ಉರಿಗೌಡ, ನಂಜೇಗೌಡ ಎಂಬ ಕಲ್ಪಿತ ಹೆಸರುಗಳ ಸೃಷ್ಟಿ, ಸಿನಿಮಾ ಮಾಡುವ ದುರುಳ ಐಡಿಯಾ, ಒಕ್ಕಲಿಗರ ಮೇಲೆ ಬೀರುತ್ತಿರುವ ವಕ್ರದೃಷ್ಟಿ!

ಕಲ್ಪಿತಕಥೆ, ಸುಳ್ಳುಗಳಿಂದಲೇ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಕರ್ನಾಟಕವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಬಿಜೆಪಿಯ ವಕ್ರದೃಷ್ಟಿ ಸದ್ಯಕ್ಕೆ ಒಕ್ಕಲಿಗರ ಮೇಲೆ ಬಿದ್ದಿದೆ. ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ ಹಿಡಿಸಲೆಬೇಕೆಂಬ ಹಿಡೆನ್‌ ಅಜೆಂಡಾ ಬಿಜೆಪಿಗೆ ಇರುವುದಂತೂ ಸತ್ಯ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. 
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಸಚಿವ, ಚಿತ್ರ ನಿರ್ಮಾಪಕ ಮುನಿರತ್ನ ತಮ್ಮ ವೃಷಭಾದ್ರಿ ಪ್ರೊಡಕ್ಷನ್ಸ್‌ ಮೂಲಕ ‘ಉರಿಗೌಡ ನಂಜೇಗೌಡ’  ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ.

ಈ ಮೂಲಕ ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಜೆಡಿಎಸ್ ನಾಯಕ ಎಚ್​ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಮುನಿರತ್ನ ಅವರು ಸಿನಿಮಾ ಶೀರ್ಷಿಕೆ ನೋಂದಣಿಗಾಗಿ ಸಲ್ಲಿಸಿರುವ ಅರ್ಜಿಯ ಪ್ರತಿಯನ್ನೂ ಟ್ವೀಟ್ ಜತೆ ಲಗತ್ತಿಸಿರುವ ಕುಮಾರಸ್ವಾಮಿ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಪಿತಕಥೆ, ಸುಳ್ಳುಗಳಿಂದಲೇ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಕರ್ನಾಟಕವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಬಿಜೆಪಿಯ ವಕ್ರದೃಷ್ಟಿ ಸದ್ಯಕ್ಕೆ ಒಕ್ಕಲಿಗರ ಮೇಲೆ ಬಿದ್ದಿದೆ. ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ ಹಿಡಿಸಲೆಬೇಕೆಂಬ ಹಿಡೆನ್‌ ಅಜೆಂಡಾ ಬಿಜೆಪಿಗೆ ಇರುವುದಂತೂ ಸತ್ಯ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಮಹಾ ಷಡ್ಯಂತ್ರದ ಭಾಗವೇ ಉರಿಗೌಡ, ನಂಜೇಗೌಡ ಎಂಬ ಸುಳ್ಳುಪಾತ್ರಗಳ ಸೃಷ್ಟಿ. ಟಿಪ್ಪುವನ್ನು ಕೊಂದವರೆಂದು ಸೃಷ್ಟಿಸಲಾದ ಕಲ್ಪಿತ ಒಕ್ಕಲಿಗ ಹೆಸರುಗಳ ಮೂಲಕ ಒಕ್ಕಲಿಗ ಸಮುದಾಯವನ್ನು ಕಳಂಕದ ದಳ್ಳುರಿಗೆ ತಳ್ಳುವ, ಐತಿಹಾಸಿಕ ನಂಜಿನ ವಿಷವರ್ತುಲಕ್ಕೆ ನೂಕುವ ಹೇಯ ಕೃತ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.

