ಕಾಂಗ್ರೆಸ್ ಗ್ಯಾರಂಟಿ ನಂಬರ್ 4: ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ
ಬೆಳಗಾವಿ: ವಿಧಾನಸಭೆ ಚುನಾವಣೆ ಗೆಲ್ಲಲು ಪ್ರತಿಪಕ್ಷ ಕಾಂಗ್ರೆಸ್ ರಾಜ್ಯದ ಜನತೆಗೆ ಹಲವು ಗ್ಯಾರಂಟಿಗಳನ್ನು ನೀಡುತ್ತಿದ್ದು, ಸೋಮವಾರ ಯುವ ನಿಧಿ ತನ್ನ 4ನೇ ಗ್ಯಾರಂಟಿಯನ್ನು ಘೋಷಿಸಿದೆ. ಈ ಮೂಲಕ ಚುನಾವಣೆಯಲ್ಲಿ ಯುವಕರ ಮತ ಸೆಳೆಯಲು ಮುಂದಾಗಿದೆ.
ಇಂದು ಬೆಳಗಾವಿಯಲ್ಲಿ ನಡೆದ ಯುವ ಕ್ರಾತಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನ 'ಯುವನಿಧಿ' ಎಂಬ 4ನೇ ಗ್ಯಾರಂಟಿಯನ್ನು ಬಿಡುಗಡೆ ಮಾಡಿದ್ದಾರೆ.
ಕಾಂಗ್ರೆಸ್ ಯುವಕರನ್ನು ಗಮನದಲ್ಲಿಟ್ಟುಕೊಂಡು 'ಯುವನಿಧಿ' ಯೋಜನೆ ಘೋಷಿಸಿದ್ದು, ಈ ಯೋಜನೆ ಅಡಿ ಪ್ರತಿ ತಿಂಗಳು ನಿರುದ್ಯೋಗಿ ಪದವೀಧರರಿಗೆ ಮೂರು ಸಾವಿರ ರೂಪಾಯಿ ಹಾಗೂ ನಿರುದ್ಯೋಗಿ ಡಿಪ್ಲೊಮಾ ಪದವೀಧರರಿಗೆ 1500 ರೂ. ಭತ್ಯೆ ನೀಡುವುದಾಗಿ ಭರವಸೆ ನೀಡಿದೆ.
ಈ ಹಿಂದೆ ಗೃಹ ಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ, 200 ಯೂನಿಟ್ ಉಚಿತ ವಿದ್ಯುತ್ ಮತ್ತು ಅನ್ನಭಾಗ್ಯ ಯೋಜನೆಯಡಿ ಬಡಕುಟುಂಬದ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು.
ಈ ಯೋಜನೆ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, 2 ವರ್ಷಗಳವರೆಗೆ ಪ್ರತಿ ತಿಂಗಳು ನಿರುದ್ಯೋಗಿ ಪದವೀಧರರಿಗೆ 3000 ಆರ್ಥಿಕ ನೆರವು ಹಾಗೂ ನಿರುದ್ಯೋಗಿ ಡಿಪ್ಲೊಮಾ ಪಧವೀಧರರಿಗೆ 1500 ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯನ್ನು ಘೋಷಿಸುತ್ತಿದ್ದೇವೆ. ಯುವ ಶಕ್ತಿಗೆ ಶಕ್ತಿ ತುಂಬಲು ಬದ್ಧವಾಗಿದ್ದೇವೆ ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