ಬ್ಯೂಟಿ ಆಫ್ ಡೆಮಾಕ್ರಸಿ! ಸ್ಪೀಕರ್ ಕಚೇರಿಯಲ್ಲಿ ಕನ್ನಡ ಗೊತ್ತಿಲ್ಲದವರ ಪ್ರಮಾಣ; ಹಿಂದುತ್ವ, ಡಿಕೆಶಿ, ಎಚ್ ಡಿಡಿ ಹೆಸರಲ್ಲಿ ಪ್ರತಿಜ್ಞಾ ವಿಧಿ

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬಂದ ಶಾಸಕರಿಗೆ ನಿನ್ನೆ ನಡೆದ ಅಧಿವೇಶನದಲ್ಲಿ ಪ್ರಮಾಣ ವಚನ ಬೋಧಿಸಲಾಯಿತು. ಈ ವೇಳೆ ಹಲವು ಶಾಸಕರು ಅರ್ಧಂಬರ್ಧ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಕರ್ನಾಟಕ ವಿಧಾನಸಭೆ
ಕರ್ನಾಟಕ ವಿಧಾನಸಭೆ

ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬಂದ ಶಾಸಕರಿಗೆ ನಿನ್ನೆ ನಡೆದ ಅಧಿವೇಶನದಲ್ಲಿ ಪ್ರಮಾಣ ವಚನ ಬೋಧಿಸಲಾಯಿತು. ಈ ವೇಳೆ ಹಲವು ಶಾಸಕರು ಅರ್ಧಂಬರ್ಧ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಮೂರು ದಿನಗಳ ವಿಧಾನಮಂಡಲದ ಅಧಿವೇಶನದ ಮೊದಲ ದಿನವಾದ ಸೋಮವಾರ 182 ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಅವರಲ್ಲಿ ಕೆಲವರು ಹಿಂದುತ್ವ, ಗೋಮಾತೆ, ಅವರ ದೇವತೆಗಳು ಮತ್ತು ರಾಜಕೀಯ ಗುರುಗಳ ಹೆಸರಿನಲ್ಲಿ ಹಾಗೆ ಮಾಡಿದರೆ, ಇನ್ನೂ ಅನೇಕರು ಸಂವಿಧಾನದ ಮೇಲೆ ಪ್ರಮಾಣ ಮಾಡಿದರು.

ಮೇ 20 ರಂದು ಜಮೀರ್ ಅಹ್ಮದ್ ಖಾನ್​​ ಸಚಿವರಾಗಿ ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ಸಾಕಷ್ಟು ವಿರೋಧ, ಟೀಕೆಗಳು ವ್ಯಕ್ತವಾಗಿತ್ತು.ಇದೀಗ ಮತ್ತೆ ಇದೇ ವಿಚಾರವಾಗಿ ವಿವಾದವಾಗಬಾರದು ಎಂದು ಜಮೀರ್ ಅವರು ಸ್ಪೀಕರ್ ಕಚೇರಿಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಬೆಳಗ್ಗೆ ವಿಧಾನಸಭೆಯಲ್ಲಿ ಇದೆ ಕಾರಣಕ್ಕೆ ಗೈರಾಗಿದ್ದರು ಎನ್ನುವ ಮಾತು ಕೇಳಿ ಬಂದಿದೆ.

