ಕಾಂಗ್ರೆಸ್-ಜೆಡಿಎಸ್ ಭ್ರಷ್ಟಾಚಾರ ಎಂಬ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ಅಮಿತ್ ಶಾ
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಭ್ರಷ್ಟಚಾರದ ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದು ಗೃಹ ಸಚಿವ ಅಮಿತ್ ಶಾ ಭಾನುವಾರ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ
Published: 27th March 2023 09:29 AM | Last Updated: 27th March 2023 02:34 PM | A+A A-

ಅಮಿತ್ ಶಾ
ರಾಯಚೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಭ್ರಷ್ಟಚಾರದ ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದು ಗೃಹ ಸಚಿವ ಅಮಿತ್ ಶಾ ಭಾನುವಾರ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
ರಾಯಚೂರು ಜಿಲ್ಲೆಯ ಗಬ್ಬೂರು ಗ್ರಾಮದಲ್ಲಿ 4,500 ಕೋಟಿ ರೂ.ಗೂ ಅಧಿಕ ಮೊತ್ತದ ಹಲವು ಕಲ್ಯಾಣ ಯೋಜನೆಗಳಿಗೆ ಚಾಲನೆ ನೀಡಿ ಉದ್ಘಾಟಿಸಿದ ನಂತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಭ್ರಷ್ಟಾಚಾರದ ಮುಖಗಳಾಗಿದ್ದು, ಕರ್ನಾಟಕದ ಮತದಾರರು ಅವರಿಗೆ ಅಧಿಕಾರ ನೀಡಬಾರದು ಎಂದು ಶಾ ಹೇಳಿದರು.
2018 ರ ವಿಧಾನಸಭಾ ಚುನಾವಣೆಯನ್ನು ನೆನಪಿಸಿಕೊಂಡ ಅಮಿತ್ ಶಾ, ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ರಚಿಸಲು ಕೈಜೋಡಿಸಿದ್ದರಿಂದ ಬಿಜೆಪಿ 104 ಸ್ಥಾನಗಳನ್ನು ಗೆದ್ದರೂ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಯಿತು ಎಂದು ಹೇಳಿದರು. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸಮ್ಮಿಶ್ರ ಸರ್ಕಾರ ರಚಿಸಿದ್ದು, ಹಣ ಸಂಗ್ರಹಕ್ಕಾಗಿ ಎಂದು ಲೇವಡಿ ಮಾಡಿದರು.
ಹೈಕಮಾಂಡ್‌ಗೆ ಹಣ ವರ್ಗಾವಣೆ ಮಾಡಲು ಕರ್ನಾಟಕವನ್ನು ಕಾಂಗ್ರೆಸ್ ತನ್ನ ಎಟಿಎಂನಂತೆ ನಡೆಸಿಕೊಂಡಿದೆ. ಯಾರನ್ನು ಆಯ್ಕೆ ಮಾಡಬೇಕೆಂದು ನೀವು (ಮತದಾರರು) ನಿರ್ಧರಿಸಬೇಕು. ರಾಜ್ಯದ ಹಿತಕ್ಕಾಗಿ ಹೋರಾಡುವ ಪಕ್ಷ ವೇ ಅಥವಾ ರಾಜ್ಯವನ್ನು ತನ್ನ ಎಟಿಎಂ ಆಗಿ ಬಳಸುವ ಪಕ್ಷ ಬೇಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನಿಂದ ರಾಜ್ಯವನ್ನು ಅಭಿವೃದ್ಧಿ ಮಾಡಲು ಸಾಧ್ಯವೇ? ಎಂದು ಜನರನ್ನು ಪ್ರಶ್ನಿಸಿದ ಅವರು, ಎಲ್ಲರಿಗೂ ನ್ಯಾಯ ಕಲ್ಪಿಸುವ ಕೆಲಸವನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಬಿಜೆಪಿಯನ್ನು ಬಹುಮತದಿಂದ ಆಯ್ಕೆ ಮಾಡಿ ಎಂದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಶಾ, ದೇಶವು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಹೆಸರು ಗಳಿಸಿದೆ ಮತ್ತು ಆರ್ಥಿಕತೆ ಸುಧಾರಿಸಿದೆ ಎಂದು ಹೇಳಿದರು. ಕಾಂಗ್ರೆಸ್ ಆಡಳಿತದಲ್ಲಿ ಭಾರತಕ್ಕೆ ತೊಂದರೆ ನೀಡುತ್ತಿದ್ದ ಪಾಕಿಸ್ತಾನ ಈಗ ಶಕ್ತಿಹೀನವಾಗಿದೆ ಎಂದರು. ಇತರ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಕೋವಿಡ್ -19 ಸಾವುನೋವುಗಳು ತುಂಬಾ ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ 'ಪಂಜಿನ ಮೆರವಣಿಗೆ'
ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಕಷ್ಟು ಅನುದಾನ ನೀಡಿದೆ. ಸರ್ಕಾರವು ಹಲವು ಜಾತಿಗಳಿಗೆ ಮೀಸಲಾತಿಯನ್ನು ಒದಗಿಸಿದೆ ಮತ್ತು ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿಯನ್ನು ಹೆಚ್ಚಿಸಿದೆ ಎಂದು ಅಮಿತ್ ಶಾ ಹೇಳಿದರು.
ರಾಯಚೂರಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ಕುರಿತು ಮಾತನಾಡಿದ ಗೃಹ ಸಚಿವರು, ''ರಾಯಚೂರಿಗೆ ಐಐಐಟಿ ಮಂಜೂರಾಗಿದ್ದು, ಈಗ ವೈದ್ಯಕೀಯ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಇಂದು ರಾಯಚೂರು ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಇದನ್ನೂ ಓದಿ: 'ಜೇನು ನೊಣಗಳಿಂದ ಕಚ್ಚಿಸಿಕೊಂಡು ಜೇನು ಸಿಹಿ ಹಂಚುವ ಕೆಲಸ ಮಾಡಿದ್ದೇನೆ': ಬಸವರಾಜ ಬೊಮ್ಮಾಯಿ
ಹೈದರಾಬಾದ್ ಕರ್ನಾಟಕ ಪ್ರದೇಶದ ಹೆಸರನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಿದ್ದಾರೆ. ಇದನ್ನು ಕಲ್ಯಾಣ ರಾಜ್ಯವನ್ನಾಗಿ ಪರಿವರ್ತಿಸಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಅನುದಾನ ಹೆಚ್ಚಿಸಿದರು. ಈಗ ಸಿಎಂ ಬೊಮ್ಮಾಯಿ ಅವರು 2023-24ನೇ ಸಾಲಿಗೆ ಅನುದಾನವನ್ನು 5 ಸಾವಿರ ಕೋಟಿ ರೂ.ಗೆ ಹೆಚ್ಚಿಸಿದ್ದಾರೆ ಎಂದು ಹೇಳಿದರು.