ಹೆದ್ದಾರಿ ಲೋಕಾರ್ಪಣೆಗೆ ಆಗಮಿಸಿದ್ದ ಪ್ರಧಾನಿಯವರ ಸ್ವಾಗತ ಕಮಾನಿಗೆ ಉರಿಗೌಡ-ನಂಜೇಗೌಡ ಕಲ್ಪಿತ ಹೆಸರುಗಳನ್ನು ಇಟ್ಟಿತ್ತು ಬಿಜೆಪಿ ಸರ್ಕಾರ. ಮೊದಲೇ ಇದ್ದ ಪರಮಪೂಜ್ಯ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಹೆಸರನ್ನು ಮರೆಮಾಚಿ ಕಲ್ಪಿತ ಹೆಸರುಗಳ ಕಮಾನು ಕಟ್ಟಿದ್ದೇ ಪರಮದ್ರೋಹ. ಕುಲಕ್ಕೆ, ಕುಲ ಗುರುವಿಗಾದ ಈ ಘೋರ ಅಪಮಾನದಿಂದ ಕುದಿಯುತ್ತಿರುವ ಒಕ್ಕಲಿಗ ಸಮಾಜವನ್ನು ಇನ್ನಷ್ಟು ಹೀನಾಯವಾಗಿ ಕಳಂಕದ ಕೂಪಕ್ಕೆ ತಳ್ಳಲು ಇದೇ ಬಿಜೆಪಿ ಸರ್ಕಾರದ ಸಚಿವರೊಬ್ಬರು ಧೂರ್ತ ಪ್ರಯತ್ನ ನಡೆಸಿದ್ದಾರೆ.

ಮುನಿರತ್ನ ಅವರು ವೃಷಭಾದ್ರಿ ಪ್ರೊಡಕ್ಷನ್ಸ್‌ ಮೂಲಕ ಉರಿಗೌಡ ನಂಜೇಗೌಡ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಮೂಲಕ ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುದಿಯುತ್ತಿರುವ ಒಕ್ಕಲಿಗರ ನೋವಿನ ಮೇಲೆ ಮಾರಣಾಂತಿಕ ಬರೆ ಎಳೆಯುವಂತಿದೆ ಮುನಿರತ್ನರ ಈ ದುರಹಂಕಾರ. ಬಿಜೆಪಿ ಸೃಷ್ಟಿಸಿದ ಕಿರಾತಕ ಸುಳ್ಳನ್ನೇ ಸಿನಿಮಾ ಮಾಡಿ ಒಕ್ಕಲಿಗರನ್ನು ಇತಿಹಾಸದಲ್ಲಿ ಶಾಶ್ವತವಾಗಿ ಖಳನಾಯಕರನ್ನಾಗಿ ಚಿತ್ರಿಸುವುದೇ ಅವರ ದುರುದ್ದೇಶವಾಗಿದೆ. ಈ ದ್ರೋಹವನ್ನು ಒಕ್ಕಲಿಗರು ಸಹಿಸುವ ಪ್ರಶ್ನೆಯೇ ಇಲ್ಲ.

ಚರಿತ್ರೆಯನ್ನು ವಿರೂಪಗೊಳಿಸುವ ನಿರ್ಲಜ್ಜ ರಾಜಕಾರಣಕ್ಕೆ ಮೂಲಕಾರಣರು ಯಾರು? ಇಷ್ಟಕ್ಕೂ, ಈ ಮುನಿರತ್ನಗೂ ಮಂಡ್ಯದ ಒಕ್ಕಲಿಗರಿಗೂ ಸಂಬಂಧವೇನು? ಒಕ್ಕಲಿಗ ಕುಲದಲ್ಲೇ ಹುಟ್ಟಿ ಒಕ್ಕಲು ಸಂಕುಲಕ್ಕೆ ಟಿಪ್ಪು ಕೊಲೆಯ ಕೊಳೆ ಮೆತ್ತಿಸಲು ಹೊರಟಿರುವ ಒಕ್ಕಲು ಕುಲದ ಇಬ್ಬರು ನಿಜವಾದ ಖಳನಾಯಕರನ್ನು ಒಕ್ಕಲಿಗರೆಂದೂ ಕ್ಷಮಿಸರು.

