ಸಮೀಕ್ಷೆಯಲ್ಲಿ ನೆಗೆಟಿವ್ ರಿಪೋರ್ಟ್, ರಾಹುಲ್ ಗಾಂಧಿ ಸಲಹೆಯಂತೆ ಕೋಲಾರದಿಂದ ಹಿಂದೆ ಸರಿದು ವರುಣಾದಲ್ಲಿ ಸಿದ್ದರಾಮಯ್ಯ ಸ್ಪರ್ಧೆ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಸದ್ಯ ಬಹುಚರ್ಚಿತ ವಿಷಯ. ಅವರ ಕ್ಷೇತ್ರ ಆಯ್ಕೆ ಗೊಂದಲ ಮುಂದುವರಿದಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ನವದೆಹಲಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಸದ್ಯ ಬಹುಚರ್ಚಿತ ವಿಷಯ. ಅವರ ಕ್ಷೇತ್ರ ಆಯ್ಕೆ ಗೊಂದಲ ಮುಂದುವರಿದಿದೆ. ಕಳೆದ ಬಾರಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದುಬಂದಿದ್ದ ಸಿದ್ದರಾಮಯ್ಯ ಈ ಬಾರಿ ಅಲ್ಲಿ ಸ್ಪರ್ಧಿಸುತ್ತಿಲ್ಲ. ಚಿನ್ನದ ಗಣಿನಾಡು ಕೋಲಾರಕ್ಕೆ ಹೋಗುತ್ತೇನೆ ಎಂದು ಈ ಹಿಂದೆ ಸಿದ್ದರಾಮಯ್ಯ ಪ್ರಕಟಿಸಿದ್ದರು. ಕ್ಷೇತ್ರದಲ್ಲಿ ಓಡಾಡುತ್ತಿದ್ದರು.

ಆದರೆ ಇತ್ತೀಚೆಗೆ ಬಂದಿರುವ ಹೊಸ ಮಾಹಿತಿ ಕೋಲಾರ ಕ್ಷೇತ್ರದ ಸ್ಪರ್ಧಾಕಣದಿಂದ ಸಿದ್ದರಾಮಯ್ಯ ಹಿಂದೆ ಸರಿದು ತಮ್ಮ ಆರಂಭದ ವರುಣಾ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ ಎಂಬುದು. ಕೋಲಾರ ಕ್ಷೇತ್ರ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ರಾಹುಲ್ ಗಾಂಧಿ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ಮಾರ್ಚ್ 17 ರಂದು ದೆಹಲಿಯಲ್ಲಿ ನಡೆದ ಸಿಇಸಿ ಸಭೆಯಲ್ಲಿ ರಾಹುಲ್​ ಗಾಂಧಿ ಅವರು ಸಿದ್ದರಾಮಯ್ಯರಿಗೆ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಹಾಗೂ ಕೋಲಾರದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದ್ದಾರೆ ಎಂಬ ಬಗ್ಗೆ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಸಿದ್ದರಾಮಯ್ಯ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದ ರಾಹುಲ್: ನಿನ್ನೆ ಕೇಂದ್ರ ಚುನಾವಣಾ ಸಮಿತಿ ಸಭೆ ಬಳಿಕ ರಾಹುಲ್ ಗಾಂಧಿ ಸಿದ್ದರಾಮಯ್ಯರ ಜೊತೆ ಪ್ರಿಯಾಂಕಾ ಗಾಂಧಿ ಚೇಂಬರ್ ನಲ್ಲಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೋಲಾರ ವಿಷಯ ಹಾಗೂ ಇತರ ಟಿಕೆಟ್ ಬಗ್ಗೆ ಮಾತುಕತೆ ನಡೆದಿದೆ. ಕೋಲಾರ ಕ್ಷೇತ್ರದ ವರದಿಗಳು ನಿಮಗೆ ಸೂಕ್ತ ಎನಿಸುತ್ತಿಲ್ಲ, ಇನ್ನೊಮ್ಮೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದಾರೆ.

ಸಿದ್ದರಾಮಯ್ಯ ನಿವಾಸದಲ್ಲಿಂದು ಕೋಲಾರ ‘ಕೈ’ ನಾಯಕರ ಸಭೆ: ರಾಹುಲ್ ಗಾಂಧಿ ಸಲಹೆ ಬೆನ್ನಲ್ಲೆ ಸಿದ್ದರಾಮಯ್ಯ ನಿವಾಸದಲ್ಲಿಂದು ಕೋಲಾರ ಕಾಂಗ್ರೆಸ್ ನಾಯಕರ ಸಭೆ ನಡೆಯಲಿದೆ. ಇಂದು ಸಿದ್ದರಾಮಯ್ಯ ಕೋಲಾರಕ್ಕೆ ತೆರಳಲಿದ್ದು ಅದಕ್ಕೆ ಮುನ್ನ ಮಧ್ಯಾಹ್ನ 1.30ಕ್ಕೆ ಬೆಂಗಳೂರಿನ ಸಿದ್ದರಾಮಯ್ಯ ನಿವಾಸದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಚುನಾವಣಾ ತಯಾರಿ ಕುರಿತು ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ. ಕೋಲಾರ ಕಾರ್ಯಕ್ರಮದ ಮಾಹಿತಿ ಪಡೆಯಲಿದ್ದಾರೆ. 

ಕಾಂಗ್ರೆಸ್ ಪಕ್ಷದ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯ ಕುರಿತು ಚರ್ಚಿಸಲು ನಿನ್ನೆ ದೆಹಲಿಯಲ್ಲಿ ಮೀಟಿಂಗ್ ನಡೆದಿತ್ತು. ಅದರಲ್ಲಿ ಸಿದ್ದರಾಮಯ್ಯ ಸ್ಪರ್ಧೆಯ ವಿಚಾರ ಚರ್ಚೆಗೆ ಬಂದಿದೆ. 

ಈ ಬಗ್ಗೆ ನಿನ್ನೆ ರಾತ್ರಿ ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಹೈಕಮಾಂಡ್​ ಹೇಳಿದ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ, ನನ್ನ ಹೆಸರು ಇನ್ನೂ ಅಂತಿಮವಾಗಿಲ್ಲ ಎಂದಿದ್ದಾರೆ. ನಂಜನಗೂಡು ಕ್ಷೇತ್ರದಲ್ಲಿ ಧ್ರುವನಾರಾಯಣ ಪುತ್ರ ಸ್ಪರ್ಧಿಸುತ್ತಾರೆ. ನಾನು ಆರ್​​.ಧ್ರುವನಾರಾಯಣ ಪುತ್ರ ದರ್ಶನ್​​ ಪರ ಇದ್ದೇನೆ. ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧಿಸಲ್ಲವೆಂದು ಮಹದೇವಪ್ಪ ಹೇಳಿದ್ದಾರೆ. ಮಹದೇವಪ್ಪ ಸ್ಪರ್ಧಿಸಲ್ಲ ಎಂದ ಮೇಲೆ ದರ್ಶನ್​ಗೆ ಟಿಕೆಟ್​ ಕೊಡ್ತೀವಿ ಎಂದರು.

ಯುಗಾದಿ ಹಬ್ಬದಂದು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಮಾರ್ಚ್ 22ರ ಬೆಳಗ್ಗೆ ಅಂದ್ರೆ ಯುಗಾದಿ ಹಬ್ಬದಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com