಾವಿಬ್ಬರೂ ಇನ್ನೂ 20 ವರ್ಷ ಬಾಳಬೇಕು. ವಿಜಯೇಂದ್ರಗೆ 45-46 ವರ್ಷ. ನನಗೆ ಅವನಿಗಿಂತ ದೊಡ್ಡ ವಯಸ್ಸಿನ ಮಗನಿದ್ದಾನೆ. ಆತನ ವಿರುದ್ಧ ದೂರು ನೀಡುವ ಅವಶ್ಯಕತೆ ನನಗಿಲ್ಲ, ಬೇರೆಯವರು ಏನೇನೋ ಸುಳ್ಳು ಸುದ್ದಿ ಸೃಷ್ಟಿ ಮಾಡಬಹುದು, ರಾಜಕೀಯ ಲಾಭಕ್ಕಾಗಿ ನನ್ನ ತೇಜೋವಧೆ ಮಾಡುವುದು ಸರಿಯಲ್ಲ ಎಂದರು.

ಬಿಜೆಪಿಯನ್ನು ಅಧಿಕಾರಕ್ಕೆ ತರುವ ತಾಕತ್ತು ಇದೆಯೇ?: ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ನವರ ಕಿಚನ್‌ ನಲ್ಲಿ ಟಿಕೆಟ್‌ ನೀಡುವ ನಿರ್ಧಾರ ಆಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದು, ಇದಕ್ಕೆ ಬಿ ವೈ ವಿಜಯೇಂದ್ರ ರಾಜಕಾರಣಲ್ಲಿ ಶತ್ರುಗಳು ಹೆಚ್ಚದಾಗ ಬೆಳೆಯಲು ಸಾಧ್ಯ ಎಂದು ತಿರುಗೇಟು ನೀಡಿದ್ದರು.

ಇದೀಗ ರಾಜ್ಯದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರುವ ಎದೆಗಾರಿಕೆ ಯಾರಿಗಾದರೂ ಇದೆಯಾ ಎಂದು ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬದವರ ಮೇಲೆ ಕತ್ತಿ ಮಸೆಯುವವರಿಗೆ ಬಿ.ವೈ ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ. ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡುತಿದ್ದಾರೆ  ಎಂದು ಗುಡುಗಿದ್ದಾರೆ.

ಈಗ ಯಾರು ಬಿಜೆಪಿ ನೋಡುತ್ತಿದ್ದಾರೋ ಅವರು ಭವ್ಯ ಭವನವನ್ನಷ್ಟೇ ನೋಡುತ್ತಿದ್ದಾರೆ. ಆ ಭವನದ ಅಡಿಪಾಯ ಯಾರಿಗೂ ಕಾಣುವುದಿಲ್ಲ. ಬಿಜೆಪಿ ರಾಜ್ಯದಲ್ಲಿ ಇಷ್ಟು ಸುಭದ್ರವಾಗಿ ನಿಂತಿದೆ ಎಂದರೆ ಅದಕ್ಕೆ ಅಡಿಪಾಯ ಹಾಕಿದವರು ಯಡಿಯೂರಪ್ಪ. ಯಡಿಯೂರಪ್ಪನವರು ರಾಜ್ಯದಲ್ಲಿ 30-40 ವರ್ಷಗಳ ಕಾಲ ನಿರಂತರ ಹೋರಾಟ ಮಾಡಿಕೊಂಡು ನಾಡಿನಲ್ಲಿರುವ ರೈತರು, ಬಡವರು, ದೀನದಲಿತರ ಬಗ್ಗೆ ಕಾಳಜಿ ಇಟ್ಟುಕೊಂಡು ಸೈಕಲ್‌ ಜಾಥಾ, ಪಾದಯಾತ್ರೆ ಮಾಡಿದರು. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಯಡಿಯೂರಪ್ಪ ಮಾಡಿದಷ್ಟುಹೋರಾಟವನ್ನು ಮತ್ತೊಬ್ಬ ಯಾವ ರಾಜಕಾರಣಿಯೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಅವರ ಬಗ್ಗೆ ಟೀಕೆ ಮಾಡುವವರು ಹುಷಾರಾಗಿರಿ. ನೇರವಾಗಿ ಹೇಳುತ್ತಿದ್ದೇನೆ. ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಅನೇಕ ನಾಯಕರೊಂದಿಗೆ ಹೋರಾಟ ಮಾಡಿ, ಸಂಘಟನೆ ಮಾಡಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಯಡಿಯೂರಪ್ಪ ಬಗ್ಗೆ ಟೀಕೆ ಮಾಡುವವರನ್ನು ನೋಡುತ್ತಿದ್ದೇವೆ. ಆದರೂ ಯಡಿಯೂರಪ್ಪ ಸುಮ್ಮನಿದ್ದಾರೆ ಎಂದರೆ ವೀಕ್‌ನೆಸ್‌ ಅಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಮೌನವಾಗಿದ್ದಾರೆ ಎಂದರೆ ಉದ್ದೇಶವಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ದಿನ ಕೂಡ ನಾನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುತ್ತೇನೆ ಎಂದು ಅವರು ಹೇಳಿದ್ದರು ಎಂದು ವಿಜಯೇಂದ್ರ ತಮ್ಮ ವಿರುದ್ಧ ರಾಜಕೀಯ ಮಾಡುವವರಿಗೆ ತಿರುಗೇಟು ಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com