ಮುನಿರತ್ನ ಮಾಡುವ ಸಿನಿಮಾಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಥೆ ಬರೆಯುತ್ತಾರಾ? ಟಿಪ್ಪು ನೆಪದಲ್ಲಿ ಜನ್ಮತೆಳೆದ ಜಾತಿ ವಿರುದ್ಧವೇ ವಿಷ ಕಕ್ಕುತ್ತಿರುವ, ಬಿಜೆಪಿಯನ್ನು ಎತ್ತಿ ಕಟ್ಟುತ್ತಿರುವ ಸಿಟಿ ರವಿ ಅವರು ಉರಿಗೌಡ, ನಂಜೇಗೌಡರೆಂಬ ಕಲ್ಪಿತ ಹೆಸರುಗಳ ನೆಪದಲ್ಲಿ ದಿನವೂ ವಿಷ ಕಕ್ಕುತ್ತಿದ್ದಾರೆ ಎಂದು ಕುಮಾರಸ್ವಾಮಿ ಟ್ವೀಟ್​​ಗಳಲ್ಲಿ ಉಲ್ಲೇಖಿಸಿದ್ದಾರೆ.

ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಎಂದು ಸದಾ ಬಡಬಡಿಸುತ್ತಿದ್ದ ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವತ್ಥನಾರಾಯಣ ಅವರಂತೂ ಈಗ ಉರಿಗೌಡ, ನಂಜೇಗೌಡ ಎಂದು ವಿಷನಂಜು ಉಗಳುತ್ತಿದ್ದಾರೆ. ಅವರು ಈ ಸಿನಿಮಾಕ್ಕೆ ಚಿತ್ರಕಥೆ ಬರೆಯುತ್ತಾರಾಯೇ? ಬರೆದರೂ ಬರೆಯಬಹುದು. ಏಕೆಂದರೆ, ಇವರಿಬ್ಬರೂ ಕುಲದ್ರೋಹಿಗಳಷ್ಟೇ ಅಲ್ಲ, ಒಕ್ಕಲು ಸಂಕುಲದ ವಿನಾಶಕರು.

ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತಿದೆ ಬಿಜೆಪಿ ಸ್ಥಿತಿ. ಪ್ರತೀ ಸೂಕ್ಷ್ಮ ವಿಷಯದಲ್ಲೂ ಮತ ರಾಜಕಾರಣ ಮಾಡುವ ಕಮಲ ಪಕ್ಷಕ್ಕೆ ಕರ್ನಾಟಕವೇ ಪ್ರಯೋಗ ಶಾಲೆ. ಜಾತಿ, ಧರ್ಮಗಳ ನಡುವೆ ಕಿಚ್ಚಿಟ್ಟು, ಸರ್ವಜನಾಂಗದ ತೋಟವಾದ ಕರ್ನಾಟಕಕ್ಕೆ ಕೋಮುಪ್ರಾಷನ ಮಾಡಿಸುತ್ತಿದೆ. ಉರಿಗೌಡ, ನಂಜೇಗೌಡ ಎಂಬ ಕಲ್ಪಿತ ಒಕ್ಕಲಿಗ ಹೆಸರುಗಳ ಸೃಷ್ಟಿ, ಸಿನಿಮಾ ಮಾಡುವ ದುರುಳ ಐಡಿಯಾ, ಒಕ್ಕಲಿಗರ ಮೇಲೆ ಬಿಜೆಪಿ ಬೀರುತ್ತಿರುವ ವಕ್ರದೃಷ್ಟಿ. ಇದೆಲ್ಲವೂ ಒಕ್ಕಲಿಗರನ್ನು ರಾಜಕೀಯವಾಗಿ ಮುಗಿಸಿಬಿಡುವ ಬಿಜೆಪಿಯ ರಕ್ಕಸ ಹಿಡೆನ್ ಅಜೆಂಡಾ ಅಲ್ಲದೆ ಮತ್ತೇನೂ ಅಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com