ಕಳೆದ 2 ದಿನಗಳ ಹಿಂದೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅಂತಿಮವಾಗಿ ಪ್ರಮಾಣ ವಚನ ಸ್ವೀಕರಿಸಿದ ಜಮೀರ್ ಅಹ್ಮದ್ ಖಾನ್, ಅಲ್ಲಾಹ್ ಮತ್ತು ತಮ್ಮ ತಾಯಿಯ ಹೆಸರಿನಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸಚಿವ ಜಮೀರ್ ನಡೆಗೆ ಸಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಇನ್ನೂ ಹುಕ್ಕೇರಿ ಬಿಜೆಪಿ ಶಾಸಕ ನಿಖಿಲ್ ಉಮೇಶ ಕತ್ತಿ ಮತ್ತು ಬೀದರ್ ಕಾಂಗ್ರೆಸ್ ಶಾಸಕ ರಹೀಮ್ ಖಾನ್ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕುತೂಹಲದ ಸಂಗತಿಯೆಂದರೆ, ಮರಾಠಾ ಮೂಲದ ಖಾನಾಪುರದ ಬಿಜೆಪಿ ಶಾಸಕ ವಿಠಲ್ ಹಲಗೇಕರ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು, ಸ್ವಲ್ಪ ಕಷ್ಟಪಟ್ಟು ಓದಿದರು ಆದರೆ ಅಂತಿಮವಾಗಿ ಸದಸ್ಯರ ಮೆಚ್ಚುಗೆಗೆ ಪಾತ್ರರಾದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಂದುತ್ವ ಹಾಗೂ ಗೋ ಮಾತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.ಚನ್ನಗಿರಿಯ ಮೊದಲ ಬಾರಿಗೆ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಅವರು ತಮ್ಮ ರಾಜಕೀಯ ಗುರು ಡಿಕೆ ಶಿವಕುಮಾರ್ ಅವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕಾಂಗ್ರೆಸ್‌ನ ಯುಟಿ ಖಾದರ್ ಸೇರಿದಂತೆ ಅನೇಕರು ಮತದಾರರ ಮೇಲೆ ಪ್ರಮಾಣ ಮಾಡಿದರು ಆದರೆ ಅದನ್ನು ದೇವರು ಅಥವಾ ಸಂವಿಧಾನದ ಹೆಸರಿನಲ್ಲಿ ಮಾಡುವಂತೆ ವಿಧಾನಸಭೆ ಕಾರ್ಯದರ್ಶಿ ನೆನಪಿಸಿದರು. ದಕ್ಷಿಣ ಕನ್ನಡದ ಭಾಗೀರಥಿ ಮುರುಳಿಯವರು ತಮ್ಮ ಕುಲದೇವತೆಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕೇಂದ್ರದ ಮಾಜಿ ಸಚಿವ ಹಾಗೂ ಕೋಲಾರದಿಂದ ಏಳು ಬಾರಿ ಸಂಸದರಾಗಿರುವ ಕೆ.ಎಚ್.ಮುನಿಯಪ್ಪ ಅವರು ವಿಧಾನಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಸಾಕಷ್ಟು ಸಂಭ್ರಮದಲ್ಲಿದ್ದ ಮಂಡ್ಯ ಶಾಸಕ ರವಿ ಗಾಣಿಗ ಎತ್ತಿನ ಬಂಡಿಯಲ್ಲಿ ವಿಧಾನಸೌಧಕ್ಕೆ ಆಗಮಿಸಿದರು.

ವಿರೋಧ ಪಕ್ಷದ ಸದಸ್ಯರಿಗೆ ಮೀಸಲಾದ ಲಾಂಜ್‌ನಲ್ಲಿ ಡಿಕೆ ಶಿವಕುಮಾರ್ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು. ಆಸನ ಹಂಚಿಕೆಯಾಗದ ಕಾರಣ ಶಾಸಕರು ಸದನದಲ್ಲಿ ತಮ್ಮ ಶಾಸಕ ಸ್ನೇಹಿತರ ಜತೆ ಕುಳಿತಿದ್ದರು. ಕೆಲವರು ಛಾಯಾಚಿತ್ರ ತೆಗೆಯುವುದರಲ್ಲಿ ನಿರತರಾಗಿದ್ದರು.

ಹೆಚ್ಚಿನವರು ತಮ್ಮ ಬಲಗಾಲನ್ನು ಮೊದಲು ಹಾಕುವ ಮೂಲಕ ಸದನವನ್ನು ಪ್ರವೇಶಿಸಲು ಪರಸ್ಪರ ಹೇಳುತ್ತಿದ್ದರು. ಯುವ ಶಾಸಕರು, ವಿಶೇಷವಾಗಿ ಮೊದಲ ಬಾರಿಗೆ ಆಯ್ಕೆಯಾದ  ಎಲ್ಲ ಪಕ್ಷಗಳ ಕಿರಿಯರು ಹಿರಿಯ ಶಾಸಕರ ಆಶೀರ್ವಾದ ಪಡೆದರು.

ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ದೇವರು ಮತ್ತು ಶಿವಕುಮಾರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಜೆಡಿಎಸ್ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್,‌ ಎಚ್ ಡಿ ದೇವೇಗೌಡ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಸೌಮ್ಯಾ ರೆಡ್ಡಿ ಅವರನ್ನು ಸೋಲಿಸಿದ ಸಿ.ಕೆ.ರಾಮಮೂರ್ತಿ ಸೌಮ್ಯಾ ತಂದೆ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ಆಶೀರ್ವಾದ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com