ಸಿದ್ದರಾಮಯ್ಯ ಜತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಮುಂದಿನ ಸಿಎಂ ಬಗ್ಗೆ ಪಕ್ಷ ನಿರ್ಧರಿಸಲಿದೆ: ಡಿಕೆಶಿ
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದ ಒಂದು ದಿನದ ನಂತರ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಭಾನುವಾರ ತಾವೂ ಮುಖ್ಯಮಂತ್ರಿ ರೇಸ್‌ನಲ್ಲಿರುವ ಸುಳಿವು ನೀಡಿದ್ದಾರೆ.
Published: 14th May 2023 04:37 PM | Last Updated: 14th May 2023 04:37 PM | A+A A-

ಡಿ ಕೆ ಶಿವಕುಮಾರ್
ತುಮಕೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದ ಒಂದು ದಿನದ ನಂತರ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಭಾನುವಾರ ತಾವೂ ಮುಖ್ಯಮಂತ್ರಿ ರೇಸ್‌ನಲ್ಲಿರುವ ಸುಳಿವು ನೀಡಿದ್ದಾರೆ.
ಇಂದು ತುಮಕೂರಿನ ನೊಣವಿನಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಹೈಕಮಾಂಡ್ ಮತ್ತು ಶಾಸಕಾಂಗ ಪಕ್ಷ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು?: ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಮೂವರು ವೀಕ್ಷಕರನ್ನು ನೇಮಿಸಿದ ಕಾಂಗ್ರೆಸ್
ನನ್ನ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ನಾನು ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದೇನೆ ಮತ್ತು ತನಗಾಗಿ ಏನನ್ನೂ ಮಾಡಿಲ್ಲ. ಪಕ್ಷಕ್ಕಾಗಿ ದುಡಿದಿದ್ದೇನೆ ಎಂದಿದ್ದಾರೆ.
ಪ್ರಶ್ನೆಯೊಂದಕ್ಕೆ ಜನ ಮೆಚ್ಚುವವರ ಬದಲು ದುಡಿದವರಿಗೂ ಆದ್ಯತೆ ನೀಡಬೇಕು ಎಂದ ಶಿವಕುಮಾರ್, 2019ರಲ್ಲಿ ಪಕ್ಷದ ಸೋಲಿನ ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದಾಗ ಆಗಿನ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನನ್ನ ಮೇಲೆ ನಂಬಿಕೆ ಇಟ್ಟು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರು ಎಂದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗ, ಸೋನಿಯಾ ಗಾಂಧಿ ಅವರು ಜೈಲಿಗೆ ಆಗಮಿಸಿ ನನಗೆ ಬೆಂಬಲ ಸೂಚಿಸಿದರು ಎಂದು ಡಿಕೆಶಿ ನೆನಪಿಸಿಕೊಂಡಿದ್ದಾರೆ.
ನಾನು ನನಗಾಗಿ ಯಾವುದೇ ತಪ್ಪು ಮಾಡಿಲ್ಲ. ಏನು ಮಾಡಿದರೂ ಪಕ್ಷಕ್ಕಾಗಿಯೇ ಮಾಡಿದ್ದೇನೆ ಮತ್ತು ಪಕ್ಷಕ್ಕಾಗಿಯೇ ಎಲ್ಲಾ ಕಷ್ಟಗಳನ್ನು ಎದುರಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷರು ಪ್ರತಿಪಾದಿಸಿದ್ದಾರೆ.