ಬಜರಂಗದಳ ಒಂದು ಮತೀಯ ಸಂಘಟನೆ ಎಂದು ಬಿಜೆಪಿಯೇ ಗುರುತಿಸಿದೆ: ಜೈರಾಮ್ ರಮೇಶ್
ಬೆಳಗಾವಿ: ‘ಗೋವಾದಲ್ಲಿ ಶ್ರೀರಾಮಸೇನೆಯನ್ನು ನಿಷೇಧಿಸಿದ ಬಿಜೆಪಿಗೆ ಬಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್ ನಿರ್ಧಾರದ ಬಗ್ಗೆ ಮಾತನಾಡುವ ಹಕ್ಕಿಲ್ಲ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಶನಿವಾರ ಹೇಳಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಮೇಶ್, ‘ಬಜರಂಗದಳ ಮತ್ತು ಬಜರಂಗ ಬಲಿ ಬೇರೆ ಬೇರೆ. ನಾವೂ ಬಜರಂಗ ಬಲಿಯನ್ನು ಆರಾಧಿಸುತ್ತೇವೆ. ಆದರೆ ಬಿಜೆಪಿಯಿಂದಲೇ ಒಂದು ಮತೀಯ ಸಂಘಟನೆ ಎಂದು ಗುರುತಿಸಲ್ಪಟ್ಟ ಬಜರಂಗದಳವನ್ನು ನಿಷೇಧಿಸುವುದಾಗಿ ಘೋಷಿಸಲಾಗಿದೆ. ನರೇಂದ್ರ ಮೋದಿ ಪ್ರಧಾನಿಯಾಗಿದ್ದಾಗಲೇ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಶ್ರೀರಾಮ ಸೇನೆಯನ್ನು ಗೋವಾದಲ್ಲಿ ನಿಷೇಧಿಸಿದ್ದರು. ಆಗ ಸಂಪೂರ್ಣ ಮೌನ ವಹಿಸಿದ್ದ ಮೋದಿ ಈಗ ಬಜರಂಗದಳದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದಾರೆ ಎಂದರು.
“ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ನಿಜವಾದ ಅರ್ಥವೆಂದರೆ ಒಬ್ಬರು ದೆಹಲಿಯಲ್ಲಿ ಪ್ರಧಾನಿಯಾಗಿ ಆಡಳಿತ ನಡೆಸುತ್ತಾರೆ ಮತ್ತು ಇನ್ನೊಬ್ಬರು ಕರ್ನಾಟಕದಲ್ಲಿ ಅವರ ಕೈಗೊಂಬೆಯಾಗಿ ಆಡಳಿತ ನಡೆಸುತ್ತಾರೆ. ಇದು ಡಬಲ್-ಇಂಜಿನ್ ಅಲ್ಲ, 'ಟ್ರಬಲ್-ಇಂಜಿನ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಇದು ವಿಧಾನಸಭೆಗೆ ನಡೆಯುವ ಚುನಾವಣೆ. ಪ್ರಧಾನಿಗಾಗಿ ನಡೆಯುತ್ತಿರುವ ಚುನಾವಣೆ ಅಲ್ಲ. ಆದರೆ ವಿಪರ್ಯಾಸವೆಂದರೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವರು ಕರ್ನಾಟಕದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದರು.
40 ಪರ್ಸೆಂಟ್ ಕಮಿಷನ್ ಸರ್ಕಾರದಿಂದ ಜನ ಬೇಸತ್ತಿದ್ದಾರೆ ಮತ್ತು ಈ ‘ಲೂಟಿ ಸರ್ಕಾರ’ವನ್ನು ತಿರಸ್ಕರಿಸಲು ಮತ್ತು ಕಾಂಗ್ರೆಸ್ ಗೆ ಪೂರ್ಣ ಬಹುಮತ ನೀಡಲು ನಿರ್ಧರಿಸಿದ್ದಾರೆ,” ಎಂದು ರಮೇಶ್ ಪ್ರತಿಪಾದಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