ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಚಟ್ಟಕಟ್ಟಿ ಸ್ಮಶಾನ ಕೇಕೆ ಹಾಕುತ್ತಿದೆ: ಕುಮಾರಸ್ವಾಮಿ ಕಿಡಿ

ಹೊಸ ಮೀಸಲಾತಿ ಘೋಷಿಸಿದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು, ಸಾಮಾಜಿಕ ನ್ಯಾಯದಿಂದಲೇ ಇಡೀ ದೇಶಕ್ಕೆ ಮೇಲ್ಪಂಕ್ತಿಯಾಗಿದ್ದ...
ಕುಮಾರಸ್ವಾಮಿ
ಕುಮಾರಸ್ವಾಮಿ
Updated on

ಬೆಂಗಳೂರು: ಹೊಸ ಮೀಸಲಾತಿ ಘೋಷಿಸಿದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು, ಸಾಮಾಜಿಕ ನ್ಯಾಯದಿಂದಲೇ ಇಡೀ ದೇಶಕ್ಕೆ ಮೇಲ್ಪಂಕ್ತಿಯಾಗಿದ್ದ ಕರ್ನಾಟಕವನ್ನು ಮೀಸಲು ಮೂಲಕವೇ ವಿಭಜಿಸಿ ಮತಫಸಲು ತೆಗೆಯುವ ದುರಾಲೋಚನೆಯೊಂದಿಗೆ ಬಿಜೆಪಿ, ಸಾಮಾಜಿಕ ನ್ಯಾಯಕ್ಕೆ ಚಟ್ಟ ಕಟ್ಟಿ ಸ್ಮಶಾಣ ಕೇಕೆ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಸಿಎಂ, ರಾಜ್ಯ ಬಿಜೆಪಿ ಸರ್ಕಾರ ಪ್ರತಿಯೊಂದರಲ್ಲಿಯೂ ರಾಜಕೀಯ ಮಾಡುತ್ತಿದೆ. ಪ್ರತಿಯೊಂದರಲ್ಲಿಯೂ ಚುನಾವಣೆಯನ್ನೇ ಕಾಣುತ್ತದೆ! ಸಂಪುಟ ಸಭೆಯ ಮೀಸಲಾತಿ ಹಕೀಕತ್ತೇ ಒಂದು ಖತರ್ನಾಕ್ ನಾಟಕ. ಕೊಡಲು ಕೈ ಬಾರದು, ಕೊಡಲೂ ಆಗದು. ಹಣೆಗೆ ಮಣೆಯಿಂದ ಬಾರಿಸಿಕೊಳ್ಳುವುದೂ ಎಂದರೆ ಇದೆ. ಪಾಪದ ಪಾಶ ಬಿಜೆಪಿ ಬೆನ್ನುಬಿದ್ದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಚುನಾವಣೆ ಎಂಬ ಚದುರಂಗದಾಟದಲ್ಲಿ ಬಿಜೆಪಿ ಬಿಸಿಲುಗುದರೆಯ ಮೇಲೆ ಸವಾರಿ ಮಾಡುತ್ತಿದೆ. ಅಷ್ಟೇ ಅಲ್ಲ; ಕ್ರೂರ ವ್ಯಾಘ್ರನ ಮೇಲೂ ಕುಳಿತು ಕುರುಡಾಗಿ ಸರ್ಕಸ್‌ ಮಾಡುತ್ತಿದೆ. ಸಾಗು, ಇಲ್ಲವೇ ಹೋಗು ಎನ್ನುವ ದುಸ್ಥಿತಿಯಲ್ಲಿ ತೋಯ್ದಾಡುತ್ತಿದೆ ಎಂದು ಕಿಡಿಕಾರಿದ್ದಾರೆ. 

ಮತದ ಹೆಸರಿನಲ್ಲಿ ಮತಯುದ್ಧ ಗೆಲ್ಲಬಹುದೆಂದು ಚಟಕ್ಕೆ ಬಿದ್ದಿರುವ ಬಿಜೆಪಿ ಈಗ ಸರ್ವಜನರ ಕಲ್ಯಾಣದ ಪ್ರತೀಕವಾದ ಕರ್ನಾಟಕದಲ್ಲಿ ಮೀಸಲು ಕಳ್ಳಾಟ ಆಡಿದೆ. ಗೆಲ್ಲಲೇಬೇಕು, ಗೆಲ್ಲದಿದ್ದರೆ ಇನ್ನೊಬ್ಬರ ತಟ್ಟೆಗೆ ಕೈ ಹಾಕು, ಆಗದಿದ್ದರೆ ಕಸಿದುಕೋ.. ಇದೇ ಕಮಲಪಕ್ಷದ ಕುಟಿಲತೆ ಎಂದು ಟೀಕಿಸಿದ್ದಾರೆ.

ಮೂರೂವರೆ ವರ್ಷದಿಂದ ಗಾಳಿಯಲ್ಲಿ ಗಾಳೀಪಟ ಹಾರಿಸಿಕೊಂಡೇ ಕಾಗಕ್ಕಗುಬ್ಬಕ್ಕನ ಕಥೆ ಹೇಳಿದ್ದ ಬಿಜೆಪಿ ಚುನಾವಣೆ ಗಿಮಿಕ್ಕಿನ ಸಂಪುಟ ಸಭೆಯಲ್ಲಿ ಮೀಸಲು ತುಪ್ಪವನ್ನು ಜನರ ಹಣೆಗೆ ಸವರುವ ಬೂಟಾಟಿಕೆ ನಡೆಸಿದೆ. ಕಳ್ಳಬೆಕ್ಕು ಕಣ್ಮುಚ್ಚಿ ಹಾಲು ಕುಡಿಯಲು ಹೊರಟಿದೆ. ಒಬ್ಬರ ಅನ್ನ ಕಸಿದುಕೊಂಡು ಇನ್ನೊಬ್ಬರ ಹೊಟ್ಟೆ ತುಂಬಿಸಬಹುದು ಎನ್ನುವ ಬಿಜೆಪಿಗರ ರಕ್ಕಸಚಾಳಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಆಶಯಕ್ಕೆ ಶಾಶ್ವತ ಸಮಾಧಿ ಕಟ್ಟುವಂತಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲದವರ ನಡವಳಿಕೆ ಇದು ಎಂದು ಟ್ವೀಟ್‌ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com