
ರಾಹುಲ್ ಗಾಂಧಿ
ಬೆಳಗಾವಿ: 2023ರ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಳೆ ಬೆಳಗಾವಿಗೆ ಆಗಮಿಸಲಿದ್ದು, ಯುವ ಕ್ರಾಂತಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ನಗರದ ಸಿಪಿಇಡಿ ಮೈದಾನದಲ್ಲಿ ಭವ್ಯ ವೇದಿಕೆ ಸಿದ್ಧಪಡಿಸಲಾಗಿದೆ. 80 ಸಾವಿರಕ್ಕೂ ಅಧಿಕ ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ.
ರಾಹುಲ್ ಗಾಂಧಿ ಅವರಿಗೆ ಸ್ವಾಗತ ಕೋರಿ ನಗರದ ಪ್ರಮುಖ ರಸ್ತೆಗಳಲ್ಲಿ ಹಲವು ನಾಯಕರು ಕಟೌಟ್ ಹಾಕಿದ್ದು, ರಸ್ತೆ ಬದಿ ಕಾಂಗ್ರೆಸ್ ಧ್ವಜಗಳನ್ನು ಕಟ್ಟಿದ್ದಾರೆ. ಸಮಾವೇಶ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಸಿಪಿಇಡಿ ಮೈದಾನಕ್ಕೆ ತೆರಳಿ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.
ಬೆಳಗಾವಿಯಲ್ಲಿ ನಾಳೆ ಶ್ರೀ @RahulGandhi ಅವರ ನೇತೃತ್ವದಲ್ಲಿ ಯುವ ಕ್ರಾಂತಿ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮ ನಡೆಯಲಿರುವ CPED ಮೈದಾನಕ್ಕೆ ಇಂದು ರಾಜ್ಯ ನಾಯಕರೊಡನೆ ಭೇಟಿ ನೀಡಿ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದೆ. pic.twitter.com/33qI9QkREb
— DK Shivakumar (@DKShivakumar) March 19, 2023
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಮಾವೇಶದಲ್ಲಿ ಪಕ್ಷದ ಹಿರಿಯ ನಾಯಕರು ರಾಜ್ಯದ ಯುವಕರ ಬದುಕು ಉಜ್ವಲಗೊಳಿಸುವಂತಹ ಗ್ಯಾರಂಟಿ ಕಾರ್ಡ್ ಅನಾವರಣಗೊಳಿಸಲಿದ್ದಾರೆ ಎಂದು ತಿಳಿಸಿದರು.